ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಜಲಿ ಹತ್ಯೆ: ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ– ಮೂರು ಸಾವಿರ ಮಠದ ಶ್ರೀ

Published 16 ಮೇ 2024, 7:23 IST
Last Updated 16 ಮೇ 2024, 7:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಂಜಲಿ ಅಂಬಿಗೇರ ಅವರನ್ನು ಅಮಾನುಷವಾಗಿ ಹತ್ಯೆ ಮಾಡಿದ್ದು ಖಂಡನೀಯ. ಇದು ಅತ್ಯಂತ ದಾರುಣವಾದ ಘಟನೆ. ಆರೋಪಿ ಮನೆಗೆ‌ ನುಗ್ಗಿ ಕೊಲೆ ಮಾಡಿ ಹೋಗುತ್ತಾನೆ ಎಂದರೆ ಈ ನೆಲದ ಕಾನೂನಿಗೆ ಬೆಲೆ‌ ಇಲ್ಲದಂತಾಗಿದೆ’ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ‌ ನೆಲದ ಕಾನೂನಿನ ಮೇಲಿನ ಗೌರವ ಉಳಿಯಬೇಕಾದರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು, ಜನರಿಗೆ ಸುರಕ್ಷತೆ ಇದೆ ಎಂದು ತೋರಿಸಿ ಕೊಡಬೇಕು’ ಎಂದು ಆಗ್ರಹಿಸಿದರು.

‘ಇಂತಹ ಪರಿಸ್ಥಿತಿಯಲ್ಲಿ ಕೊಲೆಯಾದ ಯುವತಿ ಕುಟುಂಬಕ್ಕೆ ಇಡೀ ಸಮಾಜ ಬೆಂಬಲಕ್ಕೆ ನಿಂತಿದೆ. ಸರ್ಕಾರ ಸಹ ಬದ್ಧತೆ ತೋರಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು’ ಎಂದರು.

‘ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣ ಆರೋಪಿಯ ಮೇಲೆ ಪ್ರಭಾವ ಬೀರಿರಬಹುದು. ಇಲ್ಲ ಎಂದು ಹೇಳಲಾಗುವುದಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ನೋಡಿಕೊಳ್ಳಬೇಕು. ಕಾನೂನಿಗೆ ಬೆಲೆ‌ ಇದೆ ಎಂದು ತೋರಿಸಬೇಕು’ ಎಂದು ಹೇಳಿದರು.

‘ಅಂಜಲಿ ಅವರ ಸಹೋದರಿಯರಿಗೆ ಮೂರು ಸಾವಿರ ಮಠದ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡಲಾಗುವುದು’ ಎಂದು ವಾಗ್ದಾನ ನೀಡಿದರು.

ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಬಿಜಕಲ್ ವಿರಕ್ತ ಮಠದ ಶಿವಲಿಂಗ ಸ್ವಾಮೀಜಿ, ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅವರು ಅಂಜಲಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT