ಜನತಾ ದರ್ಶನದಲ್ಲಿ ಒಟ್ಟು 125 ಅಹವಾಲುಗಳು ಸಲ್ಲಿಕೆಯಾಗಿವೆ. ಕಂದಾಯ 31 ಮಹಾನಗರ ಪಾಲಿಕೆ 26 ಜಿಲ್ಲಾ ಪಂಚಾಯಿತಿ 18 ಕಾರ್ಮಿಕ ಇಲಾಖೆ 16 ಪೊಲೀಸ್ ಇಲಾಖೆ 6 ಶಿಕ್ಷಣ ಇಲಾಖೆ 5 ಮತ್ತು ಇತರ23 ಅಹವಾಲು ಸಲ್ಲಿಕೆಯಾಗಿವೆ. ಪೋಡಿ ಸಮಸ್ಯೆ ದಾರಿ ಸಮಸ್ಯೆ ಅನಧಿಕೃತ ಕಟ್ಟಡ ಉದ್ಯೋಗ ಮೊದಲಾದವುಗಳಿಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾಗಿವೆ. ‘ಕಂಡಕ್ಟರ್ ಕೆಲಸ ಬೇಡ ಸೆಕ್ಯುರಿಟಿ ಗಾರ್ಡ್ ಕೆಲಸ ಕೊಡಿ’ ಎನ್‌ಡಬ್ಲುಕೆಆರ್‌ಟಿಸಿಯಲ್ಲಿ ಅನುಕಂಪ ಆಧಾರದ ಹುದ್ದೆಗೆ ಅರ್ಜಿ ಸಲ್ಲಿಸಿದವರೊಬ್ಬರು ಕಂಡಕ್ಟರ್ ಕೆಲಸ ಬೇಡ ಸೆಕ್ಯುರಿಟಿ ಕೆಲಸ ಕೊಡಿ ನನಗೆ ‘ಯುರಿಕ್ ಆಸಿಡ್’ ಸಮಸ್ಯೆ ಇದೆ ಎಂದು ಅಹವಾಲು ಸಲ್ಲಿಸಿದರು. ‘ಯುರಿಕ್ ಆಸಿಡ್ ಸಮಸ್ಯೆ ಇದ್ದರೆ ನೀರು ಕಡಿಮೆ ಕುಡಿಯಬೇಕು ಚಿಕನ್ ಮಟನ್ ತಿನ್ನಬಾರದು. ಕಂಡಕ್ಟರ್ ಆದ್ರೆ ಮಾರ್ಯಾದೆ ಹೋಗುತ್ತಾ? ಸರ್ಕಾರಿ ಕೆಲಸ ಸಿಕ್ಕಿದೆ ಒಪ್ಪಿಕೊಂಡು ಮಾಡಿ. ಇಲ್ಲದಿದ್ದರೆ ಸೆಕ್ಯುರಿಟಿ ಕೆಲಸ ಸಿಗುವವರೆಗೆ ಕಾಯಿರಿ’ ಎಂದು ಸಂತೋಷ್ ಲಾಡ್ ತಿಳಿಸಿದರು. ಮೂಲಸೌಕರ್ಯಕ್ಕೆ ಮೊರೆ: ಹುಬ್ಬಳ್ಳಿಯ ಕನ್ಯಾನಗರದಲ್ಲಿ 209 ಕುಟುಂಬಗಳಿವೆ. ನಮಗೆ ಹಕ್ಕುಪತ್ರ ನೀಡಿಲ್ಲ ಈ ಪ್ರದೇಶದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂದು ನಿವಾಸಿಗಳು ಮನವಿ ಮಾಡಿದರು. ಪರಿಶೀಲಿಸಿ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸುವುದಾಗಿ ತಿಳಿಸಿದರು. ‘ಹಾರ್ಮೊನ್ ಗ್ರೋಥ್’ ಚುಚ್ಚುಮದ್ದು ಕೊಡಿಸಲು ಮನವಿ: ‘ಎಂಟು ವರ್ಷದ ಪುತ್ರಿಗೆ ಹಾರ್ಮೊನ್ ಗ್ರೋಥ್ ಚುಚ್ಚುಮದ್ದು ಕೊಡಿಸಬೇಕಿದೆ. ಕಳೆದ ಜನತಾ ದರ್ಶನದಲ್ಲಿ ಚುಚ್ಚುಮದ್ದು ನೀಡಲು ತಿಳಿಸಿದರೂ ಸಂಬಂಧಪಟ್ಟವರು ಕ್ರಮ ವಹಿಸಿಲ್ಲ’ ಎಂದು ಭೈರಿದೇವರಕೊಪ್ಪದ ಸಂತೋಷ ಮನವಿ ಮಾಡಿದರು. ಸಂತೋಷ್ ಲಾಡ್ ಅವರು ಕಿಮ್ಸ್ ನಿರ್ದೇಶಕರಿಗೆ ಫೋನ್‌ನಲ್ಲಿ ಮಾತನಾಡಿದರು. ಚುಚ್ಚುಮದ್ದು ಕೊಡಿಸಲು ಸೂಚನೆ ನೀಡುವುದಾಗಿ ಅವರಿಗೆ ಸಚಿವ ಲಾಡ್ ತಿಳಿಸಿದರು.