ಹುಬ್ಬಳ್ಳಿ: ಭಾರತೀಯ ಬೌದ್ಧ ಮಹಾಸಭಾ ಧಾರವಾಡ ಜಿಲ್ಲಾ ಶಾಖೆ ವತಿಯಿಂದ ಸೆ.29ರಂದು ರಾಜ್ಯಮಟ್ಟದ ಪ್ರಥಮ ಬೌದ್ಧ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.
‘ಬೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರದ ಅಂಬೇಡ್ಕರ್ ಭವನದಲ್ಲಿ ಬೆಳಿಗ್ಗೆ 9.30ಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆ’ ಎಂದು ಮಹಾಸಭಾದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
11 ಗಂಟೆಗೆ ಮೊದಲ ಗೋಷ್ಠಿ ಆರಂಭಗೊಳ್ಳಲಿದ್ದು, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಟಿ.ಎಂ. ಭಾಸ್ಕರ, ಗದಗ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಗೊಳಸಂಗಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ನಡೆಯಲಿರುವ ಎರಡನೇ ಗೋಷ್ಠಿಯಲ್ಲಿ ಕಲಬುರಗಿಯ ಗೋದುತಾಯಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಪುಟ್ಟಮಣಿ ದೇವಿದಾಸ, ನಿವೃತ್ತ ಪ್ರಾಧ್ಯಾಪಕ ಧನವಂತ ಹಾಜವಗೋಳ, ಸಾಹಿತಿ ಚಂದ್ರಕಾಂತ ಪೋಸ್ತೆ ಭಾಗಿಯಾಗಲಿದ್ದಾರೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ.