ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕಲುಷಿತಗೊಂಡ ಕೆಲಗೇರಿ ಕೆರೆ: ಮೀನುಗಳ ಸಾವು

ಕೆಲಗೇರಿ ಕೆರೆಗೆ ನಿರ್ವಹಣೆ ಕೊರತೆ, ಒಡಲು ಸೇರುತ್ತಿದೆ ಚರಂಡಿ ನೀರು
Last Updated 1 ಏಪ್ರಿಲ್ 2023, 5:54 IST
ಅಕ್ಷರ ಗಾತ್ರ

ಧಾರವಾಡ: ಐತಿಹಾಸಿಕ ಕೆಲಗೇರಿ ಕೆರೆಗೆ ಸುತ್ತಲಿನ ವಸತಿ ಪ್ರದೇಶಗಳ ತ್ಯಾಜ್ಯ ನೀರು ಸೇರುತ್ತಿರುವ ಪರಿಣಾಮ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಇದರಿಂದಾಗಿ ಅಂತರಗಂಗೆ ಕೆರೆಯನ್ನು ಬಹುತೇಕ ಆವರಿಸಿದೆ. ಇವೆಲ್ಲದರ ಪರಿಣಾಮ ಸಾಕಷ್ಟು ಮೀನುಗಳು ಮೃತಪಟ್ಟು ದಡದಂಚಿನಲ್ಲಿ ತೇಲುತ್ತಿವೆ.

ಕಳೆದ ಕೆಲ ವರ್ಷಗಳಿಂದ ಉತ್ತಮ ಮಳೆಯಾಗುತ್ತಿರುವ ಪರಿಣಾಮ ಕರೆಯಲ್ಲಿ ಸಾಕಷ್ಟು ನೀರಿದೆ. ಆದರೆ, ಕೆರೆಯ ಒಡಲು ಸೇರುತ್ತಿರುವ ಕಲುಷಿತ ನೀರು ನಿಯಂತ್ರಿಸದ ಪರಿಣಾಮ, ಜಲಕಳೆ ವ್ಯಾಪಕವಾಗಿ ಬೆಳೆಯುತ್ತಿದೆ. ಕೃಷಿ ವಿಶ್ವವಿದ್ಯಾಲಯದ ಒಡೆತನದ ಈ ಐತಿಹಾಸಿಕ ಕೆರೆ, ಸಮರ್ಪಕ ನಿರ್ವಹಣೆ ಕೊರತೆಯಿಂದ ಈಗ ಕುಖ್ಯಾತಿ ಪಡೆಯುವಂತಾಗಿದೆ.

ಕಳೆದ ಜನವರಿಯಲ್ಲಿ ರಾಷ್ಟ್ರೀಯ ಯುವ ಜನೋತ್ಸವ ವೇಳೆಯಲ್ಲಿ ಜಲಕ್ರೀಡೆಗೆ ಅಡ್ಡಿ ಆಗದಿರಲಿ ಎಂಬ ಕಾರಣಕ್ಕೆ ಖುದ್ದು ಆಯೋಜಕರೇ, ಕ್ರೀಡೆಗೆ ಬೇಕಾಗುವ ಸ್ಥಳದಲ್ಲಿದ್ದ ಜಲ ಕಳೆಯನ್ನು ದೋಣಿಗಳ ಸಹಾಯದಿಂದ ತೆಗೆದು ಒಂದೆಡೆ ಸೇರಿಸಿದ್ದರು. ಆಗ ಚುಟವಟಿಕೆಯಿಂದ ಓಡಾಡಿದ ಸಿಬ್ಬಂದಿ, ಈಗ ಸ್ವಚ್ಛಗೊಳಿಸುವ ಗೋಜಿಗೆ ಹೋಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

‘ಚರಂಡಿ ನೀರು ಸೇರುವುದನ್ನು ತಡೆದು, ಮಳೆ ನೀರು ಮಾತ್ರ ಸೇರುವಂತೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಸುತ್ತಲಿನ ಪ್ರದೇಶಗಳಿಂದ ಹಲವು ದಿಕ್ಕುಗಳಿಂದ ಚರಂಡಿ ನೀರು ಕೆರೆಯ ಒಡಲು ಸೇರುತ್ತಿದೆ. ಇದರಿಂದ ಜಲಕಳೆ ಹೆಚ್ಚಳದ ಜತೆಗೆ, ಜಲಚರ ಪ್ರಾಣಿಗಳು ಸೂರ್ಯನ ಕಿರಣದ ಲಭ್ಯತೆಯ ಕೊರತೆ, ಆಮ್ಲಜನಕದ ಕೊರತೆ ಎದುರಿಸುತ್ತಿವೆ. ಇದು ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ’ ಎಂದು ಸ್ಥಳೀಯ ನಿವಾಸಿ ಮಂಜುನಾಥ ಜಿ. ಹೇಳಿದರು.

‘ಈ ಕೆರೆ ಮಹಾನಗರ ಪಾಲಿಕೆ ವಲಯ ಕಚೇರಿ–1ರ ವ್ಯಾಪ್ತಿಗೆ ಸೇರಿದರೂ ನಿರ್ವಹಣೆ, ಸ್ವಚ್ಚತೆ ಸೇರಿದಂತೆ ಎಲ್ಲವೂ ಕೃಷಿ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುತ್ತದೆ. ನೀರಾವರಿಗೆ ಹಾಗೂ ಮೀನು ಸಾಕಾಣೆಗಾಗಿ ಅದನ್ನು ಬಳಕೆ ಮಾಡುತ್ತಿರುವ ಕೃಷಿ ವಿವಿ, ಕೆರೆ ಸಂಪೂರ್ಣವಾಗಿ ಕಲುಷಿತಗೊಂಡರೂ ಅಭಿವೃದ್ಧಿಗೆ ಈವರೆಗೆ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಹೀಗಾಗಿ ಕೆರೆಯ ಅಂದ ದಿನದಿಂದ ದಿನಕ್ಕೆ ಹಾಳಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ಓಂಕಾರ ಎಸ್. ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT