ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸಂಸ್ಥೆಗೆ ವಾರಾಂತ್ಯ ಕರ್ಫ್ಯೂ ಬಿಸಿ

Last Updated 21 ಜನವರಿ 2022, 8:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಳೆದೆರಡು ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮೂರನೇ ಅಲೆಯ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಷ್ಟದ ಸುಳಿಗೆ ಸಿಲುಕಿರುವ ಸಂಸ್ಥೆಗೆ ಕೋವಿಡ್‌ ಎರಡನೇ ಅಲೆಯ ನಂತರ ದಿನಗಳಲ್ಲಿ ಸಿಬ್ಬಂದಿಗೆ ವೇತನ ಹೊಂದಿಸುವುದೇ ಸವಾಲಾಗಿದೆ. ಆರಂಭದಲ್ಲಿ ಅರ್ಧ ತಿಂಗಳ ವೇತನವಷ್ಟೇ ನೀಡಿ, ನಂತರದಲ್ಲಿ ಉಳಿದ ವೇತನ ಬಿಡುಗಡೆ ಮಾಡಲಾಗುತ್ತಿದೆ. ನಿವೃತ್ತ ನೌಕರರ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಿಗೆ ಪಾವತಿಸಬೇಕಿದ್ದ ಮೊತ್ತವನ್ನು ಬಾಕಿ ಉಳಿಸಿಕೊಂಡಿದೆ.

ಸಂಸ್ಥೆಯಲ್ಲಿ 21 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಎಲ್ಲ ಸಿಬ್ಬಂದಿಗೆ ಆಗಸ್ಟ್ ತಿಂಗಳಿನಿಂದ ಆರಂಭದಲ್ಲಿ ಅರ್ಧ ತಿಂಗಳ ವೇತನ ನೀಡಲಾಗುತ್ತಿದೆ. ನಂತರದಲ್ಲಿ ಉಳಿದ ಮೊತ್ತ ಪಾವತಿಸಲಾಗುತ್ತಿದೆ. ಈಗ ನವೆಂಬರ್‌ ಹಾಗೂ ಡಿಸೆಂಬರ್‌ನ ಅರ್ಧ ತಿಂಗಳ ಮಾತ್ರ ವೇತನ ಬಿಡುಗಡೆಯಾಗಿದ್ದು, ಉಳಿದ ಮೊತ್ತ ಸಿಗಬೇಕಿದೆ. ಇದರಿಂದಾಗಿ ಅಷ್ಟು ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.

ವಾರಾಂತ್ಯದ ನಷ್ಟ: ಕೋವಿಡ್‌ ಮೂರನೇ ಅಲೆ ಆರಂಭದ ನಂತರ ಸ್ವಲ್ಪ ಮಟ್ಟಿಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಎರಡು ವಾರಗಳಿಂದ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ ನಂತರ ಶನಿವಾರ, ರವಿವಾರ ಶೇ 10 ರಿಂದ 20 ರಷ್ಟು ಬಸ್‌ಗಳು ಮಾತ್ರ ಕಾರ್ಯಾಚರಣೆ ನಡೆಸುತ್ತಿವೆ. ಇದರ ಪರಿಣಾಮ ವಾರಾಂತ್ಯದ ಮುನ್ನಾ ದಿನ ಶುಕ್ರವಾರ ಹಾಗೂ ಸೋಮವಾರವೂ ಆಗುತ್ತಿದೆ.

ನಿತ್ಯ ₹3.5 ಕೋಟಿಯಿಂದ ₹4.05 ಕೋಟಿಯವರೆಗೆ ಸಂಗ್ರಹವಾಗುತ್ತದೆ. ಶನಿವಾರ ಹಾಗೂ ಭಾನುವಾರ ₹1.5 ಕೋಟಿ ಮಾತ್ರ ಸಂಗ್ರಹವಾಗುತ್ತಿದೆ. ಇದರಿಂದಾಗಿ ಸಂಸ್ಥೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ಮಹಾರಾಷ್ಟ್ರ ಸಂಚಾರ ಬಂದ್: ಮಹಾರಾಷ್ಟ್ರದ ಸಾರಿಗೆ ಸಂಸ್ಥೆ ಸಿಬ್ಬಂದಿ ಮುಷ್ಕರ ಮಾಡುತ್ತಿರುವುದರ ಪರಿಣಾಮ ಕೋವಿಡ್‌ಗಿಂತ ಮುಂಚಿತವಾಗಿಯೇ ಮೂರು ತಿಂಗಳಿಂದ ವಾಯವ್ಯ ಕರ್ನಾಟಕದ 400ಕ್ಕೂ ಹೆಚ್ಚು ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ.ಕೋವಿಡ್‌ ನಂತರ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಅಲ್ಲಿಂದ ಬರುವವರಿಗೆ ಆರ್‌ಟಿಪಿಸಿಆರ್‌ ಕಡ್ಡಾಯಗೊಳಿಸಿರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದೆ.

ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡಿದ್ದ ಬಸ್‌ ಪಾಸ್‌ ಹಣ ಬಿಡುಗಡೆ ಮಾಡಿರುವುದರಿಂದ ನೌಕರರಿಗೆ ವೇತನ ಪಾವತಿಸಲು ಸಾಧ್ಯವಾಗಿದೆ ಎನ್ನುತ್ತಾರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ.

ಸಂಸ್ಥೆಯ ಸಿಬ್ಬಂದಿ ವೇತನ ಪಾವತಿಗಾಗಿ ರಾಜ್ಯ ಸರ್ಕಾರಕ್ಕೆ ₹200 ನೆರವು ಕೇಳಲಾಗಿದೆ. ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಿದೆ
ಗುರುದತ್ತ ಹೆಗಡೆ, ವ್ಯವಸ್ಥಾಪಕ ನಿರ್ದೇಶಕ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT