ಭಾನುವಾರ, ಮೇ 22, 2022
25 °C
'ಶಂಕರಾಚಾರ್ಯರ ಸ್ತಬ್ಧಚಿತ್ರ ಕಳಿಸುವಂತೆಯೂ ಸೂಚಿಸಿಲ್ಲ'

ನಾರಾಯಣ ಗುರು ಸ್ತಬ್ಧಚಿತ್ರ ತಿರಸ್ಕರಿಸಿಲ್ಲ: ಜೋಶಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಗಣರಾಜ್ಯೋತ್ಸವ ಅಂಗವಾಗಿ ಕೇರಳ ರಾಜ್ಯ ಕಳಿಸಿದ್ದ ನಾರಾಯಣ ಗುರು ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಹಾಗೂ ಶಂಕರಾಚಾರ್ಯರ ಸ್ತಬ್ಧಚಿತ್ರ ಕಳಿಸುವಂತೆ ಸೂಚಿಸಿದೆ ಎಂಬುದು ಸುಳ್ಳು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ದೇಶದಲ್ಲಿ 36 ರಾಜ್ಯಗಳಿವೆ. ಪ್ರತಿ ವರ್ಷ 12 ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವಕ್ಕೆ ಆಯ್ಕೆ ಮಾಡಲಾಗುತ್ತದೆ. ಇದಕ್ಕೆ ಲಿಖಿತವಾದ ಯಾವುದೇ ನಿಯಮಗಳಿಲ್ಲ’ ಎಂದರು.

‘ಆದರೂ, ಮೂರು ವರ್ಷಕ್ಕೊಮ್ಮೆ ಪ್ರತಿ ರಾಜ್ಯದ ಸ್ತಬ್ಧಚಿತ್ರಗಳು ಆಯ್ಕೆಯಾಗುವುದು ಅಲಿಖಿತ ನಿಯಮ. 2018 ಮತ್ತು 2021ರಲ್ಲಿ ಕೇರಳದ ಸ್ತಬ್ಧಚಿತ್ರಗಳು ಆಯ್ಕೆಯಾಗಿದ್ದವು. ಹಾಗಾಗಿ, ಈ ಸಲ ಬೇರೆ ರಾಜ್ಯಗಳಿಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಆರಂಭಿಸಿದ ಈ ನಿಯಮವನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದರು.

‘ನಾರಾಯಣ ಗುರು ಹಾಗೂ ಶಂಕರಾಚಾರ್ಯ ಇಬ್ಬರೂ ಸಮಾಜ ಸುಧಾರಣೆಗೆ ಮಹತ್ತರ ಕೊಡುಗೆ ನೀಡಿದ್ದಾರೆ. ನಾರಾಯಣ ಗುರು ಅವರ ಪ್ರತಿಮೆ ಒಡೆದು ಹಾಕಿದ್ದ  ಕಮ್ಯುನಿಸ್ಟ್ ಸರ್ಕಾರವೇ ಈ ವಿಷಯದಲ್ಲಿ ರಾಜಕಾರಣ ಮಾಡಲು ಮುಂದಾಗಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಈ ಬೆಳವಣಿಗೆ ಕುರಿತು ತಪ್ಪು ಹೇಳಿಕೆ ನೀಡುವುದಕ್ಕೂ ಮುಂಚೆ, ಸತ್ಯಾಸತ್ಯತೆ ಅರಿಯಬೇಕು’ ಎಂದರು.

‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಐದೂ ವರ್ಷ ರಾಜ್ಯದ ಸ್ತಬ್ಧಚಿತ್ರಗಳು ಗಣ ರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಿರಲಿಲ್ಲವೇ?’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ವಿಶೇಷ ಸಂದರ್ಭದಲ್ಲಿ ಮಾತ್ರ ಆ ರೀತಿ ಅವಕಾಶ ನೀಡಲಾಗುತ್ತದೆ’ ಎಂದು ಜಾರಿಕೊಂಡರು.

‘ಪಂಚ ರಾಜ್ಯಗಳ ಪೈಕಿ, ನಾಲ್ಕರಲ್ಲಿ ಬಿಜೆಪಿ ಸರ್ಕಾರವಿತ್ತು. ಚುನಾವಣೆ ಬಳಿಕವೂ ಉತ್ತರಪ್ರದೇಶ ಸೇರಿದಂತೆ ನಾಲ್ಕೂ ಕಡೆ ಮತ್ತೆ ಪಕ್ಷ ಅಧಿಕಾರಕ್ಕೆ ಬರಲಿದೆ. ಪಂಜಾಬ್‌ನಲ್ಲಿ ಸವಾಲು ಇದ್ದು, ಪಕ್ಷ ಅದನ್ನು ಸಮರ್ಥವಾಗಿ ಎದುರಿಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.‌

‘ವಾರಾಂತ್ಯ ಕರ್ಫ್ಯೂ ಅಗತ್ಯವಿಲ್ಲ’

‘ಹೆಚ್ಚುತ್ತಿರುವ ಕೋವಿಡ್–19 ಪ್ರಕರಣಗಳ ನಿಯಂತ್ರಣಕ್ಕೆ ಲಾಕ್‌ಡೌನ್ ಹಾಗೂ ವಾರಾಂತ್ಯ ಕರ್ಫ್ಯೂ ಜಾರಿ ಅಗತ್ಯವಿಲ್ಲ. ಹಾಗೆ ಮಾಡುವುದರಿಂದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಪ್ರಲ್ಹಾದ ಜೋಶಿ ಹೇಳಿದರು.

‘ಸಣ್ಣ ಮೈಕ್ರೊ ಕಂಟೈನ್‌ಮೆಂಟ್ ವಲಯಗಳ ರಚನೆ ಹಾಗೂ ಸೋಂಕಿತರು ಮತ್ತು ಅವರ ಸಂಪರ್ಕಕ್ಕೆ ಬಂದವರ ಪತ್ತೆಗೆ ವ್ಯವಸ್ಥೆ ಮಾಡಿಕೊಂಡು, ಸೋಂಕು ನಿಯಂತ್ರಿಸುವಂತೆ ರಾಜ್ಯಗಳಿಗೆ ಈಗಾಗಲೇ ಸೂಚಿಸಲಾಗಿದೆ’ ಎಂದರು.

‘ದೇಶದಲ್ಲಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆದಿದೆ. ಸೋಂಕಿತರ ಚಿಕಿತ್ಸೆಗಾಗಿ ವೈದ್ಯಕೀಯ ಆಮ್ಲಜನಕ ಸೇರಿದಂತೆ ಹಲವು ಸೌಲಭ್ಯಗಳನ್ನು ಆಸ್ಪತ್ರೆಗಳಿಗೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು