ಶುಕ್ರವಾರ, ಆಗಸ್ಟ್ 6, 2021
21 °C
ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನ

ಪಠ್ಯಪುಸ್ತಕದ ಕೊರತೆ ನೀಗಿಸುತ್ತಿರುವ ‘ಬುಕ್‌ ಬ್ಯಾಂಕ್‌‘

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಜುಲೈ 1 ರಿಂದ ಶಾಲೆಗಳು ಆರಂಭವಾಗಲಿವೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಪಠ್ಯಪುಸ್ತಕಗಳು ಇನ್ನೂ ಮುದ್ರಣವಾಗಿಲ್ಲ. ಮಕ್ಕಳಿಗೆ ತೊಂದರೆಯಾಗಬಾರದು ಎಂದು ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯು ‘ಬುಕ್‌ ಬ್ಯಾಂಕ್‌’ ಆರಂಭಿಸುವ ಮೂಲಕ ಪಠ್ಯಪುಸ್ತಕಗಳ ಕೊರತೆ ನೀಗಿಸಲು ಮುಂದಾಗಿದೆ.

ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಪಠ್ಯಪುಸ್ತಕಗಳನ್ನು ಸಂಗ್ರಹಿಸಿ, ಈ ವರ್ಷದ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವುದೇ ಬುಕ್‌ ಬ್ಯಾಂಕ್‌ ಉದ್ದೇಶ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ 60,125 ಪಠ್ಯಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹ ಕಾರ್ಯ ಇನ್ನೂ ಮುಂದುವರೆದಿದೆ.

ಒಂದರಿಂದ ಒಂಬತ್ತನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಆಯಾ ಶಾಲಾ ಶಿಕ್ಷಕರ ಮೂಲಕ ಸಂಗ್ರಹಿಸಲಾಗುತ್ತಿದೆ. ಬಿಸಿಯೂಟದ ಆಹಾರ ಧಾನ್ಯ ತೆಗೆದುಕೊಂಡು ಹೋಗಲು ಬರುವ ಪೋಷಕರು ಹಿಂದಿನ ವರ್ಷದ ಪಠ್ಯಪುಸ್ತಕಗಳೊಂದಿಗೆ ಬಂದು, ಈ ವರ್ಷದ ಪಠ್ಯಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

‘ಮಕ್ಕಳು ಭೌತಿಕವಾಗಿ ಶಾಲೆಗೆ ಬರದಿದ್ದರೂ, ಮನೆಯಲ್ಲಿದ್ದು ಆನ್‌ಲೈನ್‌ ತರಗತಿ, ‘ಚಂದನ’ದಲ್ಲಿ ಬರುವ ಪಾಠ ಕೇಳಿದರೂ, ನಂತರದಲ್ಲಿ ಪಠ್ಯಪುಸ್ತಕದಲ್ಲಿ ಪುನರ್‌ಮನನಕ್ಕೆ ಅನುಕೂಲವಾಗಲಿದೆ’ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲಾ ಉಪನಿರ್ದೇಶಕ ಎಂ.ಎಲ್‌. ಹಂಚಾಟೆ.

‘ರಾಜ್ಯ ಸರ್ಕಾರದಿಂದಲೇ ಪ್ರತಿ ವರ್ಷ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ, ಅನುದಾನಿತ ಶಾಲೆಗಳ ಮಕ್ಕಳಿಗೆ ಪುಸ್ತಕದ ಬೆಲೆ ಪಾವತಿಸಿಕೊಂಡು ವಿತರಣೆ ಮಾಡಲಾಗುತ್ತಿತ್ತು. ಲಾಕ್‌ಡೌನ್‌ ಇರುವುದರಿಂದ ಈ ಬಾರಿ ಪಠ್ಯಪುಸ್ತಕಗಳು ಬರುವುದು ವಿಳಂಬವಾಗಲಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಬುಕ್‌ ಬ್ಯಾಂಕ್‌ ಆರಂಭಿಸಿದ್ದೇವೆ’ ಎಂದರು.

‘ಶಿಕ್ಷಕರ ಮೂಲಕ ಗ್ರಾಮಗಳಲ್ಲಿ ವಿಷಯ ತಿಳಿಸಿದ ಮೇಲೆ ಉತ್ತಮ ಪ್ರತಿಕ್ರಿಯೆ ಬಂದಿದೆ. ನಿತ್ಯ ಪುಸ್ತಕಗಳನ್ನು ತಂದುಕೊಡುತ್ತಿದ್ದಾರೆ. ಅವುಗಳನ್ನು ವಿದ್ಯಾರ್ಥಿಗಳಿಗೆ ಹಂಚುವ ಕಾರ್ಯವೂ ನಡೆದಿದೆ’ ಎಂದು ಹೇಳಿದರು.

******

ಹೊಸ ಪಠ್ಯಪುಸ್ತಕ ಬರುವವರೆಗೂ ಹಳೆಯ ಪುಸ್ತಕ ಸಂಗ್ರಹಿಸಿ ಮಕ್ಕಳಿಗೆ ನೀಡುತ್ತಿದ್ದೇವೆ. ಹೊಸದು ಬಂದ ಮೇಲೆ ಅವುಗಳನ್ನೂ ನೀಡಲಾಗುವುದು

-ಎಂ.ಎಲ್‌ ಹಂಚಾಟೆ, ಡಿಡಿಪಿಐ, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು