ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿ ಪ್ರವೇಶದ ನಂತರ ಜನಸಾಮಾನ್ಯರ ಪಾತ್ರ ಅಧಿಕ

‘ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರ ಪಾತ್ರ’ ವಿಷಯ ಚರ್ಚೆಯಲ್ಲಿ ಡಾ. ಎಸ್.ಎಸ್.ಅಂಗಡಿ ಅಭಿಮತ
Last Updated 31 ಜನವರಿ 2023, 6:18 IST
ಅಕ್ಷರ ಗಾತ್ರ

ಧಾರವಾಡ: ‘1915ರಲ್ಲಿ ಗಾಂಧೀಜಿ ಅವರು ಭಾರತಕ್ಕೆ ಬಂದ ನಂತರ ನೈಜ ರಾಷ್ಟ್ರೀಯ ಜನಾಂದೋಲ ಆರಂಭವಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರು ಹುತಾತ್ಮರಾಗುವ ಹಾಗೂ ಸೆರೆ ವಾಸ ಅನುಭವಿಸುವವರ ಸಂಖ್ಯೆ ಹೆಚ್ಚುತ್ತಾ ಹೋಯಿತು’ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಎಸ್.ಎಸ್.ಅಂಗಡಿ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನಾ ಕೋಶ, ಹಳೇ ವಿದ್ಯಾರ್ಥಿಗಳ ಸಂಘ ಮತ್ತು ಪ್ರಾದೇಶಿಕ ಪತ್ರಾಗಾರ ಇಲಾಖೆ ಸಹಯೋಗದಲ್ಲಿ ಸೋಮವಾರ ನಡೆದ ಹುತಾತ್ಮರ ದಿನಾಚರಣೆ ಹಾಗೂ ಮಹಾತ್ಮಾ ಗಾಂಧೀಜಿ ಅವರ 75ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ‘ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರ ಪಾತ್ರ’ ವಿಷಯ ಕುರಿತು ಅವರು ಮಾತನಾಡಿದರು.

‘15ನೇ ಶತಮಾನದಲ್ಲಿ ಉಲ್ಲಾಳದ ರಾಣಿ ಅಬ್ಬಕ್ಕನಿಂದ ಹಿಡಿದು ಹಲವರು ತಮ್ಮ ಸಂಸ್ಥಾನಕ್ಕಾಗಿ ಹುತಾತ್ಮರಾಗಿದ್ದಾರೆ. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಗಾಂಧೀಜಿ ಅವರ ಪದಾರ್ಪಣೆ ನಂತರ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಹೆಚ್ಚಾಯಿತು’ ಎಂದರು.

ಸ್ನಾತಕೋತ್ತರ ಶಿಕ್ಷಣ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಅರವಿಂದ ಕರಬಸನಗೌಡರ ಮಾತನಾಡಿ, ‘ರಾಷ್ಟ್ರದ ಶ್ರೇಷ್ಠ ವ್ಯಕ್ತಿಗಳ ಕುರಿತು ವಾಟ್ಸ್‌ಆ್ಯಪ್ ಯೂನಿವರ್ಸಿಟಿಯಲ್ಲಿ ಬರುವ ವಿಷಯವನ್ನೇ ಅಂತಿಮವೆಂದುಕೊಂಡು, ಅದನ್ನೇ ಹಲವರಿಗೆ ಹಂಚುವ ‘ಫಾರ್ವರ್ಡ್ ಸಂಸ್ಕೃತಿ‘ಯಿಂದ ಇಂದಿನ ಸಮಾಜ ಹೊರಬರಬೇಕಿದೆ. ಅದರ ಬದಲು ಆ ವ್ಯಕ್ತಿಗಳ ಕುರಿತು ಇರುವ ಪುಸ್ತಕಗಳನ್ನು ಅಧ್ಯಯನ ನಡೆಸಿ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಕೆಲಸ ಆಗಬೇಕಿದೆ’ ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಜಗದೀಶ ಕಿವಡನವರ ಮಾತನಾಡಿ, ‘ಹುತಾತ್ಮರಾದ ಮಹಾತ್ಮಾ ಗಾಂಧೀಜಿ ಅವರಿಗಿಂತ ಹೆಚ್ಚಾಗಿ ಅವರನ್ನು ಕೊಂದ ಗೋಡ್ಸೆಯನ್ನು ವೈಭವೀಕರಿಸುತ್ತಿರುವುದು ಇಂದಿನ ಭಾರತದ ವಿಪರ್ಯಾಸ’ ಎಂದರು.

‘ಇಂದಿನ ಸಂದರ್ಭದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಅವಶ್ಯಕತೆ’ ವಿಷಯ ಕುರಿತು ಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕಿ ಡಾ. ವಿ.ಶಾರದಾ ಮಾತನಾಡಿ, ‘ರಾಜಕೀಯ ಕಾರಣಗಳಿಗಾಗಿ ಭಾಷೆ ಹಾಗೂ ಕೋಮುಭಾವನೆ ಕೆರಳಿಸುವ ವಿಷಯದಿಂದ ಹಿಡಿದು ಹಲವು ವಿಷಯಗಳಲ್ಲಿ ಇಂಥ ಮೊಬೈಲ್ ಆ್ಯಪ್‌ಗಳು ತಪ್ಪಾಗಿ ಬಳಕೆಯಾಗುತ್ತಿವೆ. ಯುವಜನರೂ ವ್ಯವದಾನವೇ ಇಲ್ಲದೆ, ಬಂದ ವಿಷಯಗಳನ್ನು ಯಥಾವತ್ತಾಗಿ ನಂಬುವ ಮೂಲಕ ದೇಶವನ್ನೇ ಅಪಾಯಕ್ಕೆ ನೂಕುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯದ ಅಭಿವೃದ್ಧಿ ಜತೆಗಿನ ಬೆಳವಣಿಗೆಯೇ ಸರ್ವೋದಯ ಎಂದ ಮಹಾತ್ಮಾ ಗಾಂಧೀಜಿ ಅವರ ಆಶಯ ಇಂದು ನಮಗೆ ಮಾದರಿಯಾಗಬೇಕು’ ಎಂದರು.

ಡಾ. ಬಿ.ಎನ್.ತಾರಾ, ಡಾ. ಎಸ್.ಬಿ.ನ್ಯಾಮತಿ, ಡಾ. ಅರುಣಾ ಹಳ್ಳಿಕೇರಿ ಗೋಷ್ಠಿಗಳಲ್ಲಿ ಪಾಲ್ಗೊಂಡರು.

ಇದಕ್ಕೂ ಮೊದಲು ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರಕ್ಕೆ ಕುಲಸಚಿವ ಯಶಪಾಲ್ ಕ್ಷೀರಸಾಗರ, ಗಾಂಧಿ ಅಧ್ಯಯನ ವಿಭಾಗ ಮುಖ್ಯಸ್ಥರಾಗಿದ ಪ್ರೊ. ಎಸ್.ಟಿ.ಬಾಗಲಕೋಟಿ, ಡಾ.ಎಂ.ಎ.ಜಾಲಿಹಾಳ ಅವರು ನಮನ ಪುಷ್ಪ ನಮನ ಸಲ್ಲಿಸಿದರು. ಡಾ. ಶಿವಾನಂದ ಶೆಟ್ಟರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ.ಎ.ಜಾಲಿಹಾಳ, ಡಾ. ಎಸ್.ಬಿ.ಬಸೆಟ್ಟಿ, ಡಾ. ಎಂ.ಬಿ.ದಳಪತಿ ಇದ್ದರು.

ಇದೇ ಸಂದರ್ಭದಲ್ಲಿ ಅಂತರ ವಿಶ್ವವಿದ್ಯಾಲಯದ ಸಿದ್ಧಭಾಷಣ ಸ್ಪರ್ಧೆಯಲ್ಲಿ 3ನೇ ಬಹುಮಾನ ಪಡೆದ ಎಂ.ಕಾಮ್. ವಿದ್ಯಾರ್ಥಿನಿ ಕಲ್ಪವೃಕ್ಷ ಮುಗಳಿಹಾಳ ಅವರಿಗೆ ₹2500 ನಗದು ಬಹುಮಾನ, ಸ್ಮರಣಿಕೆ ಹಾಗೂ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT