ಮಂಗಳವಾರ, ಮಾರ್ಚ್ 21, 2023
24 °C

ಮೂರು ತಿಂಗಳಲ್ಲಿ 2.18 ಲಕ್ಷ ಮಂದಿಗೆ ಉದ್ಯೋಗ: ಕೇಂದ್ರ ಸಚಿವ ಖೂಬಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಹುಬ್ಬಳ್ಳಿ: 'ಕೇಂದ್ರ ಸರ್ಕಾರ ದೇಶದಲ್ಲಿ ಪ್ರತಿವರ್ಷ 10 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಿದ್ದು, ಮೂರು ತಿಂಗಳಲ್ಲಿ 2.18 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿದೆ' ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಬಿವಿಬಿ ಎಂಜಿನಿಯರಿಂಗ್ ಹಾಗೂ ತಾಂತ್ರಿಕ ಕಾಲೇಜಿನ ಬಯೋಟೆಕ್ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

'ಈ ಮೇಳದಲ್ಲಿ 206 ಮಂದಿಗೆ ನೇಮಕಾತಿ ಪತ್ರ ನೀಡಲಾಗಿದ್ದು, ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಯಾರಿಂದಲೂ ಹಣ ಪಡೆಯದೆ, ಶಿಫಾರಸ್ಸಿಗೂ ಮಣೆ ಹಾಕದೆ ಅಭ್ಯರ್ಥಿಗಳನ್ನು‌ ಆಯ್ಕೆ ಮಾಡಲಾಗಿದೆ' ಎಂದರು.

'ವಿಶ್ವದಾದ್ಯಂತ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ, ದೇಶದ ಅರ್ಥವ್ಯವಸ್ಥೆ ಮಾತ್ರ ಸದೃಢವಾಗಿದೆ. ಆತ್ಮ‌ ನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಸೇರಿದಂತೆ ಕೇಂದ್ರದ ವಿವಿಧ ಮಹತ್ವಾಕಾಂಕ್ಷಿ ಯೋಜನೆಗಳಿಂದ ವಿಶ್ವವೇ ಭಾರತವನ್ನು ತಿರುಗಿ ನೋಡುವಂತಾಗಿದೆ. ದೇಶದ ಯುವಜನತೆ ಹೊಸ ಉದ್ಯಮಗಳನ್ನು ಸ್ಥಾಪಿಸಿ, ಸಾಕಷ್ಟು ಮಂದಿಗೆ ಉದ್ಯೋಗ ನೀಡುವ ಸಾಮರ್ಥ್ಯಕ್ಕೆ ಬೆಳೆದಿದೆ' ಎಂದರು.

ಶಾಸಕ ಜಗದೀಶ ಶೆಟ್ಟರ್, 'ಪ್ರಧಾನಿ ನರೇಂದ್ರ‌ ಮೋದಿ ಅವರ ಆಡಳಿತದಿಂದ ದೇಶದಲ್ಲಿ ಅಭಿವೃದ್ಧಿ ಪರ್ವವೇ ನಡೆದಿದ್ದು, ಸಾಕಷ್ಟು ಕ್ಷೇತ್ರಗಳಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ. ಯುವ ಸಮುದಾಯ ಸ್ವಾವಲಂಬಿಯಾಗಿ, ದೇಶದ ಆರ್ಥಿಕ ವೃವಸ್ಥೆಗೆ ಕೊಡುಗೆ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿವೆ' ಎಂದು ಹೇಳಿದರು.

ಆದಾಯ ತೆರಿಗೆ ಮುಖ್ಯ ಆಯುಕ್ತರಾದ ಚೈತಾಲಿ ಕನ್ಮಯಿ, ಮನೋಜ್ ಜೋಶಿ, ವಂದನಾ ಸಾಗರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು