ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಪ್ರಜಾವಾಣಿ 75ರ ಸಂಭ್ರಮ: ‘ಬಣ್ಣ’ದಲ್ಲಿ ಮಿಂದೆದ್ದ ಚಿಣ್ಣರು...

‘ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌’ ಆಯೋಜಿತ ಚಿತ್ರಕಲಾ ಸ್ಪರ್ಧೆ
Last Updated 24 ಫೆಬ್ರುವರಿ 2023, 3:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಿಗ್ಗೆ 9 ಗಂಟೆಯಿಂದಲೇ ತಂಡೋಪತಂಡವಾಗಿ ಬಂದ ವಿದ್ಯಾರ್ಥಿ ಸಮೂಹ... ನೂರಾರು ವಿದ್ಯಾರ್ಥಿಗಳ ಕಂಗಳಲ್ಲಿ ಕಾತುರ, ಉತ್ಸಾಹ, ಹುಮ್ಮಸ್ಸು... ತದೇಕಚಿತ್ತದಿಂದ ಚಿತ್ರ ಮೂಡಿಸುತ್ತಿರುವಾಗಲೇ ನಡುನಡುವೆ ಕೀಟಲೆ, ಗಲಾಟೆ, ಗುಸುಗುಸು...

‘ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌’ ಅಮೃತಮಹೋತ್ಸವದ ಅಂಗವಾಗಿ ನಗರದ ಇಂದಿರಾ ಗಾಜಿನ ಮನೆಯಲ್ಲಿ ಗುರುವಾರ ಆಯೋಜಿಸಿದ್ದ ‘ಬಣ್ಣ–2023’ ನಲಿಯುತ್ತ ಕಲಿಯುವ ವೇದಿಕೆ–ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯಗಳಿವು.

ಈ ವಿಶೇಷ ಕಾರ್ಯಕ್ರಮಕ್ಕೆ ರೆವಲ್ಯೂಷನ್ ಮೈಂಡ್ಸ್, ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಹಾಗೂ ಸ್ವರ್ಣ ಸಮೂಹ ಸಂಸ್ಥೆ ಸಾಥ್ ನೀಡಿದ್ದವು. ಪಠ್ಯ ಆಧಾರಿತ ವಿಷಯಗಳನ್ನೇ ಸುಂದರ ಚಿತ್ರಗಳಾಗಿ ಮೂಡಿಸುವ ಪರಿಕಲ್ಪನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಸ್ಪರ್ಧೆ ಆರಂಭವಾಗುವುದಕ್ಕೆ ಮುನ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಾ ಮುಂದು, ತಾ ಮುಂದೆ ಎಂದು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಹಾಡು, ಒಗಟು ಬಿಡಿಸಿ, ಕತೆ ಹೇಳಿ ಇತರ ಮಕ್ಕಳನ್ನು ರಂಜಿಸಿದರು, ತಾವೂ ನಕ್ಕು–ನಲಿದರು. ಮಕ್ಕಳೊಡನೆ ಶಾಲಾ ಶಿಕ್ಷಕರು, ಪೋಷಕರು, ಚಿತ್ರಕಲೆಗೆ ಪೂರಕ ವಸ್ತು, ವಿಷಯಗಳನ್ನು ಮಕ್ಕಳಿಗೆ ನೆನಪಿಸುತ್ತಲೇ, ‘ಚೆನ್ನಾಗಿ ಬರೀರಿ... ಗಾಬರಿ ಮಾಡಿಕೊಳ್ಬೇಡ್ರಿ’ ಎಂದು ಧೈರ್ಯ ತುಂಬಿದರು. ಸ್ಪರ್ಧೆ ಮುಗಿಯುವವರಿಗೆ ಉತ್ಸುಕತೆಯಿಂದ ಕಾಯುತ್ತಿದ್ದರು.

ಒಂದರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ‘ಭೂಮಿ ಉಳಿಸಿ’ (Save earth) ಹಾಗೂ 6ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಜೀವವಿಜ್ಞಾನ ಪಠ್ಯದಲ್ಲಿನ ಯಾವುದಾದರೂ ವಿಷಯದ ಬಗ್ಗೆ ಚಿತ್ರ ಮೂಡಿಸಲು ತಿಳಿಸಲಾಗಿತ್ತು. ಹಾಳೆ ಹಾಗೂ ಬಣ್ಣದ ಪೆನ್ಸಿಲ್‌ಗಳನ್ನು ಆಯೋಜಕರ ಕಡೆಯಿಂದ ನೀಡಲಾಗಿತ್ತು. ಕೆಲವರು ಜಲ ವರ್ಣ, ಸ್ಕೆಚ್‌ಪೆನ್‌ಗಳನ್ನು ಬಳಸಿ, ತಾವು ಅಭ್ಯಾಸ ಮಾಡಿದಂತೆ ಚಿತ್ರ ಬರೆದರು. ಒಂದೂವರೆ ಗಂಟೆಯಲ್ಲಿ ಮಕ್ಕಳ ಮನಸ್ಸಿನ ಚಿತ್ರಗಳು ಹಾಳೆಗಳಲ್ಲಿ ಜೀವ ತಳೆದವು.

ಬಳಿಕ ನಡೆದ ‘ಕತೆ ಹೇಳುವೆ ಕಂದಾ’ ಕಾರ್ಯಕ್ರಮದಲ್ಲಿ ‘ಪ್ರಜಾವಾಣಿ’ ಹುಬ್ಬಳ್ಳಿ ಬ್ಯುರೊ ಮುಖ್ಯಸ್ಥೆ ರಶ್ಮಿ ಎಸ್‌. ಮಕ್ಕಳಿಗೆ ಕತೆ ಹೇಳುತ್ತ, ಜಾಗೃತಿಯನ್ನೂ ಮೂಡಿಸಿದರು.

ಹೊಸೂರಿನ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ನಡೆದ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ ಮಕ್ಕಳು, ಪಾಲಕರು, ಶಿಕ್ಷಕರು ತಪಾಸಣೆ ಮಾಡಿಸಿಕೊಂಡರು.

ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ್ ಹಾಗೂ ಕುಂದಗೋಳದ ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್. ಅಕ್ಕಿ, ರೆವಲ್ಯೂಷನ್ ಮೈಂಡ್ಸ್ ಸಿಇಒ ವಿನಾಯಕ ಜೋಗಾರಿಶೆಟ್ಟರ, ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಪ್ರಸರಣ ವಿಭಾಗದ ವ್ಯವಸ್ಥಾಪಕ ಡೆನ್ನಿಸ್‌ ಬೆಂಗಳೂರ, ಜಾಹೀರಾತು ವಿಭಾಗದ ಎಜಿಎಂ ದಿವಾಕರ ಭಟ್‌ ಹಾಜರಿದ್ದರು.

ಇನ್ನಷ್ಟು ಫೋಟೊಗಳನ್ನು ವೀಕ್ಷಿಸಲು ‘ಪ್ರಜಾವಾಣಿ ಫೇಸ್‌ಬುಕ್‌’ (https://www.facebook.com/PvHubli?mibextid=ZbWKwL)ಗೆ ಭೇಟಿ ನೀಡಿ.

‘ಚಿತ್ರಕಲೆಯಿಂದ ಕಲಿಕೆ ಸುಲಭ’

‘3’ ಸಂಖ್ಯೆಯಲ್ಲಿ ಎಷ್ಟೆಲ್ಲಾ ಚಿತ್ರ ಬರೆಯಬಹುದು? ಮೊಲ, ಅಳಿಲು, ಕೋತಿ, ನಾಯಿ, ಹಾರುವ ಹಕ್ಕಿ, ಇತ್ಯಾದಿ... ಇದನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿ, ಚಿತ್ರಕಲೆಯ ಮಹತ್ವದ ಅರಿವು ಮೂಡಿಸಿದವರು ಖ್ಯಾತ ಕಲಾವಿದ ಸುರೇಶ ಕುಲಕರ್ಣಿ.

‘ಬಹುತೇಕ ವಿದ್ಯಾರ್ಥಿಗಳು ಚಿತ್ರಕಲೆ ವಿಷಯವನ್ನು ನಿರ್ಲಕ್ಷಿಸುತ್ತಾರೆ. ಪೋಷಕರು ಸಹ, ‘ಡ್ರಾಯಿಂಗ್ ಮಾಡೋದು ಬಿಟ್ಟು, ಎಕ್ಸಾಂಗೆ ಓದ್ಕೋ’ ಎಂದು ಮಕ್ಕಳನ್ನು ಗದರುತ್ತಾರೆ. ಆದರೆ, ವಿಜ್ಞಾನ, ಗಣಿತ, ಕನ್ನಡ ವಿಷಯ ಕಲಿಕೆಯಲ್ಲೂ ಚಿತ್ರಕಲೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಲೆ ಮೂಲಕ ವಿಷಯಗಳನ್ನು ಕಲಿತರೆ ದೀರ್ಘ ಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ಕಲೆ, ಸೃಜನಶೀಲತೆ ಬೆಳೆಸಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

‘ಶಿಕ್ಷಕರು ಚಿತ್ರಕಲೆಯ ಪ್ರಾಮುಖ್ಯತೆ ತಿಳಿಸುವಾಗ ವಿದ್ಯಾರ್ಥಿಗಳು ತಾತ್ಸಾರ ಮಾಡುತ್ತಾರೆ. ಶಿಕ್ಷಕರೇ ಸರಿಯಾಗಿ ಪಾಠ ಮಾಡುವುದಿಲ್ಲ ಎಂದು ಪೋಷಕರು ಸಹ ವೃಥಾ ಆರೋಪ ಮಾಡುತ್ತಾರೆ. ಸಿನಿಮಾ ಹಾಡುಗಳನ್ನು ಎಂದೂ ಮರೆಯದ ಮಕ್ಕಳು, ಓದಿದ್ದು ಮಾತ್ರ ನೆನಪಿನಲ್ಲಿ ಉಳಿಯುವುದಿಲ್ಲ ಎನ್ನುವುದು ಏಕೆ? ಇದು ನೆಪವಷ್ಟೇ. ಸೂಜಿ ಚುಚ್ಚಿದಾಗ ಎಷ್ಟು ಬೇಗ ನೋವಾಗಿ, ಪ್ರತಿಕ್ರಿಯಿಸುತ್ತೇವೋ, ಅಷ್ಟೇ ವೇಗವಾಗಿ ವಿಷಯವನ್ನು ಗ್ರಹಿಸಿ, ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಎಲ್ಲರಲ್ಲೂ ಇರುತ್ತದೆ. ಈ ಶಕ್ತಿಯನ್ನು ಚಿಕ್ಕಂದಿನಿಂದಲೇ ಬೆಳೆಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು’ ಎಂದರು.

ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಹೊಸ ಆಲೋಚನೆ, ಖುಷಿ ಸಿಗುತ್ತದೆ. ಪೋಷಕರು ಮಕ್ಕಳನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಗೆಲುವು–ಸೋಲಿಗಿಂತ ಭಾಗವಹಿಸುವುದು ಮುಖ್ಯ. ಪರೀಕ್ಷಾ ಸಮಯದಲ್ಲೂ ಈ ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದು ಸಂತಸದ ಸಂಗತಿ.

-ಎಂ.ಜೆ. ಬಂಗ್ಲೇವಾಲೆ, ಖ್ಯಾತ ಕಲಾವಿದ

ಕೆಲ ಮಾಧ್ಯಮಗಳು ನಕಾರಾತ್ಮಕ ಸುದ್ದಿಗಳನ್ನೇ ಹೆಚ್ಚಾಗಿ ಪ್ರಸಾರ ಮಾಡುತ್ತಿರುವುದರಿಂದ ವಿದೇಶದಿಂದ ಭಾರತಕ್ಕೆ ಬರಲು ಹಲವರು ಹಿಂಜರಿಯುತ್ತಾರೆ. ಆದರೆ, 75 ವರ್ಷಗಳಿಂದ ‘ಪ್ರಜಾವಾಣಿ ಹಾಗೂ ಡೆಕ್ಕನ್‌ ಹೆರಾಲ್ಡ್‌’ ಸುದ್ದಿ ಪ್ರಕಟ ಮಾಡುವಲ್ಲಿ ವಿಶ್ವಾಸಾರ್ಹತೆ, ವೃತ್ತಿಪರತೆ ಉಳಿಸಿಕೊಂಡು ಬಂದಿವೆ. ಗುಣಮಟ್ಟ, ಬದ್ಧತೆಯ ಕಾರಣದಿಂದಲೇ ಈ ಪತ್ರಿಕೆಗಳು ಇತರೆ ಪತ್ರಿಕೆಗಳಿಗಿಂತ ಉತ್ತಮ ಸ್ಥಾನದಲ್ಲಿವೆ.

- ಡಾ. ಶ್ರೀನಿವಾಸ ಜೋಶಿ, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ

ಹುಬ್ಬಳ್ಳಿ ನಗರವನ್ನು ಸ್ಮಾರ್ಟ್‌ ಆಗಿಸಲು ಮೊದಲು ನಮ್ಮ ಮನೆಯಿಂದಲೇ ಸ್ವಚ್ಛತಾ ಕಾರ್ಯ ನಡೆಸಬೇಕು. ವಿಶೇಷ ಪ್ರತಿಭೆ ಉಳ್ಳವರು ಪರಿಶ್ರಮ ವಹಿಸಿ, ಯಶಸ್ಸು ಸಾಧಿಸುವ ಮೂಲಕ ಪೋಷಕರು ಹೆಮ್ಮೆ ಪಡುವಂತೆ ಮಾಡಬೇಕು

-ಪನ್ನಗಾ, ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಾರ್ವಜನಿಕ ಸಂಪರ್ಕಾಧಿಕಾರಿ

ವಿಜೇತರ ವಿವರ

ಒಂದರಿಂದ 5ನೇ ತರಗತಿ:

ಪ್ರಥಮ–ಶ್ರೇಯಾ ಅರಳಿಕಟ್ಟಿ (5ನೇ ತರಗತಿ, ಆರ್‌ಎನ್‌ಎಸ್‌ ವಿದ್ಯಾನಿಕೇತನ, ಹುಬ್ಬಳ್ಳಿ)

ದ್ವಿತೀಯ–ಪ್ರಥಮ್‌ ಶೆಟ್ಟಿ (4ನೇ ತರಗತಿ, ಡಿ.ಕೆ. ಪಬ್ಲಿಕ್‌ ಶಾಲೆ, ಹುಬ್ಬಳ್ಳಿ)

ತೃತೀಯ–ಶ್ರದ್ಧಾ ವಿಭೂತಿ (4ನೇ ತರಗತಿ, ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆ, ದೇಶಪಾಂಡೆನಗರ)

ಸಮಾಧಾನಕರ ಬಹುಮಾನ: ರಿಫಾ ದಲವಾಲೆ (5ನೇ ತರಗತಿ, ಸೇಂಟ್‌ ಆಂಟನಿ ಪಬ್ಲಿಕ್‌ ಶಾಲೆ,ಹುಬ್ಬಳ್ಳಿ), ಸ್ಫೂರ್ತಿ ಸೊಪ್ಪಿನ, ಸ್ಥವ್ಯಾ ಪಟೇಲ್‌, ಜಾಹ್ನವಿ ಕುಲಕರ್ಣಿ (3ನೇ ತರಗತಿ, ಚಿನ್ಮಯ ವಿದ್ಯಾಲಯ, ಹುಬ್ಬಳ್ಳಿ), ಪಿಹು ಕೆ. (3ನೇ ತರಗತಿ, ವಿ.ಎಸ್‌. ಪಿಳ್ಳೈ ಆಂಗ್ಲಮಾಧ್ಯಮ ಶಾಲೆ, ಹುಬ್ಬಳ್ಳಿ), ತನುಶ್ರೀ ಎಂ.ಜಿ.(3ನೇ ತರಗತಿ, ದತ್ತಾ ವಿಲ್ಸ್‌ ಶಾಲೆ)

6ರಿಂದ 10ನೇ ತರಗತಿ:

ಪ್ರಥಮ– ಪ್ರಜ್ಞಾ ಶೆಟ್ಟಿ (9ನೇ ತರಗತಿ, ಡಿ.ಕೆ. ಪಬ್ಲಿಕ್ ಶಾಲೆ, ಹುಬ್ಬಳ್ಳಿ)

ದ್ವಿತೀಯ–ಸಿಂಚನಾ ದೇಶಪಾಂಡೆ (8ನೇ ತರಗತಿ, ಆರ್‌ಎನ್‌ಎಸ್‌ ವಿದ್ಯಾನಿಕೇತನ ಶಾಲೆ,ಹುಬ್ಬಳ್ಳಿ)

ತೃತೀಯ– ಸಾಗರ ತಳ (10ನೇ ತರಗತಿ, ಕರ್ನಾಟಕ ಪಬ್ಲಿಕ್‌ ಶಾಲೆ,ನವನಗರ)

ಸಮಾಧಾನಕರ ಬಹುಮಾನ: ರೇವತಿ ಸಾಗರ (10ನೇ ತರಗತಿ, ಎನ್‌ಜಿಬಿಎಸ್‌ಎಸ್‌ ಶಿರೂರು,ನವಲಗುಂದ), ಸುಮಂತ ವೈ. ಬಣವಿ (8ನೇ ತರಗತಿ, ಎಸ್‌ಬಿಐ ಶಾಲೆ, ಹುಬ್ಬಳ್ಳಿ ), ಶಬನಂ ಸಾವಂತನವರ (8ನೇ ತರಗತಿ, ಕೆಪಿಎಸ್‌ ಶಾಲೆ, ನವನಗರ), ಶಿವಾನಿ ರೇವಣಕರ (6ನೇ ತರಗತಿ, ಚಿನ್ಮಯ ವಿದ್ಯಾಲಯ (ಸ್ಟೇಟ್‌) ಹುಬ್ಬಳ್ಳಿ), ಕಾರ್ತಿಕ ಬೆಳ್ಳಿರಿಮಠ (8ನೇ ತರಗತಿ, ಮಾರ್ಕಂಡೇಯ ಪ್ರೌಢಶಾಲೆ, ನೇಕಾರನಗರ, ಹಳೇ ಹುಬ್ಬಳ್ಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT