ಶನಿವಾರ, ಅಕ್ಟೋಬರ್ 8, 2022
21 °C
ಬಸ್‌ ಕೊರತೆಯನ್ನು ತಾತ್ಕಾಲಿಕವಾಗಿ ನೀಗಿಸಿಕೊಳ್ಳಲು ಮುಂದಾದ ಸಂಸ್ಥೆ

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಗೆ ಬಿಎಂಟಿಸಿಯ100 ಬಸ್

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಣೆಗೆ ಬಸ್‌ಗಳ ಕೊರತೆಯನ್ನು ಎದುರಿಸುತ್ತಿರುವ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಹಳೆಯ 100 ಬಸ್‌ಗಳನ್ನು ನೀಡಲು ಮುಂದಾಗಿದೆ.

ನಷ್ಟದಲ್ಲೇ ನಡೆಯುತ್ತಿರುವ ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಹೊಸ ಬಸ್‌ಗಳನ್ನು ಖರೀದಿಸಿಲ್ಲ. ವರ್ಷದಿಂದ ವರ್ಷಕ್ಕೆ ಅವಧಿ ಮೀರಿದ ಬಸ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೊಸ ಬಸ್‌ಗಳ ಖರೀದಿಗೆ ಪ್ರಸ್ತಾವ ಸಲ್ಲಿಸಿದರೂ ಸರ್ಕಾರ ಅನುಮತಿ ನೀಡುತ್ತಿಲ್ಲ.

25 ಬಸ್ ಹಸ್ತಾಂತರ: ‘ಒಪ್ಪಂದದ ಮೇರೆಗೆ ತಾತ್ಕಾಲಿಕವಾಗಿ ಬಿಎಂಟಿಸಿ ನೂರು ಬಸ್‌ಗಳನ್ನು ಹಂತಹಂತವಾಗಿ ಹಸ್ತಾಂತರಿಸಲಿದೆ. ಸದ್ಯ 25 ಬಸ್‌ಗಳು ಹುಬ್ಬಳ್ಳಿಗೆ ಬಂದಿವೆ’ ಎಂದು ಸಂಸ್ಥೆಯ ಮುಖ್ಯ ಮೆಕ್ಯಾನಿಕಲ್ ಎಂಜಿನಿಯರ್ ಎಚ್‌.ಎಂ. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನೂ ಎರಡ್ಮೂರು ವರ್ಷಗಳ ಕಾರ್ಯಾಚರಣೆಯ ಸಾಮರ್ಥ್ಯ ಹೊಂದಿರುವ ಈ ಏರ್‌ ಸಸ್ಪೆನ್ಶನ್ ಬಸ್‌ಗಳನ್ನು ನಗರ ಸಾರಿಗೆಗೆ ಮಾತ್ರ ಬಳಸಬಹುದಾಗಿದೆ. ನಗರದಲ್ಲಿರುವ ಸಂಸ್ಥೆಯ ಕಾರ್ಯಾಗಾರದಲ್ಲಿ ಬಿಎಂಟಿಸಿ ಬಸ್‌ಗಳಿಗೆ ಮರು ಪೇಂಟಿಂಗ್ ಮತ್ತು ಸಂಸ್ಥೆಯ ಹೆಸರನ್ನು ಬರೆಸಲಾಗಿದೆ. ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಮತ್ತಷ್ಟು ಬಸ್‌ಗಳ ಅಗತ್ಯವಿರುವುದರಿಂದ ಆ ನಗರಗಳಿಗೆ ನಿಯೋಜಿಸಲಾಗಿದೆ’ ಎಂದು ಹೇಳಿದರು.

‘ಸಂಸ್ಥೆಗೆ 1,500 ಬಸ್‌ಗಳ ಅಗತ್ಯವಿದ್ದು, ಈಗಿರುವ ಪೈಕಿ ಶೇ 40ರಷ್ಟು ಬಸ್‌ಗಳನ್ನು ನಿಷ್ಕ್ರಿಯಗೊಳಿಸಬೇಕಿದೆ. ಪ್ರತಿ ವರ್ಷ 300ರಿಂದ 400 ಬಸ್‌ಗಳು ನಿಷ್ಕ್ರಿಯವಾಗುತ್ತವೆ. ಆದರೆ, ಕೋವಿಡ್–19 ಕಾರಣದಿಂದಾಗಿ ಎರಡು ವರ್ಷದಿಂದ ಆಗಿಲ್ಲ. ನಿಯಮದ ಪ್ರಕಾರ ಪ್ರಯಾಣಿಕ ವಾಹನಗಳನ್ನು ಹದಿನೈದು ವರ್ಷದವರೆಗೆ ಓಡಿಸಬಹುದು. ನಂತರ, ಅವುಗಳ ನಿರ್ವಹಣೆ ದುಬಾರಿಯಾಗುತ್ತದೆ. ಹಾಗಾಗಿ, ನಿಷ್ಕ್ರಿಯಗೊಳಿಸುವುದು ಅನಿವಾರ್ಯ’ ಎಂದು ತಿಳಿಸಿದರು.

‘ಹೊಸದಾಗಿ ಒಂದು ಸಾವಿರ ಬಸ್‌ಗಳ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹೊಸ ಬಸ್‌ಗಳು ಬರುವ ತನಕ, ಬಿಎಂಟಿಸಿ ಹಸ್ತಾಂತರಿಸಿರುವ ಬಸ್‌ಗಳನ್ನು ಓಡಿಸಲಾಗುವುದು’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು