ಭಾನುವಾರ, ಸೆಪ್ಟೆಂಬರ್ 19, 2021
24 °C
ಅ. 2ರಿಂದ 82 ವಾರ್ಡ್‌ಗಳಲ್ಲಿ ನಿರಂತರ ಸಭೆ, ಸಮಾಲೋಚನೆ, ಪ್ರತಿಭಟನೆ ನಡೆಸಲು ಡಿಕೆಶಿ ಸೂಚನೆ

ಹುಬ್ಬಳ್ಳಿ: 82 ವಾರ್ಡ್‌ಗಳಲ್ಲಿ ಅ. 2ರಿಂದ ತಿಂಗಳ ಪರ್ಯಂತ ಕಾರ್ಯಕ್ರಮ-ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಲ್ಲಿ ಅ. 2ರಿಂದ ಒಂದು ತಿಂಗಳು ನಿರಂತರವಾಗಿ ಕಾರ್ಯಕರ್ತರ ಸಭೆ, ಮತದಾರರ ಜೊತೆ ಸಮಾಲೋಚನೆ ಹಾಗೂ ಸರ್ಕಾರದ ದುರಾಡಳಿತದ ವಿರುದ್ಧ ಪ್ರತಿಭಟನೆಗಳನ್ನು ನಡೆಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಹು–ಧಾ ಮಹಾನಗರ ಪಾಲಿಕೆಗೆ ಆಯ್ಕೆಯಾದ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಭಾನುವಾರ ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹಾಗೂ ಗೆದ್ದ ಅಭ್ಯರ್ಥಿಗಳು ಜೊತೆಯಾಗಿ ವಾರ್ಡ್‌ನಲ್ಲಿ ಕಾರ್ಯಕ್ರಮ ಆಯೋಜಿಸಬೇಕು. ಒಂದೊಂದು ವಿಧಾನ ಸಭಾ ಕ್ಷೇತ್ರಕ್ಕೆ ಒಬ್ಬರನ್ನು ವೀಕ್ಷಕರಾಗಿ ನೇಮಿಸಲಾಗುವುದು. ನಾನು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ. ಅದರ ಫೊಟೊ ಅಪ್‌ಲೋಡ್‌ ಮಾಡಲು ವಾಟ್ಸ್‌ಆ್ಯಪ್‌ ನಂಬರ್‌ ನೀಡಲಾಗುವುದು. ಸಂಸದರು, ಶಾಸಕರು ಎಲ್ಲರೂ ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು’ ಎಂದು ತಿಳಿಸಿದರು.

‘ರಾಜಕಾರಣ ನಿಂತ ನೀರಲ್ಲ. ಅದರ ಹುಟ್ಟು ಸಹ ನಮ್ಮದಲ್ಲ. ಆದರೆ, ಅದರಲ್ಲಿ ಬದುಕು ಮಾತ್ರ ನಮ್ಮದು. ಶ್ರಮ ಇದ್ದಲ್ಲಿ ಫಲ, ಮನಸ್ಸಿದ್ದಲ್ಲಿ ಮಾರ್ಗ, ಭಕ್ತಿ ಇದ್ದಲ್ಲಿ ಭಗವಂತ ಇರುತ್ತಾನೆ. ಜನರ ಸೇವೆಯಲ್ಲಿ ಇದ್ದರೆ ಅವರು ಯಾವತ್ತೂ ಕೈ ಬಿಡಲಾರರು. ಸೋತೆವೆಂದು ನಿರಾಸರಾಗದೆ, ಹೋರಾಟದ ಹಾದಿಯಲ್ಲಿ ಗೆಲುವು ಕಾಣಲು ಮುಂದಾಗಬೇಕು. ಪಕ್ಷಕ್ಕೆ ಆಧಾರ ಸ್ತಂಭವೇ ಕಾರ್ಯಕರ್ತರು. ಅವರ ಜೊತೆ ಮುಖಂಡರು ಉತ್ತಮ ಬಾಂಧವ್ಯ ಹೊಂದಿರಬೇಕು’ ಎಂದರು.

‘ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳೇ ಕ್ಷೇತ್ರದ ಹಾಗೂ ಮುಂಬರುವ ಚುನಾವಣೆಯ ಜವಾಬ್ದಾರಿ ಹೊರಬೇಕು. ಎಐಎಂಐಎಂ ವಿಧಾನ ಸಭಾ ಚುನಾವಣೆಗೆ ಸಮಸ್ಯೆಯಾಗದು. ಅದು ಸ್ಥಳೀಯ ವಿಷಯವಾಗಿದ್ದು, ಚಿಂತೆ ಮಾಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಪಾಲಿಕೆಗೆ ಚುನಾಯಿತರಾದ 33 ಅಭ್ಯರ್ಥಿಗಳನ್ನು ಸನ್ಮಾನಿಸಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಶಾಸಕರಾದ ಆರ್‌.ವಿ. ದೇಶಪಾಂಡೆ, ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಶ್ರೀನಿವಾಸ ಮಾನೆ ಹಾಗೂ ಶಿವಾನಂದ ಪಾಟೀಲ, ವೀರಣ್ಣ ಮತ್ತಿಗಟ್ಟಿ, ಇಸ್ಮಾಯಿಲ್ ತಮಟಗಾರ, ನಾಗರಾಜ ಛಬ್ಬಿ, ಅಲ್ತಾಫ್‌ ಹಳ್ಳೂರ, ಅನಿಲಕುಮಾರ ಪಾಟೀಲ, ಶಾಕೀರ್‌ ಸನದಿ, ಎ.ಎಂ. ಹಿಂಡಸಗೇರಿ, ಎಂ.ಎಸ್. ಅಕ್ಕಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು