ಭಾನುವಾರ, ಸೆಪ್ಟೆಂಬರ್ 19, 2021
29 °C
ಮನೆಯ ಹಿತ್ತಲ ಬಾಗಿಲ ಚಿಲಕ ಮುರಿದು ಕೃತ್ಯ ಎಸಗಿದ ಕಳ್ಳರು

₹13.40 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮನೆಯೊಂದರ ಹಿತ್ತಲ ಬಾಗಿಲ ಚಿಲಕ ಮುರಿದು ಒಳಕ್ಕೆ ನುಗ್ಗಿರುವ ಕಳ್ಳರು, ಅಂದಾಜು ₹13.40 ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆ. ಗೋಕುಲ ರಸ್ತೆಯ ನೆಹರೂ ನಗರದಲ್ಲಿರುವ ಮಧು ಶಶಿಧರ ನಾಶಿಪುಡಿ ಅವರ ಮನೆಯಲ್ಲಿ ಕೃತ್ಯ ನಡೆದಿದೆ.

ಹೆಸ್ಕಾಂ ಉದ್ಯೋಗಿಯಾಗಿರುವ ಮಧು ಅವರ ಪತಿ ಬೆಂಗಳೂರಿನಲ್ಲಿದ್ದು, ಅವರು ಪುತ್ರನೊಂದಿಗೆ ಮನೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಪುತ್ರನನ್ನು ಶಾಲೆಗೆ ಕಳಿಸಿ, ಮಧು ಅವರು ಕಚೇರಿಗೆ ಹೋಗಿದ್ದರು.

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿರುವ ಕಳ್ಳರು, 320 ಗ್ರಾಂ ಚಿನ್ನಾಭರಣ ಹಾಗೂ 1,520 ಗ್ರಾಂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಸಂಜೆ ಮಧು ಅವರು ಕಚೇರಿಯಿಂದ ಬಂದಾಗ ಕೃತ್ಯ ಗೊತ್ತಾಗಿದೆ ಎಂದು ಗೋಕುಲ ರಸ್ತೆ ಠಾಣೆ ಪೊಲೀಸರು ಹೇಳಿದರು.

ಮೇಲ್ನೋಟಕ್ಕೆ ಪರಿಚಿತರೇ ಪ್ಲಾನ್ ಮಾಡಿ ಕೃತ್ಯ ನಡೆಸಿರುವ ಶಂಕೆ ಇದೆ. ಮನೆ ಸಮೀಪ ಇರುವ ಸಿಸಿಟಿವಿ ಕ್ಯಾಮೆರಾ ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದ್ದು, ಕಳ್ಳರ ಬಗ್ಗೆ ಕೆಲ ಮಹತ್ವದ ಸುಳಿವು ಲಭ್ಯವಾಗಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಲಂಚ: ಖಜಾನೆ ಕಚೇರಿಯ ಇಬ್ಬರು ಎಸಿಬಿ ಬಲೆಗೆ 

ಹುಬ್ಬಳ್ಳಿ: ಪೊಲೀಸ್ ಇಲಾಖೆಯ ನಿವೃತ್ತ ಎಎಸ್‌ಐ ಅವರಿಂದ ಲಂಚ ಪಡೆಯುತ್ತಿದ್ದ, ಮಿನಿ ವಿಧಾನಸೌಧದಲ್ಲಿರುವ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕ (ಖಜಾನಾಧಿಕಾರಿ) ಪ್ರಕಾಶ ಎಸ್. ಹಳಪೇಟ ಹಾಗೂ ಪ್ರಥಮ ದರ್ಜೆ ಸಹಾಯಕ ಅಭಿಲಾಷ ಆಲೂರ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ವಯೋನಿವೃತ್ತಿ ಹೊಂದಿದ್ದ ಮಲ್ಲಣ್ಣ ದೇಸಾಯಿ ಅವರ ಡಿಸಿಆರ್‌ಜಿ (ನಿವೃತ್ತಿ ಮತ್ತು ಮರಣ ಉಪಧನ) ಮತ್ತು ಕಮ್ಯುಟೇಷನ್ ವೇತನ ಮಂಜೂರು ಆದೇಶ ಪತ್ರ ಹುಬ್ಬಳ್ಳಿಯ ಖಜಾನೆ ಕಚೇರಿಗೆ ಬಂದಿತ್ತು. ಈ ಕುರಿತು ವಿಚಾರಿಸಲು ನಾಲ್ಕೈದು ಸಲ ಕಚೇರಿಗೆ ಹೋಗಿದ್ದ ಮಲ್ಲಣ್ಣ ಅವರಿಗೆ ಆರೋಪಿಗಳು ನಾನಾ ಕಾರಣ ಹೇಳಿ ವಾಪಸ್ ಕಳಿಸಿದ್ದರು.

ಕೊನೆಗೆ ಹಣ ಮಂಜೂರು ಮಾಡಿ ಕೊಡಲು ₹10 ಸಾವಿರ ಲಂಚ ಕೇಳಿದ್ದ ಇಬ್ಬರೂ, ₹3 ಸಾವಿರಕ್ಕೆ ಕೆಲಸ ಮಾಡಲು ಒಪ್ಪಿಕೊಂಡಿದ್ದರು. ಆರೋಪಿಗಳು ಕೆಲಸ ಮುಗಿಸಿದ್ದರೂ, ಹಣ ಕೊಡದ ಮಲ್ಲಣ್ಣ ಅವರಿಗೆ ಪಿಂಚಣಿ ಪುಸ್ತಕ ಕೊಡದೆ ಸತಾಯಿಸುತ್ತಿದ್ದರು. ಈ ಕುರಿತು ಮಲ್ಲಣ್ಣ ಅವರು  ದೂರು ಕೊಟ್ಟಿದ್ದರು. ಅದರಂತೆ, ಆರೋಪಿ ಅಭಿಲಾಷ ಕಚೇರಿಯಲ್ಲಿ ಮಲ್ಲಣ್ಣ ಅವರಿಂದ ₹3 ಸಾವಿರ ಲಂಚ ಪಡೆಯುತ್ತಿದ್ದಾಗ ಬಂಧಿಸಲಾಯಿತು. ಬಳಿಕ, ಪ್ರಕಾಶ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.

ಡಿಎಸ್‌ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ವೀರಭದ್ರಪ್ಪ ಕಡಿ, ಅಲಿ ಶೇಖ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇಬ್ಬರ ಆತ್ಮಹತ್ಯೆ

ಉಣಕಲ್ ರೈಲು ನಿಲ್ದಾಣದ ಬಳಿ ಮಂಗಳವಾರ ಮಹೇಶ ಗುಂಜಾಳ (37) ಎಂಬುವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಲಿ ಕಾರ್ಮಿಕರಾಗಿದ್ದ ಮಹೇಶ ಅವರು ಗದಗ ಜಿಲ್ಲೆಯ ಸೊರಟೂರ ಗ್ರಾಮದವರಾಗಿದ್ದಾರೆ.

ನವಲೂರು–  ಧಾರವಾಡ ರೈಲು ನಿಲ್ದಾಣಗಳ ನಡುವೆ ಸಂಚರಿಸುವ ರೈಲಿಗೆ ಸಿಲುಕಿ ಫಕ್ಕೀರಪ್ಪ ಸೂರ್ಯವಂಶಿ (26) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವಲೂರ ಸಮೀಪದ ವಿಠ್ಠಲ ನಗರದ ಫಕ್ಕೀರಪ್ಪ ಕಾರು ಚಾಲಕರಾಗಿದ್ದರು. ಇಬ್ಬರ ಆತ್ಮಹತ್ಯೆಗೂ ಕಾರಣ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹುಬ್ಬಳ್ಳಿ ರೈಲ್ವೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅಂಗಡಿಗೆ ಬೆಂಕಿ

ನಗರದ ಕಾಟನ್ ಮಾರ್ಕೆಟ್‌ನಲ್ಲಿ ಶ್ರೀಧರ ಪೈಪ್ಸ್ ಅಂಗಡಿಯೊಂದರಲ್ಲಿ ಇತ್ತೀಚೆಗೆ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ತಗುಲಿದ್ದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಬೆಳಗ್ಗಿನ ಜಾವ 3.30ರ ಸುಮಾರಿಗೆ ಘಟನೆ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟೊತ್ತಿಗಾಗಲೇ ಬಹುತೇಕ ವಸ್ತುಗಳು ಸುಟ್ಟು ಹೋಗಿದ್ದವು ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.