ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬದಿ ಬೆಚ್ಚಗಿನ ನಿದ್ರೆಗೆ ಬೆಡ್‌ಶೀಟ್‌

Last Updated 1 ಜನವರಿ 2020, 9:16 IST
ಅಕ್ಷರ ಗಾತ್ರ

ಪ್ರಕೃತಿ ಏರಿಳಿತ ನರ್ತನದ ನಂತರ ಚಳಿಗಾಲ ಶುರುವಾಗಿ ಸಂಜೆಯಾಗುತ್ತಿದ್ದಂತೆ ಬೀಸುವ ತಣ್ಣನೆ ಗಾಳಿಗೆ ನಡುಕದ ನೃತ್ಯ ಆರಂಭವಾಗಿಬಿಡುತ್ತದೆ. ಸಂಜೆಯಾಗುತ್ತಿದ್ದಂತೆ ಸ್ವೆಟರ್‌, ಮಂಕಿಕ್ಯಾಪ್‌, ಮಫ್ಲರ್‌ಗಳು ತಮ್ಮ ಸ್ಥಾನವನ್ನು ಆವರಿಸಿಕೊಳ್ಳುತ್ತಿವೆ. ರಾತ್ರಿ ಮಲಗುವಾಗಲಂತೂ ಎರಡೆರಡೂ ಬೆಡ್‌ಶೀಟ್‌ ಹೊದ್ಕೊಂಡ್ರೂ, ಬೆಚ್ಚಗಿನ ಕೌದಿ ಹಾಸ್ಕೊಂಡ್ರು ನಿಲ್ಲದ ನಡುಕ!

ಆದರೆ ಮನೆಯಿಲ್ಲದೆ ರಾತ್ರಿ ಹೊರಗೆ ಮಲಗುವವರ ಸ್ಥಿತಿ? ನೈಟ್‌ಶಿಫ್ಟ್‌ ಮಾಡುವಂತಹ ಸೆಕ್ಯೂರಿಟಿ ಗಾರ್ಡ್‌ಗಳ ಸ್ಥಿತಿ, ಬಡತನಕ್ಕೆ ಬಲಿಯಾಗಿ ಬೀದಿಬದಿಗೆ ಒರಗುವರ ಸ್ಥಿತಿ? ಮಾನಸಿಕ ಅಸ್ವಸ್ಥರಾಗಿ ಎಲ್ಲೆಂದರಲ್ಲಿ ಮಲಗುವರ ಸ್ಥಿತಿ? ಅವರ ಚಳಿಗಾಲದಲ್ಲಿ ನೆಮ್ಮದಿಯಾಗಿ ಒಂದು ಜೊಂಪು ನಿದ್ದೆ ಮಾಡಲು ಸಾಧ್ಯವೇ? ಸಹಿಸಿಕೊಳ್ಳಲಾಗದ ಚಳಿಯನ್ನು ಅಪ್ಪಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ. ಇದರ ಬಗ್ಗೆ ನೀವ್ಯಾವತ್ತಾದರೂ ಯೋಚಿಸಿದ್ದಿರಾ. ಖಂಡಿತ ನಿಮ್ಮ ಉತ್ತರ ಇಲ್ಲಾ ಎಂದೇ ಆಗಿರುತ್ತದೆ ಅಥವಾ ಅದು ಅವರ ಜೀವನಶೈಲಿ ಎಂದು ಮೂಗು ಮುರಿಯುತ್ತೀರಿ.

ಆದರೆ ರೆವುಲೇಶನ್‌ ಮೈಂಡ್ಸ್‌ ಟೀಂನ ಹುಡುಗರು, ಬೆಳಿಗ್ಗೆ ಓದು ಮುಗಿಸಿ ರಾತ್ರಿ ಕತ್ತಲೆ ಆವರಿಸಿರುವ ಹುಬ್ಬಳ್ಳಿ–ಧಾರವಾಡದಲ್ಲಿರುವ ಬೀದಿ, ಮಾರುಕಟ್ಟೆ ಪ್ರದೇಶ, ಕಟ್ಟಡ ಕಾಮಗಾರಿ ನಡೆಯುವಂತಹ ಸ್ಥಳಗಳು, ದೇವಸ್ಥಾನ, ಶಾಲಾ–ಕಾಲೇಜು ಆವರಣ ಇತ್ಯಾದಿಗಳೆಲ್ಲಾ ಸಂಚರಿಸಿ ಬೀದಿ ಬದಿಯಲ್ಲಿ ಮಲಗಿರುವವರಿಗೆ, ಮಾನಸಿಕ ಅಸ್ವಸ್ಥರಿಗೆ, ಸೆಕ್ಯೂರಿಟಿ ಗಾರ್ಡ್‌ಗಳಿಗೆ ಬೆಡ್‌ಶೀಟ್‌ ವಿತರಿಸುವ ಕೆಲಸ ಮಾಡುತ್ತಿದ್ದಾರೆ.

‘ಕಾಲೇಜ್‌ಗೆ ಹೋಗುವುದರಿಂದ ವಾರದಲ್ಲಿ ಮೂರು ದಿನ ಈ ಕೆಲಸ ಮಾಡುತ್ತಿದ್ದೇವೆ. ರಾತ್ರಿ ಹತ್ತರಿಂದ ಮಧ್ಯರಾತ್ರಿ 3ರವೆರೆಗೆ ಬೆಡ್‌ಶೀಟ್‌ ವಿತರಿಸುತ್ತೇವೆ. ಈಗಾಗಲೇ ಹುಬ್ಬಳ್ಳಿಯ ದುರ್ಗದಬೈಲ್‌, ಕೊಪ್ಪಿಕರ್‌ ರೋಡ್‌, ಕೋಯಿನ್‌ ರೋಡ್‌, ಸ್ಟೇಶನ್‌ ರೋಡ್‌, ವಿದ್ಯಾನಗರ, ಶಿರೂರು ಪಾರ್ಕ್‌, ಗಾಂಧಿ ನಗರ, ಗೋಕುಲ ರೋಡ್‌, ಕಾಳಿದಾಸ ನಗರ, ಕೇಶ್ವಾಪುರ, ಹೊಸುರುನಲ್ಲಿ 50 ಜನರಿಗೆ ಬೆಡ್‌ಶೀಟ್‌ ಕೊಟ್ಟಿದ್ದೇವೆ. ‘ದೇವರ ನಿಮಗ ಚೊಲೊ ಇಟ್ರಲಿಪಾ, ಪುಣ್ಯ ಬರಲಿ ಚಳಿ ಭಾಳ ಆಗಾಕತ್ತಿತ್ತ, ಈಗ ಬೆಚ್ಚಗ ನಿದ್ದಿ ಮಾಡಬಹುದ’ ಅಂತ ಬೀದಿ ಬದಿಯಲ್ಲಿ ಮಲಗಿರುವವರು ಹರಸಿದರೆ, ಇಂತಾ ಕೆಲಸ ನಿಮ್ಮಿಂದ ಆಗ್ಲಿ ತಮ್ಮಾರ, ಭಾಳ ಮಂದಿಗೆ ಇದರಿಂದ ನೆಮ್ಮದಿಯ ನಿದ್ದಿ ಕೊಟ್ರಿ, ದೇವರ ನಿಮಗ ಆರೋಗ್ಯ, ಆಯಸ್ಸು ಕೊಟ್ಟ ಕಾಪಾಡಲಿ’ ಅಂತಾ ಸೆಕ್ಯೂರಿಟಿ ಗಾರ್ಡ್‌ಗಳು ತಮ್ಮ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ವಿನಾಯಕ ಖುಷಿ ಪಟ್ಟರು.

ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಸಾಥ್‌

‘ವೀಕೆಂಡ್‌ ಬರುತ್ತಿದ್ದಂತೆ ಮೋಜು, ಮಸ್ತಿ ಮಾಡಲು ಊರು ಸುತ್ತುವ ಹುಡುಗರು ಈಗಿನ ಜಮಾನದವರು. ಆದರೆ ಶಿಕ್ಷಣದೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡಿರುವ ರೆವುಲೇಶನ್‌ ಮೈಂಡ್ಸ್‌ ತಂಡದ ವಿನಾಯಕ ಹಾಗೂ ಆತನ ಸ್ನೇಹಿತರು ಮಾನವೀಯತೆ ಮೆರೆಯುತ್ತಿದ್ದಾರೆ. ಇಂತಹ ಕೆಲಸಗಳಿಗೆ ‘ಇಕೋ ನೇಚರ್‌ ಫಸ್ಟ್‌’ ಯಾವಾಗಲೂ ಬೆಂಬಲ ನೀಡುತ್ತದೆ. ರೆವುಲೇಶನ್‌ ಮೈಂಡ್ಸ್‌ ಜೊತೆಗೆ ಕೈಜೋಡಿಸಿ ಬೆಡ್‌ಶೀಟ್‌ ವಿತರಿಸುವ ಅವರ ಕಾರ್ಯಕ್ಕೆ ಆರ್ಥಿಕ ಸಾಥ್‌ ನೀಡುತ್ತಿದ್ದೇವೆ’ ಎನ್ನುತ್ತಾರೆ ನೇಚರ್‌ ಫಸ್ಟ್‌ ಇಕೋ ವಿಲೇಜ್‌ನ ಅಧ್ಯಕ್ಷ ಪಿವಿ ಹಿರೇಮಠ.

‘ಮಕ್ಕಳ ನಿರ್ಲಕ್ಷ್ಯದಿಂದ ಮನೆಯಿಂದ ಹೊರಬಂದ ತಂದೆ–ತಾಯಿ, ಕುಟುಂಬ ಇಲ್ಲದೆ ಬೀದಿ ಬದಿಯಲ್ಲಿ ಮಲಗುವರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು, ರಾತ್ರಿ ಪಾಳೆ ಮಾಡುವ ಶಾಲಾ–ಕಾಲೇಜುಗಳ ಸೆಕ್ಯೂರಿಟಿ ಗಾರ್ಡ್‌ಗಳು, ಕಟ್ಟಡ ಕಾಯುವ ಬಗ್ಗೆಯೂ ಕಾಳಜಿ ವಹಿಸುವ ದೃಷ್ಠಿಯಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ. ಈಗಾಗಲೇ ಹುಬ್ಬಳ್ಳಿಯಲ್ಲಿ ಅವರು ಬೆಡ್‌ಶೀಟ್‌ ವಿತರಣಾ ಕಾರ್ಯ ಮಾಡುತ್ತಿದ್ದಾರೆ. ಧಾರವಾಡದಲ್ಲಿ ಬೆಡ್‌ಶೀಟ್‌ ಜೊತೆಗೆ ಆಹಾರವನ್ನು ನೀಡಲು ಯೋಚಿಸಿದ್ದೇವೆ. ಸುಮಾರು 400 ಜನರಿಗೆ ಬೆಡ್‌ಶೀಟ್‌ ವಿತರಿಸುವ ಗುರಿ ಹೊಂದಿದ್ದೇವೆ’ ಎಂದು ತಮ್ಮ ಯೋಜನೆಯ ಬಗ್ಗೆ ತಿಳಿಸಿದರು.

‘ಸಾಮಾಜಿಕ ಜಾಲತಾಣಗಳನ್ನು ಬಳಸುವಲ್ಲಿ ಯುವಜನತೆ ಬ್ಯುಸಿ ಆಗಿದ್ದಾರೆ. ಅವರು ಅದರಿಂದ ಹೊರಬಂದು ಸಾಮಾಜಿಕ, ಆರ್ಥಿಕ, ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಶೇ 80ರಷ್ಟು ವಿದ್ಯಾರ್ಥಿಗಳು ಶಿಕ್ಷಣದ ನಂತರ ನಿರುದ್ಯೋಗಸಮಸ್ಯೆಯನ್ನು ಎದುರಿಸುತ್ತಾರೆ. ಅದರ ಬದಲು ಶಿಕ್ಷಣ ಪಡೆಯುವಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಜನಸಂಪರ್ಕ ಬೆಳೆಯುತ್ತದೆ’ ಎಂದು ಯುವಕರಿಗೆ ಕಿವಿಮಾತು ಹೇಳಿದರು.

ಸಮಾಜ ಕಾರ್ಯಕ್ಕೆ ಬೆಂಬಲ

ಸಮಾಜ ಕಾರ್ಯ ಮಾಡಲು ಮುಂದಾಗುವ ಯಾವುದೇ ಎನ್‌ಜಿಒಗಳಿಗೆ ‘ನೇಚರ್‌ ಫಸ್ಟ್‌ ಇಕೋ ವಿಲೇಜ್‌’ ಕಡೆಯಿಂದ ಆರ್ಥಿಕ ಸಹಾಯ ಮಾಡುತ್ತೇವೆ. ಒಟ್ಟಿನಲ್ಲಿ ಯುವಜನರು ಸಾಮಾಜಿಕ ಚಟುವಟಿಕೆಗಳಿಗೆ ಮುಂದಾಗಬೇಕು. ಒಳ್ಳೆಯ ಕೆಲಸಗಳಿಗೆ ಮುಂದಾಗಬೇಕು. ಅವರಲ್ಲಿ ದೇಶ, ಸಮಾಜದ ಕುರಿತು ಜವಾಬ್ದಾರಿ ಬೆಳೆಯಬೇಕು ಎನ್ನುತ್ತಾರೆ ಹಿರೇಮಠ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT