ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

42 ದಿನಗಳ ನಂತರ ಮದ್ಯದಂಗಡಿ ಆರಂಭ

ಜಿಲ್ಲೆಯಲ್ಲಿ ಇಂದಿನಿಂದ ಸೀಮಿತ ಅಂಗಡಿಗಳಲ್ಲಿ ಮಾರಾಟಕ್ಕೆ ಅವಕಾಶ
Last Updated 4 ಮೇ 2020, 10:40 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್–19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಾದ ಲಾಕ್‌ಡೌನ್‌ ಅವಧಿಯಲ್ಲಿ ಬಾಗಿಲು ಹಾಕಿದ್ದ ಮದ್ಯದ ಅಂಗಡಿಗಳು, 42 ದಿನಗಳ ನಂತರ ಸೋಮವಾರದಿಂದ ಕಾರ್ಯಾರಂಭ ಮಾಡಲಿವೆ.

ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್–19 ಪ್ರಕರಣದ ನಂತರ ಮಾರ್ಚ್‌ 21ರಿಂದ ಮದ್ಯದ ಅಂಗಡಿಗಳು ಹಾಗೂ ಬಾರ್‌ಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದರು. ಮೇ 17ರ ತನಕ ಮೂರನೇ ಅವಧಿಗೆ ವಿಸ್ತರಣೆಯಾದ ಲಾಕ್‌ಡೌನ್‌ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಎಂಎಸ್‌ಐಎಲ್ ಮತ್ತು ಸಿಎಲ್‌–2 ಪರವಾನಗಿ ಹೊಂದಿರುವ 98 ಅಂಗಡಿಗಳನ್ನು ಜಿಲ್ಲೆಯಲ್ಲಿ ತೆರೆಯಲು ಅನುಮತಿ ನೀಡಲಾಗಿದೆ.

ಮುಂಜಾಗ್ರತೆ ವಹಿಸಿ ಅಂತರ ಕಾಯ್ದುಕೊಂಡು ಮದ್ಯ ಮಾರಾಟ ಮಾಡಲು ಅಂಗಡಿಗಳ ಮಾಲೀಕರು ಭಾನುವಾರ ಬೆಳಿಗ್ಗೆಯಿಂದಲೇ ಸಿದ್ಧತೆ ನಡೆಸಿದ್ದರು. ಅಂಗಡಿಗಳ ಮುಂದೆ ಚೌಕಾಕಾರದಲ್ಲಿ ಗುರುತು ಹಾಕುತ್ತಿದ್ದ ಚಿತ್ರಣ ಕಂಡುಬಂತು.

ಈ ಕುರಿತು ಪ್ರತಿಕ್ರಿಯಿಸಿದ ಅಬಕಾರಿ ಇಲಾಖೆ ಉಪ ಆಯುಕ್ತ ಶಿವನಗೌಡ ಪಾಟೀಲ ‘ಸರಾಸರಿಯಾಗಿ ಜಿಲ್ಲೆಯಲ್ಲಿ 1.2 ಲಕ್ಷ ಬಾಕ್ಸ್‌‌ ಮದ್ಯ ಮಾರಾಟವಾಗಲಿದೆ. ಆದರೆ ಈ ತಿಂಗಳು ಮದ್ಯ ಮಾರಾಟದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದರು.

ಬಾರ್‌ಗಳಿಗೆ ನಷ್ಟ

ಮದ್ಯ ಮಾರಾಟ ಮಳಿಗೆ ಹೊಂದಿರುವ ಉದ್ಯಮಿ ಮಹೇಶ ಶೆಟ್ಟಿ ಪ್ರತಿಕ್ರಿಯಿಸಿ, ‘ಎಂಆರ್‌ಪಿ ಮಳಿಗೆಗಳಿಗೆ ಮಾತ್ರ ಅವಕಾಶವಿರುವ ಈ ಆದೇಶದಿಂದ ಬಾರುಗಳಿಗೆ ತೀವ್ರವಾಗಿ ನಷ್ಟವಾಗಲಿದೆ. ಬಾರುಗಳಲ್ಲಿ ಈ ಹಿಂದೆ ಖರೀದಿಸಿದ ಸಾಕಷ್ಟು ಬಿಯರ್ ದಾಸ್ತಾನು ಇದೆ. ಇವುಗಳನ್ನು ಆರು ತಿಂಗಳ ಒಳಗಾಗಿ ಮಾರಾಟ ಮಾಡಬೇಕು. ಬಾರುಗಳಿಗೂ ಪಾರ್ಸಲ್ ನೀಡಲು ಅವಕಾಶ ನೀಡಬೇಕು. ಇಲ್ಲವೇಅಲ್ಲಿರುವ ದಾಸ್ತಾನುಗಳನ್ನು ಇಲಾಖೆಯ ಡಿಪೊಗೆ ವಾಪಸ್‌ ಕೊಡಲು ಅವಕಾಶ ಕಲ್ಪಿಸಬೇಕು. ಇದರಿಂದ ಬಾರ್ ಮಾಲೀಕರಿಗೆ ಆಗುವ ನಷ್ಟವನ್ನು ತಪ್ಪಿಸಿದಂತಾಗಲಿದೆ’ ಎಂದು ಒತ್ತಾಯಿಸಿದರು.

ಖಜಾನೆ ತುಂಬಿಸಿಕೊಳ್ಳಲು ಸಿದ್ಧತೆ

ಹುಬ್ಬಳ್ಳಿ: ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿರುವುದರಿಂದ ನಗರದಲ್ಲಿಯೂ ಭಾನುವಾರ ತಯಾರಿ ಮಾಡಿಕೊಳ್ಳುವ ಚಿತ್ರಣ ಕಂಡುಬಂತು.

ನಗರದ ಕಾಟನ್‌ ಮಾರ್ಕೆಟ್‌ನ ಎಂಎಸ್‌ಐಎಲ್‌ನ ಮುಂದೆ ನೂಕು ನುಗ್ಗಲು ಉಂಟಾಗದಂತೆ ಎಚ್ಚರ ವಹಿಸಲು ಹಾಗೂ ಅಂತರ ಕಾಯ್ದುಕೊಳ್ಳಲು ನೆರವಾಗಲು ಬ್ಯಾರಿಕೇಡ್‌ ಹಾಕಲಾಗುತ್ತಿತ್ತು. ಕೆಲ ಎಂಎಸ್‌ಐಎಲ್‌ಗಳಲ್ಲಿ ಪೂಜೆ ಸಲ್ಲಿಸಲು ಸಿದ್ಧತೆ ಕೂಡ ನಡೆದಿದ್ದವು.

‘ಅಂತರ ಕಾಯ್ದುಕೊಂಡು ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೊದಲು ತಿಂಗಳಿಗೆ ₹50ರಿಂದ ₹60 ಲಕ್ಷ ವಹಿವಾಟು ನಡೆಯುತ್ತಿತ್ತು. ಈಗ ಆರಂಭದ ಎರಡ್ಮೂರು ದಿನ ಹೆಚ್ಚು ವ್ಯಾಪಾರವಾಗುವ ನಿರೀಕ್ಷೆಯಿದೆ’ ಎಂದು ಕರ್ನಾಟಕ ವೈನ್‌ ಮಾರ್ಟ್‌ ಮಾಲೀಕ ವಿನಾಯಕ ಆಕಳವಾಡಿ ತಿಳಿಸಿದರು.

ಲಾಕ್‌ಡೌನ್‌ ಸಮಯದಲ್ಲಿ ನಯಾ ಪೈಸೆ ವ್ಯಾಪಾರ ಇಲ್ಲದಿದ್ದರೂ, ನಮ್ಮ ಅಂಗಡಿಯ ಸಿಬ್ಬಂದಿಗೆ ಸಂಬಳ ಕೊಟ್ಟಿದ್ದೇನೆ. ಇದೇ ಪರಿಸ್ಥಿತಿ ಮುಂದುವರಿಸಲು ವೇತನ ಕೊಡುವುದು ಕಷ್ಟವಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT