ಸೋಮವಾರ, ಜುಲೈ 4, 2022
21 °C

ಮತ ಕೇಳುವ ನೈತಿಕ ಹಕ್ಕು ಬಿಜೆಪಿ ಕಳೆದುಕೊಂಡಿದೆ: ಎಚ್‌.ಕೆ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹಾಗೂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 10 ವರ್ಷ ಆಡಳಿತ ನಡೆಸಿದ್ದರೂ ಇನ್ನೂ ಅವಳಿನಗರ ಅಭಿವೃದ್ಧಿಯಾಗಿಲ್ಲ. ಅದರ ವೈಫಲ್ಯದ ಸಂಪೂರ್ಣ ಹೊಣೆ ಬಿಜೆಪಿಯೇ ಹೊರಬೇಕಾಗಿದ್ದು, ಜನರ ಬಳಿ ಮತ ಕೇಳುವ ನೈತಿಕ ಹಕ್ಕು ಕಳೆದುಕೊಂಡಿದೆ’ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವಳಿನಗರದ ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಪರವಾಗಿ ಪಾದಯಾತ್ರೆ ನಡೆಸಿ, ಮುಖಂಡರ ಜೊತೆ ಚರ್ಚಿಸಿದ್ದೇನೆ. ನಗರದ ರಸ್ತೆ, ಕುಡಿಯುವ ನೀರಿನ ಸೌಲಭ್ಯದ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರ್ಧಮರ್ಧ ಕಾಮಗಾರಿಯಿಂದ ಜನತೆ ಬೇಸತ್ತಿದ್ದು, ಇಷ್ಟು ವರ್ಷ ಆಡಳಿತ ನಡೆಸಿದ ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ’ ಎಂದರು.

‘ಕೋವಿಡ್‌ನಿಂದಾಗಿ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಯಾಗಿದ್ದಾರೆ. ಒಪ್ಪತ್ತಿನ ಊಟಕ್ಕೂ ಬಡವರು ಪರದಾಡುತ್ತಿದ್ದಾರೆ. ಇದೇ ವೇಳೆ ಸರ್ಕಾರ ತೈಲ ಬೆಲೆ, ಅಡುಗೆ ಅನಿಲದ ಬೆಲೆ ಹೆಚ್ಚಳ ಮಾಡಿ, ಅವರ ಬದುಕಿನ ಮೇಲೆ ಬರೆ ಎಳೆಯಿತು. ಬಡವರಿಗೆ ಪಡಿತರದ ಮೂಲಕ ನೀಡುತ್ತಿರುವ ಅಕ್ಕಿ ಪ್ರಮಾಣ ಕಡಿಮೆ ಮಾಡಿತು. ಸಂಕಷ್ಟದ ಮೇಲೆ ಸಂಕಷ್ಟ ತಂದೊಡ್ಡಿ ಅವರ ಬದುಕನ್ನೇ ಕೇಂದ್ರ ಸರ್ಕಾರ ನಿರ್ನಾಮ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಸರ್ಕಾರದ ಆಸ್ತಿಯಾದ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಅದಿರು ಗಣಿ, ಬಂದರು, ಕ್ರೀಡಾಂಗಣ ಹೀಗೆ ಪ್ರತಿಯೊಂದನ್ನು ನಿರ್ಹಹಣೆ ಹೆಸರಲ್ಲಿ ಕೇಂದ್ರ ಸರ್ಕಾರ ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ ಆಸ್ತಿಯನ್ನು, ಇವರು ಏಳು ವರ್ಷದಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಖಾಸಗೀಕರಣ ಯಾರಿಗಾಗಿ’ ಎಂದು ಪ್ರಶ್ನಿಸಿದ, ಎಚ್‌.ಕೆ. ಪಾಟೀಲ, ‘ಜನರ ಹಕ್ಕು ಕಿತ್ತುಕೊಳ್ಳುವ ಹುನ್ನಾರ ಇದಾಗಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ರುದ್ರಪ್ಪ ಲಮಾಣಿ, ಅನಿಲಕುಮಾರ ಪಾಟೀಲ, ವಸಂತ ಲದ್ವಾ, ಶಿರಾಜ್‌ಅಹ್ಮದ್ ಕುಡಚಿವಾಲೆ, ಸದಾನಂದ ಡಂಗನವರ, ಮಹೇಂದ್ರ ಸಿಂಘಿ, ಗಿರೀಶ ಗದಿಗೆಪ್ಪಗೌಡರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು