ಮಂಗಳವಾರ, ಜನವರಿ 28, 2020
17 °C
ಭದ್ರಾ ಎಜುಕೇಶನ್‌ ಟ್ರಸ್ಟ್‌ ದಶಮಾನೋತ್ಸವ

ಸ್ವಂತಿಕೆ ಕಳೆದುಕೊಂಡ ಯುವ ಸಮೂಹ: ಸಾಹಿತಿ ಲೋಕೇಶ್‌ ಅಗಸನಕಟ್ಟೆ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಇಂದಿನ ಯುವ ಸಮೂಹ ಸ್ವಂತ ಆಲೋಚನೆ ಮಾಡುವ ಶಕ್ತಿ ಕಳೆದುಕೊಳ್ಳುತ್ತಿದೆ. ಯಾರೋ ಹೇಳಿದ್ದನ್ನೇ ನಂಬಿಕೊಂಡು ಅವರನ್ನೇ ಅನುಸರಿಸುತ್ತಿದೆ’ ಎಂದು ಸಾಹಿತಿ ಡಾ. ಲೋಕೇಶ್‌ ಅಗಸನಕಟ್ಟೆ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾ ಎಜುಕೇಶನ್‌ ಟ್ರಸ್ಟ್‌ನ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂದು ನಡೆಯುತ್ತಿರುವ ಕೆಲವು ಚಳವಳಿಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ತಾವು ಯಾವ ವಿಷಯಕ್ಕಾಗಿ ಪ್ರತಿಭಟಿಸುತ್ತಿದ್ದೇವೆ ಎಂಬ ಅರಿವೇ ಇಲ್ಲ. ತಾವು ಮಾಡುತ್ತಿರುವ ಚಳವಳಿ ದೇಶವನ್ನು ಮುನ್ನಡೆಸುತ್ತದೆಯೋ ಅಥವಾ ಹಿಂದಕ್ಕೆ ಒಯ್ಯುತ್ತದೆಯೆಯೋ ಎಂದು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದ ಅವರು, ಮೈಸೂರು ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಈಚೆಗೆ ನಡೆದ ಪ್ರತಿಭಟನೆಯನ್ನೂ ಉಲ್ಲೇಖಿಸಿದರು.

‘ಚೀನಾದ ಕ್ರಾಂತಿಕಾರಿ ನಾಯಕ ಮಾವೊತ್ಸೆ ತುಂಗ್‌ ಅವರ ಪ್ರಕಾರ ಶೇ 10ರಷ್ಟು ಜನ ಮಾತ್ರ ಸ್ವತಂತ್ರವಾಗಿ ಆಲೋಚಿಸುತ್ತಾರೆ. ಉಳಿದವರು ಬೇರೆಯವರು ಹೇಳಿದ ಮಾತುಗಳನ್ನೇ ನಂಬುತ್ತಾರೆ. ಹೀಗಾಗಿ ಸ್ವಂತವಾಗಿ ಆಲೋಚಿಸುವ ಶೇ 10ರಷ್ಟು ಜನರಿಗೆ ಒಳ್ಳೆಯ ವಿಚಾರಗಳನ್ನು ಮನವರಿಕೆ ಮಾಡಿಕೊಟ್ಟರೆ ಉಳಿದವರಿಗೂ ಅದು ತಲುಪುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಶಿಕ್ಷಣದಿಂದ ವಿವೇಚನಾ ಶಕ್ತಿ, ವಿವೇಕ ಬರುತ್ತದೆ. ಇದು ಸಮನ್ವಯತೆಯಿಂದ ಬದುಕುವುದನ್ನು ಕಲಿಸುತ್ತದೆ; ನಿಮ್ಮೊಳಗಿನ ಪ್ರತಿಭೆಗಳನ್ನು ಅನಾವರಣಗೊಳಿಸುತ್ತದೆ. ಪ್ರತಿಯೊಬ್ಬನೂ ಸ್ವತಂತ್ರವಾಗಿ ಆಲೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ‘ಉನ್ನತ ಶಿಕ್ಷಣವು ಸಮಾಜದ ಜೀವರಕ್ಷಕ ರಕ್ತವಿದ್ದಂತೆ. ಕಸ್ತೂರಿ ರಂಗನ್‌ ವರದಿಯಲ್ಲೂ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗಬೇಕು ಎಂದು ಪ್ರತಿಪಾದಿಸಲಾಗಿದೆ. ನಳಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳಂತೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಬೇಕಾಗಿದೆ. ಯುವ ಜನತೆ ಭಾಷೆ, ಕಂಪ್ಯೂಟರ್‌ ಸೇರಿ ಹಲವು ಕೌಶಲಗಳನ್ನು ಹೊಂದಬೇಕು’ ಎಂದು ಹೇಳಿದರು.

ವಿಶ್ರಾಂತ ಕುಲಪತಿ ಪ್ರೊ. ಬಿ.ಎಸ್‌. ಶೇರಿಗಾರ್‌, ‘ದೇಶದಲ್ಲಿ 900ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿದ್ದು, ಇಂದು ಶಿಕ್ಷಣ ಸಾಕಷ್ಟು ಪ್ರಮಾಣದಲ್ಲಿ ಪ್ರಸರಣಗೊಳ್ಳುತ್ತಿದೆ. ಇದರ ಜೊತೆಗೆ ಗುಣಮಟ್ಟ ಹೆಚ್ಚಿಸುವುದಕ್ಕೂ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಸಿ.ಎಚ್‌. ಮುರಿಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಭದ್ರಾ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಟಿ. ಮುರುಗೇಶ್‌ ಅವರು ಶಿಕ್ಷಣ ಸಂಸ್ಥೆ ಬೆಳೆದು ಬಂದ ದಾರಿಯ ಮೇಲೆ ಬೆಳಕು ಚೆಲ್ಲಿದರು.

ಭದ್ರಾ ಎಜುಕೇಶನ್‌ ಟ್ರಸ್ಟ್‌ನ ಅಧ್ಯಕ್ಷ ಕೆ.ಜಿ. ಉಮೇಶ್‌, ಮ್ಯಾನೇಜಿಂಗ್‌ ಟ್ರಸ್ಟಿ ಎಂ. ಸಂಕೇತ್‌, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಯು. ಗುರುಸ್ವಾಮಿ ಹಾಜರಿದ್ದರು. ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

*

ಇಂದು ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ಬುದ್ಧಿಮತ್ತೆ ಹಾಗೂ ಸಾಮರ್ಥ್ಯವನ್ನು ಪ್ರದರ್ಶಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ.

– ಡಾ. ಲೋಕೇಶ್‌ ಅಗಸನಕಟ್ಟೆ, ಸಾಹಿತಿ

*

ಬುದ್ಧ, ಬಸವ, ಗಾಂಧಿಯ ಸಿದ್ಧಾಂತಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಇಂದಿರಾ ಗಾಂಧಿ, ನರೇಂದ್ರ ಮೋದಿ ಅವರ ವಿಚಾರಗಳನ್ನೂ ಅರ್ಥಮಾಡಿಕೊಳ್ಳಬೇಕು.

– ಪ್ರೊ. ಬಿ.ವಿ. ವೀರಭದ್ರಪ್ಪ, ಕುಲಪತಿ, ಕುವೆಂಪು ವಿಶ್ವವಿದ್ಯಾಲಯ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು