ಸೋಮವಾರ, ಫೆಬ್ರವರಿ 24, 2020
19 °C
ಒಣ ಮೆಣಸಿನಕಾಯಿ ಮೇಳದಲ್ಲಿ ವ್ಯಾಪಾರವಿಲ್ಲದೇ ಕಣ್ಣೀರಿಡುತ್ತಿರುವ ರೈತರು

ಹುಬ್ಬಳ್ಳಿ: ವ್ಯಾಪಾರಸ್ಥರ ಕರಾಮತ್ತು; ಬೆಳಗಾರರು ಕಂಗಾಲು

ನಾಗರಾಜ್ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅಮರಗೋಳ ಎಪಿಎಂಸಿಯಾಗ ನಮ್ಮಿಂದನಾ ಒಣಮೆಣಸಿನಕಾಯಿ ಖರೀದಿಸಿದವ್ರು, ಈಗ ನಮ್ಮುಂದನಾ ಮೆಣಸಿನಕಾಯಿ ವ್ಯಾಪಾರ ಮಾಡಿದ್ರ, ಮೆಣಸಿಕಾಯಿ ಬೆಳೆದ ರೈತ ಎಲ್ಲೋಗಬೇಕು’

ನಗರದ ಮೂರುಸಾವಿರಮಠದ ಪ್ರೌಢಶಾಲೆ ಆವರಣದಲ್ಲಿ ನಡೆಯುತ್ತಿರುವ ಒಣ ಮೆಣಸಿನಕಾಯಿ ಮೇಳದಲ್ಲಿ ಪಾಲ್ಗೊಂಡಿರುವ ರೈತರ ನೋವಿನ ಮಾತುಗಳು ಇವು!

ಶನಿವಾರದಿಂದ ಆರಂಭವಾಗಿರುವ ಈ ಮೇಳದಲ್ಲಿ ಒಟ್ಟು 69 ಮಳಿಗೆಗಳಿದ್ದು, ಎರಡು ದಿನ ಭರ್ಜರಿಯಾಗಿ ಮೆಣಸಿನಕಾಯಿ ವ್ಯಾಪಾರವಾಗಿದೆ. ಆದರೆ, ಒಣಮೆಣಸಿನಕಾಯಿ ಬೆಳೆದ ರೈತರು ಮಾತ್ರ ತಾವು ತಂದ ಮಾಲು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗುತ್ತಿಲ್ಲ ಎಂದು ಅಳಲೊತ್ತಿಕೊಂಡರು.

‘ಐದು ವರ್ಷದಿಂದ ಮೇಳಕ್ಕೆ ಬರುತ್ತಿದ್ದೇನೆ. ಪ್ರತೀ ವರ್ಷ ಐದು ಕ್ವಿಂಟಲ್‌ನಷ್ಟು ಒಣಮೆಣಸಿನಕಾಯಿ ಮಾರಾಟ ಮಾಡುತ್ತಿದ್ದೆ. ಈ ವರ್ಷ ಅತಿ ವೃಷ್ಟಿಯಿಂದ ಇಳವರಿ ಕಡಿಮೆ ಬಂದಿದೆ. ಇದರಿಂದ ದರವೂ ಹೆಚ್ಚಾಗಿದೆ. ಆದರೆ, ವ್ಯಾಪಾರಸ್ಥರು ಕಳೆದ ವರ್ಷದ ಮೆಣಸಿನಕಾಯಿ ತಂದು ಕಡಿಮೆ ಬೆಲೆಗೆ ಮಾರುತ್ತಿದ್ದಾರೆ. ಇದರಿಂದ, ನಾವು ಬೆಳೆದ ಮೆಣಸಿನಕಾಯಿ ಖರೀದಿಸುವವರೇ ಇಲ್ಲ’ ಎಂದು ಕುಂದಗೋಳದ ರೈತ ಮುದುಕಪ್ಪ ಶಿರಸಂಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತರು ಒಂದು ಅಥವಾ ಎರಡು ಬಗೆಯ ಒಣಮೆಣಸಿನಕಾಯಿ ಮಾತ್ರ ಬೆಳೆಯುತ್ತಾರೆ. ಮೇಳದಲ್ಲಿರುವ ಶೇ 90 ರಷ್ಟು ಮಳಿಗೆಗಳಲ್ಲಿ ಐದಾರು ಬಗೆಯ ಒಣಮೆಣಸಿನಕಾಯಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿಯೇ ಗೊತ್ತಾಗುತ್ತದೆ, ವ್ಯಾಪಾರಸ್ಥರು ಯಾರು, ರೈತರು ಯಾರು ಎಂದು. ನಮ್ಮಿಂದಲೇ ಮೆಣಸಿನಕಾಯಿ ಖರೀದಿ ಮಾಡಿರುವ ವ್ಯಾಪಾರಸ್ಥರು ರೈತರ ಹೆಸರಲ್ಲಿ ವ್ಯಾಪಾರ ಮಾಡುತ್ತಿದ್ದಾರೆ’ ಎಂದು ನವಲಗುಂದದ ರೈತ ದಾದಾಪೀರ್‌ ಕಳ್ಳಿಮನಿ ಆರೋಪಿಸಿದರು.

ಪರಿಶೀಲಿಸಲಾಗುವುದು

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ನಾರಾಯಣಪುರ, ‘ಅತಿವೃಷ್ಟಿಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆ ಬಂದಿಲ್ಲ. ಅಲ್ಪ ಸ್ವಲ್ಪ ಬೆಳೆದವರನ್ನು ಸಹ ಮೇಳಕ್ಕೆ ಬರಬೇಕೆಂದು ಒತ್ತಾಯಿಸಿ ಆಹ್ವಾನಿಸಿದ್ದೇವೆ. ವ್ಯಾಪಾರಸ್ಥರು ರೈತರ ಹೆಸರಲ್ಲಿ ವ್ಯಾಪಾರ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ಆ ಕುರಿತು ಪರಿಶೀಲಿಸುತ್ತೇವೆ’ ಎಂದರು.

₹35 ಲಕ್ಷ ವಹಿವಾಟು

ಮೇಳದ ಎರಡನೇ ದಿನವಾದ ಭಾನುವಾರ ಧಾರವಾಡ ಜಿಲ್ಲೆ ಮಾತ್ರವಲ್ಲದೇ ನೆರೆಯ ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಿಂದಲೂ ಗ್ರಾಹಕರು ಬಂದು ಒಣ ಮೆಣಸಿನಕಾಯಿ ಖರೀಸಿದ್ದಾರೆ. ಅಂದಾಜು 14 ಟನ್‌ ವ್ಯಾಪಾರವಾಗಿದ್ದು, ₹35 ಲಕ್ಷ ವ್ಯವಹಾರವಾಗಿದೆ. ಶನಿವಾರ ₹17 ಲಕ್ಷ ವಹಿವಾಟು ಆಗಿದೆ ಎಂದು ನಾರಾಯಣಪುರ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು