ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಡಾಕ್ಟ್ರು ಅಂದ್ರ ಶೇಪೂರ ಅಜ್ಜ...

ವೈದ್ಯರ ದಿನದ ವಿಶೇಷ
Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ವಿಚಾರಣೆಗೆ ಇಷ್ಟು, ತಪಾಸಣೆಗೆ ಇಷ್ಟು, ಮಾತ್ರೆಗೆ ಇಷ್ಟು, ಇಂಜೆಕ್ಷನ್‌ಗೆ ಮತ್ತಷ್ಟು ಎಂದು ಹೇಳಿ ಶುಲ್ಕ ನಿಗದಿ ಮಾಡುವ ಕಾಲದಲ್ಲಿ, ಮಕ್ಕಳ ಆರೋಗ್ಯ ತಪಾಸಣೆ ಎಂತಹದ್ದೇ ಇರಲಿ ಅದನ್ನು ಮೊದಲು ಮಾಡಿ, ಸೂಕ್ತ ಚಿಕಿತ್ಸೆ ನೀಡುವುದೇ ಡಾ. ಟಿ.ಎ. ಶೇಪೂರ‌ ಅವರ ನಿತ್ಯ ಕಾಯಕ. ಇಂತಿಷ್ಟೇ ಹಣ ನೀಡಬೇಕು ಎಂದೇ ಕೇಳದ ‘ಶೇಪೂರ‌ ಅಜ್ಜ’ ₹50 ಮಾತ್ರ ತೆಗೆದುಕೊಳ್ಳುತ್ತಾರೆ. ಅದೂ ಸಾಧ್ಯವಿಲ್ಲ ಎನ್ನುವವರಿಗೆ ಒತ್ತಾಯವನ್ನೂ ಮಾಡುವುದಿಲ್ಲ. ಹುಬ್ಬಳ್ಳಿ ಹಾಗೂ ಸುತ್ತಮುತ್ತಲ ಜನರು ಇವರಲ್ಲಿಗೆ ಬಂದು ಮಕ್ಕಳಿಗೆ ಚಿಕಿತ್ಸೆ ಕೊಡಿಸುತ್ತಾರೆ. ಇವರು ಈ ಭಾಗದಲ್ಲಿ ಜನಪ್ರಿಯ ಮಕ್ಕಳ ತಜ್ಞ.

ನಿತ್ಯ ಬೆಳಿಗ್ಗೆ 5.30ಕ್ಕೆ ಏಳುವುದು, ವಾಕಿಂಗ್‌, ನಿರಂತರ ಓದು, ಮನೆಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ, ಧಾರವಾಡದ ಸಿವಿಲ್ ಆಸ್ಪತ್ರೆಗೆ ತೆರಳಿ ಅಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ, ಸಂಜೆ ಮನೆಗೆ ಮರಳಿ ಮತ್ತೆ ಮಕ್ಕಳ ತಪಾಸಣೆ. ಮಕ್ಕಳ ಪಾಲಿಗೆ ಪ್ರೀತಿಯ ಅಜ್ಜ ಎನಿಸಿಕೊಂಡಿರುವ ಮಕ್ಕಳ ತಜ್ಞ ತಿಪ್ಪೇರುದ್ರ ಅನಂತಪ್ಪ (ಟಿ.ಎ) ಶೇಪೂರಅವರ ದಿನಚರಿ ಇದು. 63ರ ಇಳಿ ವಯಸ್ಸಿನಲ್ಲಿಯೂ ಹರೆಯ ಹುಡುಗರಂತೆ ಜೀವನ ಪ್ರೀತಿ. ಈಗಲೂ ನಿರಂತರ ಓದು ಮತ್ತು ವೈದ್ಯಕೀಯ ಲೋಕದ ಹೊಸ ಸಂಶೋಧನೆಗಳನ್ನು ತಿಳಿದುಕೊಳ್ಳಬೇಕು ಎನ್ನುವ ತುಡಿತ.‌ ಮಳೆ ಇರಲಿ, ಚಳಿ ಬರಲಿ ಅವರ ನಿತ್ಯದ ವೇಳಾಪಟ್ಟಿ ಮಾತ್ರ ಬದಲಾಗುವುದಿಲ್ಲ.

ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ವಾಸವಾಗಿರುವ ಶೇಪೂರ ಡಾಕ್ಟ್ರು ಎಂದರೆ ಹುಬ್ಬಳ್ಳಿ, ಧಾರವಾಡ ಹಾಗೂ ಸುತ್ತಮುತ್ತಲಿನ ಜನರಿಗೆ ಅತೀವ ನಂಬಿಕೆ. ಹಳ್ಳಿಗಳಿಂದ ಮನೆಗೆ ಹಾಗೂ ಸಿವಿಲ್‌ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವವರು ‘ಶೇಪೂರ ಡಾಕ್ಟ್ರು ಕೈಗುಣ ಬಾರಿ ಮಸ್ತ್‌ ಅದಾರಿ...’ ಎನ್ನುತ್ತಾರೆ. ಮಕ್ಕಳಿಗೆ, ನವಜಾತ ಶಿಶುಗಳಿಗೆ ಇಂಜೆಕ್ಷನ್‌ ಮಾಡುವುದಿಲ್ಲ. ವಿನಾಕಾರಣ ಪೋಷಕರನ್ನು ಗಾಬರಿಗೊಳಿಸಿ ಆತಂಕಕ್ಕೆ ದೂಡುವುದಿಲ್ಲ. ಚಿಕಿತ್ಸಾ ವಿಧಾನದ ಜೊತೆಗೆ ಮನೆ ಮದ್ದಿಗೂ ಸಲಹೆ ನೀಡುತ್ತಾರೆ.

ಶೇಪೂರ ಅವರು 1976ರಿಂದ 82ರವರೆಗೆ ಬಳ್ಳಾರಿಯ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಓದಿದ್ದಾರೆ. ಹುಬ್ಬಳ್ಳಿ ಕಿಮ್ಸ್‌ನ ಮಕ್ಕಳ ವಿಭಾಗದಲ್ಲಿ ಎಂ.ಡಿ. ಓದಿ, 1985ರಲ್ಲಿ ಹಿರೇಕೆರೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಯಾಗಿ ವೃತ್ತಿಬದುಕು ಆರಂಭಿಸಿದರು. ನಂತರ ಹಾವೇರಿಯಲ್ಲಿ ಮಕ್ಕಳ ತಜ್ಞರಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಿ, 1992ರಲ್ಲಿ ಕಿಮ್ಸ್‌ನ ಮಕ್ಕಳ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು.

ಮಕ್ಕಳ ವಿಭಾಗದ ಮುಖ್ಯಸ್ಥರೂ ಆಗಿದ್ದರು. 2014ರಲ್ಲಿ ಕಲಬುರ್ಗಿಯಲ್ಲಿ ಆರಂಭವಾದ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಸ್ಥಾಪಕ ನಿರ್ದೇಶಕರಾದ ಹೆಗ್ಗಳಿಕೆ ಅವರದ್ದು. ಇವರು ನಿರ್ದೇಶಕರಾಗಿದ್ದಾಗಲೇ ಆಸ್ಪತ್ರೆಗೆ ಇನ್ನಷ್ಟು ಕಟ್ಟಡ, ವಿದ್ಯಾರ್ಥಿಗಳಿಗೆ ಬೇಕಾದ ಸೌಲಭ್ಯ, ಪ್ರಾಯೋಗಿಕ ಕೊಠಡಿ, ಗ್ರಂಥಾಲಯ ಒಂದೇ ವರ್ಷದಲ್ಲಿ ಬಂದವು. ಅಲ್ಲಿ ಎರಡು ವರ್ಷ ಐದು ತಿಂಗಳು ನಿರ್ದೇಶಕರಾಗಿದ್ದರು. ಈ ವರ್ಷದ ಡಿಸೆಂಬರ್‌ನಲ್ಲಿ ಕಲಬುರ್ಗಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿ ಸ್ಟೆಥಸ್ಕೋಪ್ ಹಿಡಿಯಲಿದ್ದಾರೆ. ಇದರ ಹಿಂದಿನ ಪ್ರೇರಕ ಶಕ್ತಿಯಾಗಿ ಶೇಪೂರ ಇದ್ದಾರೆ.

ನಿವೃತ್ತಿ ಬಳಿಕ ವಿಶ್ರಾಂತಿ ಪಡೆಯದೇ 2017ರ ಮಾರ್ಚ್‌ನಲ್ಲಿ ಸಿವಿಲ್‌ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ಪ್ರಾಧ್ಯಾಪಕರಾಗಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ಚಿಕಿತ್ಸೆ ಪಡೆಯಲು ಮನೆಗೆ ಬರುವ ರೋಗಿಗಳು ಹಾಗೂ ಮಕ್ಕಳ ಪೋಷಕರಿಗೆ ಇಂತಿಷ್ಟೇ ಹಣ ಕೊಡಬೇಕು ಎಂದು ಕೇಳುವುದಿಲ್ಲ. ₹50 ಮಾತ್ರ ತೆಗೆದುಕೊಳ್ಳುತ್ತಾರೆ.

ಇದರ ಬಗ್ಗೆ ಅವರನ್ನು ಪ್ರಶ್ನಿಸಿದಾಗ ‘ನಮ್ಮ ತಂದೆ–ತಾಯಿ ಅತ್ಯಂತ ಕಡುಬಡತನದ ನಡುವೆಯೂ ನಮ್ಮನ್ನು ಚೆನ್ನಾಗಿ ಓದಿಸಿದ್ದಾರೆ. ಚಿಕಿತ್ಸೆಗೆಂದು ಬರುವ ಬಡವರ ಬಳಿ ಹಣ ತೆಗೆದುಕೊಳ್ಳಬೇಡ ಎಂದು ನನ್ನ ತಂದೆ ಹೇಳಿದ್ದಾರೆ. ಅವರ ಮಾತಿನಂತೆ ನಡೆದುಕೊಳ್ಳುತ್ತಿದ್ದೇನೆ. ಪಿಂಚಣಿ ಬರುತ್ತದೆ. ನೆಮ್ಮದಿಯ ಜೀವನ ನಡೆಸಲು ಅಗತ್ಯವಿರುವಷ್ಟು ಹಣ ನನ್ನ ಬಳಿಯಿದೆ. ಮಕ್ಕಳು ಉನ್ನತ ಸ್ಥಾನದಲ್ಲಿದ್ದಾರೆ. ‌ಆದ್ದರಿಂದ ಯಾವ ರೋಗಿಯ ಬಳಿಯೂ ಇಂತಿಷ್ಟೇ ಹಣ ಕೊಡಬೇಕು ಎಂದು ಒತ್ತಾಯಿಸುವುದಿಲ್ಲ. ಹಣಕೊಡುವಂತೆ ಕೇಳುವುದೂ ಇಲ್ಲ’ ಎಂದರು.

ಇವರ ಬಳಿ ಕಲಿತ ಅನೇಕ ವಿದ್ಯಾರ್ಥಿಗಳು ಈಗ ಅವಳಿ ನಗರದಲ್ಲಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.

ಕಡಿಮೆಯಾದ ಮರಣ
ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಕಡಿಮೆಯಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಗರ್ಭಿಣಿಗೆ, ತಾಯಿ–ಮಗುವಿನ ಆರೋಗ್ಯಕ್ಕೆ ಅನೇಕ ಸೌಲಭ್ಯಗಳನ್ನು ಕೊಡುತ್ತಿವೆ. ಕೇರಳದಲ್ಲಿ ಈಗ ಜನಿಸುವ ಒಂದು ಸಾವಿರ ಮಕ್ಕಳಲ್ಲಿ ಒಂದು ವರ್ಷದ ಒಳಗೆ ಐದು ಮಕ್ಕಳು ಮಾತ್ರ ವಿವಿಧ ಕಾರಣಕ್ಕೆ ಮೃತಪಡುತ್ತಾರೆ. ಕರ್ನಾಟಕದಲ್ಲಿ ಇದರ ಪ್ರಮಾಣ 25ರಷ್ಟು ಇದೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ 2030ರ ವೇಳೆಗೆ ಇದರ ಪ್ರಮಾಣವನ್ನು ರಾಜ್ಯದಲ್ಲಿ ಒಂದಂಕಿಗೆ ಇಳಿಸಬೇಕು ಎಂದು ಪ್ರಯತ್ನಿಸುತ್ತಿದೆ ಎಂದು ಶೇಪೂರ ಮಾಹಿತಿ ನೀಡಿದರು.

‘ಆಧುನಿಕ ಕಾಲದ ಗೃಹಿಣಿಯರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಯಾರು ಏನೇ ಹೇಳಿದರೂ ಮಗು ಆರು ತಿಂಗಳಿಂದ ಒಂದು ವರ್ಷದ್ದಾಗುವ ತನಕ ನಿತ್ಯ ಬೆಚ್ಚಗೆ ಇಡಬೇಕು. ತಾಯಿ ಹಾಲನ್ನೇ ಕೊಡಬೇಕು’ ಎಂದರು. ವೃತ್ತಿ ಬದುಕಿನ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ವಿಚಾರವಿದೆ ಎಂದೂ ತಿಳಿಸಿದರು.

ಹಳ್ಳಿಯಿಂದ ಆರಂಭವಾದ ಸಾಧನೆಯ ಹೆಜ್ಜೆ...
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ಟಿ.ಎ.ಶೇಪೂರ ಅವರು ಕಡುಬಡತನದಲ್ಲಿ ಬಾಲ್ಯ ಕಳೆದವರು. ನಿರಂತರವಾಗಿ ಓದಬೇಕು, ಹೊಸದನ್ನು ಕಲಿಯಬೇಕು ಎನ್ನುವ ಛಲವೇ ಅವರನ್ನು ಇಲ್ಲಿಗೆ ಕರೆ ತಂದಿದೆ.

ನಿವೃತ್ತಿಯ ಬಳಿಕವೂ ಸದಾ ಚಟುವಟಿಕೆಯಿಂದ ಇರುವ ಅವರಿಗೆ ಹೊಸದನ್ನು ಮಾಡಬೇಕು ಎನ್ನುವ ಆಸೆಯಿದೆ. ನಿವೃತ್ತಿಯಾದರೂ ನಿತ್ಯ ಓದು ಏಕೆ ಎಂದು ಅವರನ್ನು ಪ್ರಶ್ನಿಸಿದಾಗ ‘1985ರಲ್ಲಿ ಎಂ.ಡಿ. ಮಾಡುವಾಗ ಇದ್ದಾಗಿನ ಸಂಶೋಧನೆಗಳಿಗೂ, ಈಗಿನ ವೈದ್ಯಕೀಯ ಲೋಕದ ಬದಲಾವಣೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಈ ಕ್ಷೇತ್ರದಲ್ಲಿ ನಿತ್ಯ ಬದಲಾವಣೆಯಾಗುತ್ತದೆ. ಆದ್ದರಿಂದ ವೈದ್ಯರಾದವರು ಸದಾ ಹೊಸತನ್ನು ತಿಳಿದುಕೊಳ್ಳುತ್ತಿರಬೇಕು. ಉತ್ತಮ ಓದುಗ ಮಾತ್ರ ಶ್ರೇಷ್ಠ ವೈದ್ಯರಾಗಲು ಸಾಧ್ಯ’ ಎಂದರು.

‘ಒಬ್ಬ ಶಿಕ್ಷಕ ನಿವೃತ್ತಿಯಾದರೂ ಶಿಕ್ಷಕನೇ. ಅದೇ ರೀತಿ ವೈದ್ಯರು ಕೂಡ ಒಮ್ಮೆ ಸ್ಟೆಥಸ್ಕೋಪ್‌ ಹಿಡಿದರೆ ಸಾಕು ಜೀವನದ ಕೊನೆಯವರೆಗೂ ತಮ್ಮ ಕರ್ತವ್ಯ ಮಾಡುತ್ತಲೇ ಇರಬೇಕು. ಹೀಗೆ ಮಾಡಿದರೆ ಮಾತ್ರ ವೈದ್ಯಕೀಯ ಲೋಕದ ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT