ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ, ಹೋಮ್‌ ಮಿನಿಸ್ಟರ್‌ ಸೂಕ್ಷ್ಮತೆಯಿಂದ ಮಾತನಾಡಬೇಕು: ನಾಗಲಕ್ಷ್ಮಿ ಚೌಧರಿ

Published 21 ಏಪ್ರಿಲ್ 2024, 13:03 IST
Last Updated 21 ಏಪ್ರಿಲ್ 2024, 13:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನೇಹಾ ಕೊಲೆಯನ್ನು ಜಾತಿ, ಧರ್ಮ ಹಾಗೂ ರಾಜಕಾರಣದಂತಹ ವಿಚಾರಕ್ಕೆ ಬಳಸಿಕೊಳ್ಳಬಾರದು. ಇಂತಹ ಪ್ರಕರಣಗಳು ನಡೆದಾಗ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಯಾರೇ ಆದರೂ ಸೂಕ್ಷ್ಮತೆಯಿಂದ ಮಾತನಾಡಬೇಕು. ಕುಟುಂಬಸ್ಥರಿಗೆ ನೋವು ಹಾಗೂ ಅವಮಾನ ಆಗಂದತೆ ನಡೆದುಕೊಳ್ಳಬೇಕು’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಹೇಳಿದರು.

ಕೊಲೆಯಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ನಿವಾಸಕ್ಕೆ ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಇಂತಹ ಪ್ರಕರಣದಲ್ಲಿ ಆರೋಪಿ ಒಬ್ಬನೇ ಇರುವುದಿಲ್ಲ. ತನಿಖೆ ಸಾಗುತ್ತ ಹೋದಂತೆ ಸಾಕ್ಷ್ಯಗಳು ಸಂಗ್ರಹವಾಗುತ್ತ ಹೋಗುತ್ತವೆ. ಆಗ ಹೊಸ ವಿಷಯಗಳು ದೊರಕುತ್ತದೆ. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ನೇಹಾ ಕುಟುಂಬಸ್ಥರಿಗೆ ನ್ಯಾಯಾ ಸಿಗುವರೆಗೂ ನಾವು ಜೊತೆಗೆ ನಿಲ್ಲುತ್ತೇವೆ’ ಎಂದರು.

‘ಶಾಲೆ, ಕಾಲೇಜುಗಳಿಗೆ ಹೋದ ಮಕ್ಕಳು ಕೊಲೆಯಾಗುತ್ತಾರೆ ಎಂದರೆ, ಪಾಲಕರಿಗೆ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗದಿಂದ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಶಾಲಾ–ಕಾಲೇಜುಗಳಿಗೆ ಭದ್ರತೆ ಒದಗಿಸಲು ಸೂಚನೆ ನೀಡಲಾಗುವುದು’ ಎಂದು ಹೇಳಿದರು.

‘ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚುತ್ತಿವೆ. ಠಾಣೆಗಳಲ್ಲಿ ದೂರು ನೀಡಲು ಹೋದರೆ ಪೊಲೀಸರು ಸರಿಯಾಗಿ ಸ್ಪಂದಿಸುವುದಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದರು.

‘ಮಹಿಳಾ ಆಯೋಗದ ಕೆಲಸ ಹಾಗೂ ಕರ್ತವ್ಯದ ಬಗ್ಗೆ ರಾಜ್ಯದ ಪ್ರತಿಯೊಂದು ಮನೆ ಹಾಗೂ ಮಹಿಳೆಗೆ ಗೊತ್ತಾಗಬೇಕು. ಮುಂದೆ ಇಂತಹ ಪ್ರಕರಣಗಳು‌ ನಡೆಯಲೇಬಾರದು. ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಮುಕ್ತವಾಗಿ ಬರುವಂತಹ ವಾತಾವರಣ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ನೇಹಾ ಪ್ರಕರಣಕ್ಕೆ ಸಂಬಂಧಿಸಿ ತ್ವರಿತ ಕೋರ್ಟ್‌(ಫಾಸ್ಟ್ ಟ್ರ್ಯಾಕ್ ಕೋರ್ಟ್‌) ಸ್ಥಾಪಿಸಲು ಸರ್ಕಾರವನ್ನು ಆಗ್ರಹಿಸಲಾಗುವುದು’ ಎಂದರು.

ಕಾಂಗ್ರೆಸ್ ನಾಯಕಿ ದೇವಕಿ ಯೋಗಾನಂದ ಹಾಗೂ ಹು-ಧಾ ಮಹಾನಗರ ಕಾಂಗ್ರೆಸ್‌ ಘಟಕದ ಜಿಲ್ಲಾಧ್ಯಕ್ಷ ಅಲ್ತಾಪ್ ಹಳ್ಳೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT