ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಕಾಂಗ್ರೆಸ್‌ಗೆ ಗೆಲುವು ಖಚಿತ: ಪ್ರಸಾದ ಅಬ್ಬಯ್ಯ

Published 18 ಏಪ್ರಿಲ್ 2024, 16:11 IST
Last Updated 18 ಏಪ್ರಿಲ್ 2024, 16:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ದೇಶದಾದ್ಯಂತ ಬಿಜೆಪಿ ಆಡಳಿತ ವಿರೋಧಿ ಅಲೆ ಇದೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜನರು ಮತ್ತೆ ಕಾಂಗ್ರೆಸ್ ಆಡಳಿತ ಬಯಸುತ್ತಿದ್ದಾರೆ. ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಹೋಟೆಲ್‌ವೊಂದರಲ್ಲಿ ಇತ್ತೀಚೆಗೆ ನಡೆದ ಹು–ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಾಲಿಕೆ ಸದಸ್ಯರ, ಪರಾಜಿತ ಅಭ್ಯರ್ಥಿಗಳ ಹಾಗೂ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿಯದ್ದು ಸುಳ್ಳಿನ ಜಾಯಮಾನ ಎಂಬುವುದು ಜಗಜ್ಜಾಹೀರಾಗಿದೆ. ಕಳೆದ 10 ವರ್ಷಗಳ ಹಿಂದೆ ನೀಡಿದ ಭರವಸೆಗಳು ಎಲ್ಲಿ ಮಾಯವಾಗಿವೆ?  ಬಿಜೆಪಿ ನಾಯಕರು ಸುಳ್ಳು ಭರವಸೆ ನೀಡಿ ಜನರನ್ನು ತಪ್ಪು ದಾರಿಗೆ ತಳ್ಳುತ್ತಿದ್ದಾರೆ. ಬಿಜೆಪಿಯ ದುರಾಡಳಿತ ಹಾಗೂ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡ, ಮಧ್ಯಮ ವರ್ಗದ ಜನರ ಜೀವನಮಟ್ಟ ಸುಧಾರಿಸಿವೆ. ಹೀಗಾಗಿ ಮತದಾರರು ಎಂದಿಗೂ ಕಾಂಗ್ರೆಸ್‌ಗೆ ಬೆನ್ನಲುಬಾಗಿ ನಿಲ್ಲುತ್ತಾರೆ ಎಂಬ ಭರವಸೆ ಇದೆ. ಧಾರವಾಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಕೈತಪ್ಪಿ 28 ವರ್ಷ ಕಳೆದಿವೆ. ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ಸದ್ಯ ಉತ್ತಮ ವಾತಾವರಣವಿದೆ. ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕಿದೆ. ಎಲ್ಲರೂ ತಮ್ಮ ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕು. ಆಗ ಕಾಂಗ್ರೆಸ್‌ಗೆ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲ, ಮುಖಂಡರಾದ ಶಿವ ನಾಯಕ, ಎಚ್.ಎಫ್. ಜಕ್ಕಪ್ಪನವರ, ಸತೀಶ ಮೆಹರವಾಡೆ, ಮೊಹಮ್ಮದ ಯೂಸೂಫ ಸವಣೂರ, ಮಜರ್ ಖಾನ್, ವಹಾಬ್ ಮುಲ್ಲಾ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT