ಗುರುವಾರ , ಫೆಬ್ರವರಿ 27, 2020
19 °C

ಮೈಸೂರು ಮಾದರಿಯಲ್ಲಿ ಸಿಂಹಧಾಮ ಅಭಿವೃದ್ಧಿ: ಸಂಸದ ಬಿ. ವೈ. ರಾಘವೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮೈಸೂರು ಮೃಗಾಲಯದ ಮಾದರಿಯಲ್ಲಿ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ ಅಭಿವೃದ್ಧಿ ಪಡಿಸಲಾಗುವುದು. ಪ್ರಸ್ತುತ 80 ಹೆಕ್ಟೇರ್ ಇರುವ ಧಾಮವನ್ನು 250 ಹೆಕ್ಟೇರ್‌ಗೆ ವಿಸ್ತರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಮಾಹಿತಿ ನೀಡಿದರು.

ತ್ಯಾವರೆಕೊಪ್ಪ ಸಿಂಹಧಾಮದಲ್ಲಿ ಶುಕ್ರವಾರ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ರಾಜ್ಯದ ವಿಶೇಷ ಪ್ರಾಣಿ ಸಂಗ್ರಹಾಲಯವಾಗಿ ಸಿಂಹಧಾಮ ಅಭಿವೃದ್ಧಿ ಪಡಿಸಲು ಈಗಾಗಲೇ ಕೇಂದ್ರ ಸಚಿವ ಜಾವಡೇಕರ್ ಅವರಿಗೆ ಮನವಿ ಮಾಡಲಾಗಿದೆ. ಪ್ರಸ್ತುತ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಈ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಅತ್ಯುತ್ತಮ ಪ್ರವಾಸಿ ತಾಣವಾಗಿ ರೂಪಿಸಿದರೆ ಆದಾಯವೂ ವೃದ್ಧಿಸುತ್ತದೆ ಎಂದರು.

ಸಿಂಹಧಾಮ ಅಭಿವೃದ್ಧಿಗೆ ₹40ರಿಂದ 50 ಕೋಟಿ ಬೇಕಿದೆ. ಹಣ ಮಂಜೂರು ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತುತ ₹9 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ₹4 ಕೋಟಿ ವೆಚ್ಚದಲ್ಲಿ ವಿವಿಧ ಪ್ರಾಣಿಗಳ ಪಂಚರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ₹5 ಕೋಟಿ ವೆಚ್ಚದಲ್ಲಿ ಸಿಂಹಧಾಮದ ಇತರೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮಾರ್ಚ್ ಅಂತ್ಯದ ಒಳಗೆ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ. 13 ಪ್ರಾಣಿಗಳಿಗೆ ಹೊಸ ಜಾಗದಲ್ಲಿ ನೆಲೆಸಲು ಅವಕಾಶವಾಗಲಿದೆ ಎಂದು ವಿವರ ನೀಡಿದರು.

ಹುಲಿ-ಸಿಂಹಧಾಮದಲ್ಲಿ ವಿವಿಧ 67 ಜಾತಿಯ 450 ಪ್ರಾಣಿ, ಪಕ್ಷಿಗಳಿವೆ. ಅಭಿವೃದ್ಧಿ ನಂತರ ಇನ್ನಷ್ಟು ಹೆಚ್ಚಾಗಲಿವೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹20 ಕೋಟಿ ನೀಡಿದೆ. ₹10 ಕೋಟಿ ವೆಚ್ಚದಲ್ಲಿ ಜೋಗ ಅಭಿವೃದ್ಧಿ ಪಡಿಸಲಾಗುವುದು. ಅಕ್ಕಮಹಾದೇವಿಯ ಉಡುತಡಿ ಅಭಿವೃದ್ಧಿಗೆ ₹5 ಕೋಟಿ, ಹೊಸನಗರದ ಕೆಳದಿ ಕೋಟೆ ಅಭಿವೃದ್ಧಿಗೆ ₹1 ಕೋಟಿ ಕವಲೆದುರ್ಗಕ್ಕೆ ₹1 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ಸಂಸದರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು