ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ನಗರದ ಅಂದಗೆಡಿಸಿದ ಬ್ಯಾನರ್‌, ಭಿತ್ತಿಚಿತ್ರ

Published 4 ಮಾರ್ಚ್ 2024, 5:22 IST
Last Updated 4 ಮಾರ್ಚ್ 2024, 5:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕ್ಷಿಪ್ರಗತಿಯಲ್ಲಿ ಪ್ರಗತಿಯ ಕಡೆ ಸಾಗುತ್ತಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಸೌಂದರ್ಯ ಹೆಚ್ಚಿಸಲು ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಹಲವು ಕ್ರಮಗಳನ್ನು ರೂಪಿಸಲಾಗಿದೆ. ಆದರೆ ಎಲ್ಲೆಂದರಲ್ಲಿ ಭಿತ್ತಿಚಿತ್ರ, ಪೋಸ್ಟರ್, ಬ್ಯಾನರ್‌ಗಳ ಹಾವಳಿ ನಗರ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.

ನಗರದ ಹಲವು ಕಡೆ ಖಾಲಿ ಗೋಡೆಗಳ ಮೇಲೆ ರಾಜಕೀಯ ಕಾರ್ಯಕ್ರಮ, ವಿವಿಧ ಸಂಘ ಸಂಸ್ಥೆಗಳ ಜಾಹೀರಾತು, ಸಿನಿಮಾ ಸಂಬಂಧಿತ ಪೋಸ್ಟರ್‌ಗಳನ್ನು ಹಚ್ಚಲಾಗಿದೆ. ಇಲ್ಲಿನ ಹಲವು ಗೋಡೆಗಳ ಮೇಲೆ ವಿವಿಧ ಚಿತ್ರಗಳನ್ನು ಬರೆಯಲಾಗಿರುವುದರಿಂದ ಅಂತಹ ಕಡೆಗಳಲ್ಲಿ ಸ್ವಲ್ಪಮಟ್ಟಿಗೆ ಪೋಸ್ಟರ್‌ಗಳ ಹಾವಳಿ ತಪ್ಪಿದೆ. ಉಳಿದಂತೆ ಇನ್ನೂ ಕಾಮಗಾರಿ ಪೂರ್ತಿಯಾಗದ ಮೇಲ್ಸೇತುವೆಯ ಕಂಬಗಳಲ್ಲಿ, ವಿಭಾಜಕ, ವಿದ್ಯುತ್‌ ಕಂಬಗಳಲ್ಲಿಯೂ ಪೋಸ್ಟರ್‌ಗಳನ್ನು ಅಂಟಿಸಿರುವುದು ಕಾಣಬಹುದು.

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿ ಇನ್ನಷ್ಟು ಪೋಸ್ಟರ್‌ಗಳು ಹೆಚ್ಚುವ ಸಾಧ್ಯತೆ ಇದೆ. ಒಂದು ಸಂದರ್ಭದಲ್ಲಿ ನಡೆದು ಹೋಗುವ ಕಾರ್ಯಕ್ರಮಕ್ಕಾಗಿ ನಗರದ ಗೋಡೆಗಳನ್ನು ಪೋಸ್ಟರ್ ಅಂಟಿಸಿ ಹಾಳು ಮಾಡುವುದು ತರವಲ್ಲ. ಇವು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿವೆ ಎಂಬುದು ಜನರ ಕಾಳಜಿ.

ರಾಜಕೀಯ ಕಾರ್ಯಕ್ರಮಗಳ ಪ್ರಚಾರಕ್ಕೆ ಅಥವಾ ಇತರ ಜಾಹೀರಾತುಗಳಿಗೆ ನಗರದ ಹಲವೆಡೆ ಡಿಜಿಟಿಲ್‌ ಪರದೆಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ರಾಜಕೀಯ ಪಕ್ಷಗಳು, ಸಂಘ–ಸಂಸ್ಥೆಗಳು, ಖಾಸಗಿ ಕಂಪನಿಗಳು ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಜಾಹೀರಾತು ಪ್ರದರ್ಶಿಸಲು ಅವಕಾಶ ಇದೆ. ಅದರ ಸದ್ಬಳಕೆ ಮಾಡುವುದರಿಂದ ನಗರವು ಹೆಚ್ಚು ಹೆಚ್ಚು ಡಿಜಿಟಲ್‌ ವ್ಯವಸ್ಥೆಗೆ ತೆರೆದುಕೊಂಡಂತೆ ಆಗುತ್ತದೆ. ಜೊತೆಗೆ ಪರಿಸರ ಮಾಲಿನ್ಯವೂ ನಿಯಂತ್ರಣಕ್ಕೆ ಬರುತ್ತದೆ.

ಉಣಕಲ್‌ ಕೆರೆ ಹಾಗೂ ತೋಳನಕೆರೆ ಹುಬ್ಬಳ್ಳಿ ನಗರದ ಪ್ರಮುಖ ಆಕರ್ಷಣೆ. ಅವಳಿನಗರದ ಅತಿದೊಡ್ಡ ಕೆರೆ ಎನಿಸಿಕೊಂಡಿರುವ ಉಣಕಲ್‌ ಕೆರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಕೆರೆಯ ಸುತ್ತ ಪಾದಚಾರಿ ಮಾರ್ಗ ನಿರ್ಮಾಣ ಮಾಡಲಾಗಿದ್ದು, ಸಾರ್ವಜನಿಕರು ಸಂಜೆ ಹೊತ್ತು ಸುತ್ತಾಡಲು ಅನುಕೂಲವಾಗಿದೆ. ಆದರೆ ಪಾದಚಾರಿ ಮಾರ್ಗ ನಿರ್ಮಾಣದಿಂದ ಕೆರೆಗೆ ಹರಿದು ಬರುವ ಮಳೆ ನೀರೆಲ್ಲ ಹೊರಗಡೆಯೇ ನಿಲ್ಲುವಂತಾಗಿದೆ ಎಂದು ಸಾರ್ವಜನಿಕರ ದೂರೂ ಇದೆ.

ಹುಬ್ಬಳ್ಳಿಗೆ ಮುಕುಟದಂತಿರುವ ಕಿತ್ತೂರು ಚನ್ನಮ್ಮ ವೃತ್ತದ ಸುತ್ತ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅದು ನಗರದ ಸೌಂದರ್ಯವನ್ನು ಹೆಚ್ಚಿಸಲಿದೆಯೋ ಅಥವಾ ಮಸುಕಾಗಿಸಬಹುದೋ ಎಂದು ಹೇಳಲಾಗದು.

ತೋಳನಕೆರೆ ಮಾದರಿ

ಇಲ್ಲಿನ ತೋಳನಕೆರೆ ಉದ್ಯಾನವನ್ನು ಮಾದರಿಯಾಗಿ ರೂಪಿಸಲಾಗಿದ್ದು, ವಿವಿಧ ಸೌಕರ್ಯಗಳೊಂದಿಗೆ ಜನರನ್ನು ಆಕರ್ಷಿಸುತ್ತಿದೆ. ನಿತ್ಯ ಹಲವಾರು ಜನ ವಾಕಿಂಗ್‌ಗಾಗಿ, ಸಂಜೆ ಹೊತ್ತು ಕಳೆಯಲು ಉದ್ಯಾನಕ್ಕೆ‌ ಬರುತ್ತಾರೆ. ಸುಸಜ್ಜಿತ ವಾಕಿಂಗ್‌ ಪಥ, ಮಕ್ಕಳಿಗಾಗಿ ಟಾಯ್‌ ಟ್ರೇನ್‌, ಕುದುರೆ ಸವಾರಿ, ಜಿಮ್‌ ಸಲಕರಣೆಗಳನ್ನು ಅಳವಡಿಸಲಾಗಿದೆ. ಅಲ್ಲದೆ ಸಾರ್ವಜನಿಕರನ್ನು ಒಳಗೊಂಡ ವಿವಿಧ ಚಟುವಟಿಕೆಗಳಿಗೆ ತೋಳನಕೆರೆ ಉದ್ಯಾನ ತೆರೆದುಕೊಂಡಿದೆ.

ಪ್ರಕೃತಿ ಫೌಂಡೇಷನ್‌ ಹಾಗೂ ಚೈತನ್ಯ ಸ್ಪೋರ್ಟ್ಸ್‌ ಫೌಂಡೇಷನ್‌ ಉದ್ಯಾನದಲ್ಲಿ ವಾಟರ್‌ ಸ್ಪೋರ್ಟ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳಿಗಾಗಿ ಟೆಂಡರ್ ಪಡೆದಿದೆ. ಮಕ್ಕಳಿಗೆ ಮಿನಿ ಈಜುಕೊಳದಲ್ಲಿ ಬೋಟಿಂಗ್ ಮತ್ತು ದೊಡ್ಡವರಿಗೆ ಕೆರೆಯಲ್ಲಿ ಬೋಟಿಂಟ್‌ಗೆ ಅವಕಾಶ ಕಲ್ಪಿಸಲಾಗಿದೆ.

ನಗರದ ಚಿಟಗುಪ್ಪಿ ಆಸ್ಪತ್ರೆ ಪಕ್ಕದಲ್ಲಿರುವ ಉದ್ಯಾನ ಯಾವುದೇ ಅಭಿವೃದ್ಧಿ ಇಲ್ಲದೆ ಸೊರಗಿದ್ದು, ಆಸ್ಪತ್ರೆಗೆ ಬರುವ ಜನರು ಮಧ್ಯಾಹ್ನ ಊಟಕ್ಕೆ, ಸಂಜೆ ಸಮಯ ವಿಶ್ರಾಂತಿಗಾಗಿ ಉದ್ಯಾನದಲ್ಲಿ ಬಂದು ಕೂರುತ್ತಾರೆ. ಆದರೆ ಉದ್ಯಾನವೊಂದರಲ್ಲಿ ಸಿಗಬೇಕಾದ ಹಿತಾನುಭವ ಅಲ್ಲಿಲ್ಲ.

ಈ ಬಾರಿಯ ಬಜೆಟ್‌ನಲ್ಲಿ ಉದ್ಯಾನಗಳ ಅಭಿವೃದ್ಧಿಗೆ ₹5 ಕೋಟಿ ಮೀಸಲಿಡಲಾಗಿದೆ. ನಗರದಲ್ಲಿ ಹಲವಾರು ಉದ್ಯಾನಗಳಿದ್ದು, ಅವುಗಳ ಅಭಿವೃದ್ಧಿಗೆ ತೋಳನಕೆರೆ ಮಾದರಿಯಲ್ಲಿ ಆದ್ಯತೆ ನೀಡಿದರೆ ಉತ್ತಮ ಎನ್ನುವುದು ಜನರ ಅಭಿಪ್ರಾಯ.

ಅಮೃತ ಯೋಜನೆ ಅಡಿಯಲ್ಲಿ ಉಣಕಲ್‌ ಕೆರೆ, ತೋಳನಕೆರೆ ಸೇರಿದಂತೆ ಕೆಲವು ಪ್ರದೇಶಗಳು ಆಯ್ಕೆ ಆಗಿವೆ. ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಅನುಮತಿ ಇಲ್ಲದೆ ಅನಧಿಕೃತವಾಗಿ ಪೋಸ್ಟರ್‌ಗಳನ್ನು ಅಂಟಿಸುವುದಕ್ಕೆ ಅವಕಾಶ ಇಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

2021ರಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಇಂದಿರಾ ಗಾಜಿನ ಮನೆ ಆವರಣದಲ್ಲಿ ಆಧುನಿಕ ತಂತ್ರಜ್ಞಾನದ ಸಂಗೀತ ಕಾರಂಜಿಯನ್ನು ₹4.60 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಕಳಪೆ ಗುಣಮಟ್ಟದ ಕಾಮಗಾರಿ ಕಾರಣಕ್ಕೆ ಅದು ಲೋಕಾಯುಕ್ತ ತನಿಖೆಗೂ ಒಳಪಟ್ಟಿದೆ. ಮಹಾತ್ಮ ಗಾಂಧಿ ಉದ್ಯಾನದಲ್ಲಿ ನಿರ್ಮಿಸಲಾದ ಪಜಲ್‌ ಪಾರ್ಕಿಂಗ್‌ನಲ್ಲಿ ಕಾರುಗಳನ್ನು ನಿಲ್ಲಿಸಲು ಯಾರೂ ಆಸಕ್ತಿ ತೋರುತ್ತಿಲ್ಲ. ಉದ್ಯಾನದ ಮುಂಭಾಗದಲ್ಲಿಯೇ ನೂರು ಕಾರುಗಳನ್ನು ನಿಲುಗಡೆ ಮಾಡಲು ಬೇಕಾಗುವಷ್ಟು ಜಾಗವಿದ್ದು, ಪಜಲ್‌ ಪಾರ್ಕಿಂಗ್‌ ವ್ಯವಸ್ಥೆಯೇ ವ್ಯರ್ಥವಾಗಿದೆ. ಮಕ್ಕಳಿಗಾಗಿ ಅಳವಡಿಸಲಾಗಿರುವ ಪುಟಾಣಿ ರೈಲು ಕಳಪೆ ಗುಣಮಟ್ಟದಿಂದ ಕೂಡಿದ್ದು, ಉದ್ಘಾಟನೆಯಾದ ವಾರದೊಳಗೇ ಕೆಟ್ಟು ಹೋಗಿದೆ.

ನಿಷ್ಕ್ರಿಯ ಇ– ಶೌಚಾಲಯ

ಬೇರೆ ಬೇರೆ ಜಿಲ್ಲೆಗಳಿಂದ ಹುಬ್ಬಳ್ಳಿಗೆ ಬಂದಿಳಿಯುವವರಿಗೆ ಅಗತ್ಯ ಬಳಕೆಗೆ ಬೇಕಾದ ಶೌಚಾಲಯ ವ್ಯವಸ್ಥೆ ಇಲ್ಲಿಲ್ಲ. ಇ– ಶೌಚಾಲಯ ಹೆಸರಿಗಷ್ಟೇ ಎನಿಸಿಕೊಂಡಿದೆ. ಕೆಲವೆಡೆ ಇ– ಶೌಚಾಲಯಕ್ಕೆ ಬೀಗ ಹಾಕಿದರೆ, ಇನ್ನು ಕೆಲವು ನಿರ್ವಹಣೆ ಇಲ್ಲದೆ ಕೆಟ್ಟಿವೆ. ಜನರು ರಸ್ತೆ ಬದಿ ಗೋಡೆಗಳ ಮೇಲೆಯೇ ಮೂತ್ರ ವಿಸರ್ಜನೆ ಮಾಡುವ ದೃಶ್ಯ ಸಾಮಾನ್ಯವಾಗಿಬಿಟ್ಟಿದೆ.

ತ್ಯಾಜ್ಯ ನಿರ್ವಹಣೆ ಸಮಸ್ಯೆ: ತ್ಯಾಜ್ಯ ನಿರ್ವಹಣೆಗೆ ಎಷ್ಟೇ ಕ್ರಮ ಕೈಗೊಂಡರೂ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ತ್ಯಾಜ್ಯ ತಂದು ಸುರಿಯುವುದು ನಿಲ್ಲುತ್ತಿಲ್ಲ. ಸುಳ್ಳ ರಸ್ತೆ, ಗದಗ ರಸ್ತೆ, ಕಾರವಾರ ರಸ್ತೆಗಳಲ್ಲಿ ಹಳೇ ಕಟ್ಟಡ ತ್ಯಾಜ್ಯಗಳನ್ನು ಸುರಿಯುವುದು ಸಾಮಾನ್ಯವಾಗುತ್ತಿದ್ದು, ರಾತ್ರಿ ಹೊತ್ತು ಈ ಕೃತ್ಯ ನಡೆಯುವುದರಿಂದ ಕ್ರಮ ಕೈಗೊಳ್ಳುವುದೂ ಸವಾಲಾಗಿದೆ. ನಗರದ ಅಂದ ಹೆಚ್ಚಿಸುವುದರ ನಡುವೆ ಇಂತಹ ಬೆಳವಣಿಗೆಗಳು ಅಂದಗೆಡಿಸುವ ‘ಸಾರ್ವಜನಿಕ ಯತ್ನ’ಗಳಾಗಿ ಕಾಣಿಸಿ ನಿರಾಸೆ ಮೂಡಿಸುತ್ತವೆ.

ಬಿಆರ್‌ಟಿಎಸ್ ಕಾರಿಡಾರ್‌ ಸೌಂದರ್ಯೀಕರಣ: ನಗರದ ಉಣಕಲ್‌, ಉಣಕಲ್‌ ಕ್ರಾಸ್ ಹಾಗೂ ನವನಗರ ಬಿಆರ್‌ಟಿಎಸ್ ಕಾರಿಡಾರ್‌ಗಳಲ್ಲಿರುವ ಮೇಲ್ಸೇತುವೆಗಳ ಕೆಳಗಿನ ಸ್ಥಳದಲ್ಲಿ ಸೌಂದರ್ಯೀಕರಣಕ್ಕೆ ಕ್ರಮ ವಹಿಸಲಾಗಿದೆ.

ನವನಗರದಲ್ಲಿ ಬಿಆರ್‌ಟಿಎಸ್‌ ಮೇಲ್ಸೇತುವೆ ಕೆಳಗೆ ಪೇವರ್ಸ್, ವಾಕಿಂಗ್ ಪಥ, ಆಸನಗಳನ್ನು ನಿರ್ಮಿಸಲಾಗಿದೆ. ಗಿಡಗಳನ್ನು ಹಚ್ಚುವ ಕೆಲಸ ಸದ್ಯದಲ್ಲೇ ನಡೆಯಲಿದೆ. ಎರಡೂ ಬದಿಗಳಲ್ಲಿ ರಸ್ತೆಗಳಿರುವುದರಿಂದ ಜನರ ಹಾಗೂ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿಲ್ಲ. ಉಣಕಲ್ ಮೇಲ್ಸೇತುವೆ ಕೆಳಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೆರೆಯ ವೀಕ್ಷಣೆಗೆ ಇದು ಅನುಕೂಲ ಎಂದು ಮಾಹಿತಿ ನೀಡುತ್ತಾರೆ ಬಿ.ಆರ್.ಟಿಎಸ್.ನ ಎಂಜಿನಿಯರ್ ಪ್ರಿಯದರ್ಶಿನಿ.

ಜಾಗೃತಿ ಚಿತ್ರಗಳ ‘ರೆವೆಲ್ಯೂಷನ್‌’

ಹುಬ್ಬಳ್ಳಿ ನಗರಕ್ಕೆ ಬಂದಿಳಿಯುವ ಜನರನ್ನು ಇಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುತ್ತ ಸ್ವಾಗತ ಕೋರುವುದು ನಗರದ ರಸ್ತೆ ಬದಿ ಗೋಡೆಗಳಲ್ಲಿ ಮೂಡಿರುವ ಕಲೆ ಸಂಸ್ಕೃತಿಗೆ ಸಂಬಂಧಿಸಿದ ಚಿತ್ರಗಳ ಸಾಲು. ಇಲ್ಲಿನ ‘ರೆವೆಲ್ಯೂಷನ್ ಮೈಂಡ್ಸ್’ ತಂಡದ ಸದಸ್ಯರು ತಮ್ಮ ನಗರದ ಬಗೆಗಿನ ಕಾಳಜಿಯಿಂದ ‘ನನ್ನ ನಗರ ನನ್ನ ಕರ್ತವ್ಯ’ ಎನ್ನುವ ಚಿಂತನೆಯಡಿ ಇಲ್ಲಿನ ವಿದ್ಯಾನಗರ ದೇಶಪಾಂಡೆ ನಗರ ಲಿಂಗರಾಜನಗರ ಗೋಕುಲ ರಸ್ತೆ ಸೇರಿದಂತೆ ಹಲವಾರು ಕಡೆ ಗೋಡಗಳಲ್ಲಿ ಶಾಲೆ ಕಾಲೇಜುಗಳ ಕಾಂಪೌಂಡ್ ಮೇಲೆ ಚಿತ್ರಗಳನ್ನು ಬರೆದಿದ್ದಾರೆ.

ಕನ್ನಡ ನಾಡಿನ ಹೆಮ್ಮೆಯ ಸಂಗತಿಗಳನ್ನು ಹುಬ್ಬಳ್ಳಿ– ಧಾರವಾಡದ ಹಿರಿಮೆಯನ್ನು ಚಿತ್ರಗಳಲ್ಲಿ ದಾಖಲಿಸಿರುವುದು ಗಮನಾರ್ಹ. ಜೊತೆಗೆ ಆರೋಗ್ಯ ನೈರ್ಮಲ್ಯ ಸಾಮಾಜಿಕ ಜವಾಬ್ದಾರಿಗೆ ಸಂಬಂಧಿಸಿದ ಜಾಗೃತಿ ಮೂಡಿಸುವ ಚಿತ್ರಗಳನ್ನೂ ಕಾಣಬಹುದು. ತಂಡದ ಕಾರ್ಯಕ್ಕೆ ಹು– ಧಾ ಮಹಾನಗರ ಪಾಲಿಕೆಯೂ ಕೈಜೋಡಿಸಿದ್ದು ಅಗತ್ಯ ಸಹಕಾರವನ್ನೂ ನೀಡುತ್ತಿದೆ.

'ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ನಾವು ನಿತ್ಯ ಬದುಕುತ್ತಿರುವ ನಗರದ ಬಗ್ಗೆ ಎಲ್ಲರಿಗೂ ಪ್ರೀತಿ ಕಾಳಜಿ ಇರಬೇಕು. ಎಲ್ಲರಲ್ಲಿಯೂ ಜಾಗೃತಿ ಮೂಡಿದಾಗ ನಗರದ ಸೌಂದರ್ಯ ಉಳಿಸಿಕೊಂಡು ಹೋಗಲು ಸಾಧ್ಯ. ಚಿತ್ರಗಳನ್ನು ಬರೆದ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡುವುದಕ್ಕೆ ಜನರು ಹಿಂದೆ ಮುಂದೆ ನೋಡುತ್ತಾರೆ. ಆಗ ಸ್ವಚ್ಛತೆಯ ಬಗ್ಗೆ ಯೋಚಿಸುತ್ತಾರೆ. ಜನರನ್ನು ಹೀಗೆ ಯೋಚಿಸುವಂತೆ ಮಾಡುವುದು ನಮ್ಮ ಗುರಿ" ಎನ್ನುತ್ತಾರೆ ರೆವೆಲ್ಯೂಷನ್‌ ಮೈಂಡ್ಸ್‌ನ ಸ್ಥಾಪಕ ವಿನಾಯಕ ಜೋಗಾರಿಶೆಟ್ಟರ.

ಅಂದ ಕೆಡಿಸುವ ಪೋಸ್ಟರ್‌ಗಳು

ಉಪ್ಪಿನಬೆಟಗೇರಿ ಸೇರಿದಂತೆ ಗರಗ ನರೇಂದ್ರ ತಡಕೋಡ ಹಾರೋಬೆಳವಡಿ ಯಾದವಾಡ ಕರಡಿಗುಡ್ಡ ಅಮ್ಮಿನಬಾವಿ ಹೆಬ್ಬಳ್ಳಿಯ ಬಸ್ ನಿಲ್ದಾಣದ ಗೋಡೆ ಮುಖ್ಯ ರಸ್ತೆಯ ಕಂಬಗಳಿಗೆ ಚುನಾವಣೆ ಜಾತ್ರೆ ಇನ್ನಿತರ ಸಭೆ ಸಮಾರಂಭದಲ್ಲಿ ಜನಪ್ರತಿನಿಧಿಗಳಿಗೆ ಶುಭಾಶಯ ಕೋರುವ ಬ್ಯಾನರ್ ಸಿನಿಮಾ ಪೋಸ್ಟರ್‌ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ. ಎಲ್ಲೆಂದರಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಗ್ರಾಮೀಣ ಪ್ರದೇಶದ ಅಂದ ಕೆಡಿಸಲಾಗಿದೆ.

ಗೋಡೆಗಳ ಮೇಲೆ ಬರೆಯಲಾದ ಸಾಮಾಜಿಕ ಸಂದೇಶದ ಚಿತ್ರ ನುಡಿಗಳ ಮೇಲೆ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದ್ದು ಅವು ಹರಿದು ನೇತಾಡುತ್ತಿವೆ. ಶುದ್ಧ ಕುಡಿಯುವ ನೀರಿನ ಘಟಕವೂ ಪೋಸ್ಟರ್‌ಗಳ ಗೋಡೆಯಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಅವುಗಳನ್ನು ತೆರವುಗೊಳಿಸಿ ಸೌಂದರ್ಯಕ್ಕೆ ಒತ್ತು ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಭಿತ್ತಿಚಿತ್ರ ಬ್ಯಾನರ್‌ ಹಾವಳಿ

ಧಾರವಾಡ ನಗರದ ಹಲವೆಡೆ ಗೋಡೆಗಳಲ್ಲಿ ಭಿತ್ತಿಚಿತ್ರ ಬ್ಯಾನರ್‌ ಅಳವಡಿಸುವ ಪರಿಪಾಟಕ್ಕೆ ಕಡಿವಾಣ ಬಿದ್ದಿಲ್ಲ. ಕೆಸಿಡಿ ರಸ್ತೆ ಪಿಬಿ ರಸ್ತೆ ಸಹಿತ ಹಲವೆಡೆ ಸರ್ಕಾರಿ ಕಟ್ಟಡಗಳ ಆವರಣದ ಗೋಡೆಗಳಲ್ಲಿ ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ.  ನಗರವನ್ನು ಅಂದಗೊಳಿಸಲು ಹಲವೆಡೆ ಸರ್ಕಾರಿ ಕಟ್ಟಡಗಳ ಅವರಣಗಳ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಯಲಾಗಿದೆ. ಆದರೆ ಹಲವೆಡೆ ಚಿತ್ರಗಳ ಮೇಲೆಯೇ ಭಿತ್ತಿ ಪತ್ರಗಳನ್ನು ಅಂಟಿಸಿ ಅಂದ ಹಾಳುಗಡೆವಲಾಗಿದೆ. 

ರಸ್ತೆ ವಿಭಜಕಗಳಲ್ಲೂ ಹಲವೆಡೆ ಬ್ಯಾನರ್‌ಗಳದ್ದೇ ಹಾವಳಿ. ಹಲವೆಡೆ ವಿಭಜಕದಲ್ಲಿ ಕಂಬಗಳಿಗೆ ಬ್ಯಾನರ್‌ಗಳ (ಕಾರ್ಯಕ್ರಮ ಜನ್ಮದಿನೋತ್ಸವ...)  ಕಟ್ಟಿ ಹಲವು ತಿಂಗಳಾಗಿವೆ ಆ ಕಾರ್ಯಕ್ರಮ ಮುಗಿದಿದ್ದರೂ ಅವುಗಳನ್ನು ತೆರವುಗೊಳಿಸಿಲ್ಲ. 

‘ಶ್ರೀನಗರ ಸಪ್ತಾಪೂರ ಸಹಿತ ವಿವಿಧಡೆಗಳಲ್ಲಿ ಗೋಡೆ ಕಟ್ಟಡಗಳ ಮೇಲೆ ಭಿತ್ತಿಪತ್ರ ಬ್ಯಾನರ್‌ಗಳನ್ನು ಅಂಟಿಸಿದ್ದಾರೆ. ಪಾಲಿಕೆ ಪರಿಸರ ಎಂಜಿನಿಯರ್‌ ಆರೋಗ್ಯ ನಿರೀಕ್ಷಕ ಸಹಿತ ವಿವಿಧ ಅಧಿಕಾರಿಗಳಿಗೆ ಈ ಬಗ್ಗೆ ಗಮನ ಸೆಳೆಯಲಾಗಿದೆ. ಫೋಟೊಗಳನ್ನು ಕಳಿಸಿದ್ದೇವೆ. ಆದರೆ ತೆರವಿಗೆ ಕ್ರಮ ವಹಿಸಿಲ್ಲ’ ಎಂದು ಪಾಲಿಕೆ ಮಾಜಿ ಸದಸ್ಯ ಶಂಕರ ಕುಂಬಿ ‘ಪ್ರಜಾವಾಣಿ’ಗೆ ತಿಳಿಸಿದರು. 

ನಗರದಲ್ಲಿ ಹಲವೆಡೆ ವೃಕ್ಷಗಳ ಕಾಂಡಗಳಿಗೆ ಬ್ಯಾನರ್‌ ಭಿತ್ತಿಪತ್ರಗಳನ್ನು ಕಟ್ಟಲಾಗಿದೆ. ನಗರದ ಬಹುತೇಕ ಕಡೆ ಕಸ ರಾಶಿ ಬಿದ್ದಿದೆ. ಸ್ವಚ್ಛತ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ನಿಗಾ ವಹಿಸುತ್ತಿಲ್ಲ ಎಂಬುದು ಸಾರ್ವಜನಿಕರ ದೂರು.

ಆಗಬೇಕಿರುವುದು ಏನು

  • ಸ್ವಚ್ಛತೆಗೆ ಆದ್ಯತೆ

  • ಇ– ಶೌಚಾಲಯಗಳ ಅಭಿವೃದ್ಧಿ ಸಮರ್ಪಕ ನಿರ್ವಹಣೆ

  • ಪ್ರಸಿದ್ಧ ಪ್ರವಾಸಿ ತಾಣಗಳ ಅಭಿವೃದ್ಧಿ

  • ಡಿಜಿಟಲ್‌ ಯೋಜನೆಗಳಿಗೆ ಒತ್ತು

  • ಜಾಹೀರಾತಿಗೆ ಡಿಜಿಟಲ್‌ ಪರದೆ ಕಡ್ಡಾಯಗೊಳಿಸುವಿಕೆ

  • ಉದ್ಯಾನಗಳ ಅಭಿವೃದ್ಧಿ

ನಗರದ ರಸ್ತೆ ಬದಿ ಗೋಡೆಗಳಲ್ಲಿ ಅನಧಿಕೃತವಾಗಿ ಪೋಸ್ಟರ್‌ಗಳನ್ನು ಹಚ್ಚಲು ಅವಕಾಶ ಇಲ್ಲ. ರಾಜಕೀಯ ಕಾರ್ಯಕ್ರಮಗಳ ಮಾಹಿತಿಗೆ ಡಿಜಿಟಲ್‌ ಪರದೆಯಲ್ಲಿ ಅನುವು ಮಾಡಿಕೊಡಬಹುದು. ಪೋಸ್ಟರ್‌ಗಳನ್ನು ಶೀಘ್ರ ತೆರವುಗೊಳಿಸಲಾಗುವುದು.
ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತ
ಕೆಲವು ಕಡೆಗಳಲ್ಲಿ ನಾವು ಬರೆದ ಚಿತ್ರಗಳ ಮೇಲೆಯೇ ರಾಜಕೀಯ ನಾಯಕರ ಕಾರ್ಯಕ್ರಮಗಳ ಪೋಸ್ಟರ್‌ಗಳನ್ನು ಹಚ್ಚಲಾಗಿದೆ. ಇದು ಬೇಸರ ಮೂಡಿಸಿದೆ.
ವಿನಾಯಕ ಜೋಗಾರಿಶೆಟ್ಟರ, ರೆವೆಲ್ಯೂಷನ್‌ ಮೈಂಡ್ಸ್‌ನ ಸ್ಥಾಪಕ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಾವಿರಾರು ಕೋಟಿ ರೂಪಾಯಿಗಳ ಅನುದಾನ ತರಿಸಲಾಗುತ್ತದೆ ಆದರೆ ಅನುದಾನಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.
ರೇವಣಸಿದ್ದಪ್ಪ, ಸಾಮಾಜಿಕ ಹೋರಾಟಗಾರ

ಪೂರಕ ಮಾಹಿತಿ: ಧನ್ಯಪ್ರಸಾದ್ ಬಿ.ಜೆ., ರಮೇಶ ಓರಣಕರ.

ಹುಬ್ಬಳ್ಳಿಯ ವಿದ್ಯಾನಗರದ ರಸ್ತೆ ಬದಿ ಗೋಡೆಯಲ್ಲಿ ರೆವೆಲ್ಯೂಷನ್‌ ಮೈಂಡ್ಸ್‌ ತಂಡದ ಸದಸ್ಯರು ಬರೆದ ಚಿತ್ರಗಳು ನಗರದ ಅಂದ ಹೆಚ್ಚಿಸಿವೆ
ಹುಬ್ಬಳ್ಳಿಯ ವಿದ್ಯಾನಗರದ ರಸ್ತೆ ಬದಿ ಗೋಡೆಯಲ್ಲಿ ರೆವೆಲ್ಯೂಷನ್‌ ಮೈಂಡ್ಸ್‌ ತಂಡದ ಸದಸ್ಯರು ಬರೆದ ಚಿತ್ರಗಳು ನಗರದ ಅಂದ ಹೆಚ್ಚಿಸಿವೆ
ಉಪ್ಪಿನಬೆಟಗೇರಿ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭಿತ್ತಿಚಿತ್ರಗಳನ್ನು ಅಂಟಿಸಿರುವುದು
ಉಪ್ಪಿನಬೆಟಗೇರಿ ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭಿತ್ತಿಚಿತ್ರಗಳನ್ನು ಅಂಟಿಸಿರುವುದು
ಧಾರವಾಡದ ಡಿಮಾನ್ಸ್‌ ಆಸ್ಪತ್ರೆ ರಸ್ತೆ ಬದಿಯ ಗೋಡೆಯಲ್ಲಿ ಭಿತ್ತಿ ಪತ್ರ ಅಂಟಿಸಿರುವುದು
ಧಾರವಾಡದ ಡಿಮಾನ್ಸ್‌ ಆಸ್ಪತ್ರೆ ರಸ್ತೆ ಬದಿಯ ಗೋಡೆಯಲ್ಲಿ ಭಿತ್ತಿ ಪತ್ರ ಅಂಟಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT