ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ವರ್ಷವಾದರೂ ಪೂರ್ಣಗೊಳ್ಳದ ವಸತಿ ಮನೆಗಳ ನಿರ್ಮಾಣ: ಫಲಾನುಭವಿಗಳ ಬದುಕು ಬೀದಿಗೆ

Last Updated 19 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹೊಸ ಮನೆಗಾಗಿ ಹಳೇ ಜೋಪಡಿ ಮನೆಗಳನ್ನು ಕೆಡವಿ ಬಾಡಿಗೆ ಮನೆ ಸೇರಿಕೊಂಡೆವು. ಆರು ತಿಂಗಳಲ್ಲಿ ಮನೆ ನಿರ್ಮಿಸಿ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ, ಮೂರು ವರ್ಷವಾದರೂ ಮನೆ ಪೂರ್ಣಗೊಂಡಿಲ್ಲ. ಈಗ ದುಡಿಯಲು ಸರಿಯಾಗಿ ಕೆಲಸವೂ ಇಲ್ಲದೆ, ಅತ್ತ ಮನೆ ಬಾಡಿಗೆಯನ್ನು ಕಟ್ಟಲಾಗದೆ ನಮ್ಮ ಬದುಕು ಬೀದಿಗೆ ಬಂದಿದೆ...’

–ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಹೊಸ ಮನೆ ಕನಸು ಕಾಣುತ್ತಿರುವಇಲ್ಲಿನ ಗಿರಣಿಚಾಳ ಕೊಳೆಗೇರಿಯ ಫಲಾನುಭವಿಗಳ ಅಳಲು ಇದು.

ಯೋಜನೆಯ ‘ಸರ್ವರಿಗೂ ಸೂರು’ ಕಾರ್ಯಕ್ರಮದಡಿ, ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿಯು, ಗಿರಣಿಚಾಳದಲ್ಲಿ 120 ಮನೆಗಳ ನಿರ್ಮಾಣಕ್ಕೆ 2017ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿತ್ತು. ಈ ಪೈಕಿ, ನಡೆಯುತ್ತಿರುವ 75 ಮನೆಗಳ ನಿರ್ಮಾಣ ಕೆಲಸವೂ ಕುಂಟುತ್ತಾ ಸಾಗಿದೆ.

ಬಾಡಿಗೆ ಮನೆಯಲ್ಲಿ ದಿನದೂಡುತ್ತಿರುವ ಫಲಾನುಭವಿಗಳ ಬದುಕು, ಕೊರೊನಾದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಬೇಸತ್ತಿರುವ ಫಲಾನುಭವಿಗಳು, ಹೊಸ ಮನೆ ಕನಸು ಯಾವಾಗ ನನಸಾಗುತ್ತದೊ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಗೋಳು ಕೇಳೋರ‍್ಯಾರು

‘ಕೂಲಿ ಕೆಲಸ ಮಾಡುವ ನಾವು, ಹೊಸ ಮನೆಯ ಕನಸು ಹೊತ್ತು ಎರಡೂವರೆ ವರ್ಷದ ಹಿಂದೆ ಬಾಡಿಗೆ ಮನೆಗೆ ಬಂದಿದ್ದೇವೆ. ಬಾಡಿಗೆ ಕಟ್ಟುವುದೇ ದೊಡ್ಡ ಸವಾಲಾಗಿದೆ. ನಮ್ಮ ಗೋಳು ಕೇಳೋರ‍್ಯಾರು’ ಎಂದು ಫಲಾನುಭವಿಗಳಾದ ಮೈಲಮ್ಮ ಗಂಗೂರು, ದೇವವ್ವ ಒಗರನಾಳ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಲಾಕ್‌ಡೌನ್‌ ಜಾರಿಯಾದಾಗಿನಿಂದ ಈಗಿನವರೆಗೆ ಸರಿಯಾಗಿ ಕೆಲಸವೂ ಇಲ್ಲ. ಚಿನ್ನಾಭರಣ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳನ್ನು ಮಾರಿ ಬಾಡಿಗೆ ಕಟ್ಟಿದ್ದೇವೆ. ವಾಸಯೋಗ್ಯವಿಲ್ಲದ ಮನೆಗೂ ಹೋಗುವ ಹಾಗಿಲ್ಲ. ಇತ್ತ ಬಾಡಿಗೆ ಕಟ್ಟುವ ಸಾಮರ್ಥ್ಯವೂ ಇಲ್ಲದೆ ತ್ರಿಶಂಕು ಸ್ಥಿತಿಗೆ ಸಿಲುಕಿದ್ದೇವೆ’ ಎಂದು ದುರ್ಗಪ್ಪ ಪೂಜಾರ, ಗುರುನಾಥ ಮದ್ದರಿ, ಸದಾಶಿವ ಕುರಿ ಪರಿಸ್ಥಿತಿ ಬಿಚ್ಚಿಟ್ಟರು.

ಮನವಿ, ಪ್ರತಿಭಟನೆಗೂ ಸ್ಪಂದಿಸಿಲ್ಲ

‘ಮನೆ ನಿರ್ಮಾಣ ಕಾಮಗಾರಿಯನ್ನು ಬೇಗನೆ ಮುಗಿಸಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಜಿಲ್ಲಾಧಿಕಾರಿ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು ಸೇರಿದಂತೆ ಹಲವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಧಾರವಾಡ ಡಿ.ಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರೂ ನಮ್ಮ ಬೇಡಿಕೆಗೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ’ ಎಂದು ಕಣ್ಣೀರಿಟ್ಟರು.

‘ಮೂರು ತಿಂಗಳೊಳಗೆ ಪೂರ್ಣ’

‘ಗಿರಣಿಚಾಳದಲ್ಲಿ ಮೊದಲ ಹಂತದಲ್ಲಿ 75 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾರ್ಮಿಕರ ಕೊರತೆ ಹಾಗೂ ಕೊರೊನಾ ಸೋಂಕಿನಿಂದಾಗಿ ಕೆಲಸ ವಿಳಂಬವಾಯಿತು. ಈಗ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಿದ್ದು, ಮೂರು ತಿಂಗಳೊಳಗೆ ಮುಗಿಸಲಾಗುವುದು. ಬಳಿಕ, ಉಳಿದ ಮನೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ಎಂದು ಕೊಳಚೆ ನಿರ್ಮೂಲನಾ ಮಂಡಳಿಯ ಸಹಾಯಕ ಎಂಜಿನಿಯರ್ ಸುರೇಶ ಹಿರೇಮಠ ‘ಪ್ರಜಾವಾಣಿ’ ತಿಳಿಸಿದರು.

***

ಮನೆ ನಿರ್ಮಾಣ ವಿಳಂಬದ ಜತೆಗೆ, ಕಳಪೆ ಗುಣಮಟ್ಟದ ಕಟ್ಟಡ ಸಾಮಗ್ರಿಗಳನ್ನು ಗುತ್ತಿಗೆದಾರರು ಬಳಸುತ್ತಿದ್ದಾರೆ. ಗುಣಮಟ್ಟದ ಬಗ್ಗೆ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ

– ಜಾಕೀರ್ ಕಲಾಲ್, ಫಲಾನುಭವಿ, ಗಿರಣಿಚಾಳ

***

HUಕೂಲಿ ಮಾಡಿ ಸಂಸಾರ ನೋಡಿಕೊಳ್ಳುವುದೇ ಕಷ್ಟ. ಅಂತಹದ್ದರಲ್ಲಿ ಬಾಡಿಗೆ ಮನೆಗೆ ಬಂದು ನಮ್ಮ ಬದುಕು ದುಸ್ಥರವಾಗಿದೆ. ದಯವಿಟ್ಟು ಬೇಗನೆ ನಿರ್ಮಿಸಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ
– ನಿಂಗವ್ವ ಲಾದುಂಚಿ, ಫಲಾನುಭವಿ, ಗಿರಣಿಚಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT