ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಹಿನ್ನೆಲೆ: ಅಗತ್ಯ ಸಾಮಗ್ರಿ ಖರೀದಿಗೆ ಹುಬ್ಬಳ್ಳಿಯಲ್ಲಿ ಮುಗಿಬಿದ್ದ ಜನ

ಮೌಲ್ಯಮಾಪನಕ್ಕೆ ಬಂದಿದ್ದ ಶಿಕ್ಷಕರ ಪರದಾಟ
Last Updated 15 ಜುಲೈ 2020, 5:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಘೋಷಿಸಿರುವ ಲಾಕ್‌ಡೌನ್‌ ಬುಧವಾರದಿಂದ ಆರಂಭವಾಗಿದ್ದು, ಎಸ್ಸೆಸ್ಸೆಲ್ಸಿ ಮೌಲ್ಯಮಾಪನಕ್ಕೆ ಧಾರವಾಡಕ್ಕೆ ತೆರಳಬೇಕಿದ್ದ ಶಿಕ್ಷಕರು ನಗರದಲ್ಲಿ ಪರದಾಡಿದರು.

ಕಲಘಟಗಿ, ಕುಂದಗೋಳ ಮತ್ತು ಹುಬ್ಬಳ್ಳಿಯ ವಿವಿಧ ಭಾಗಗಳಿಂದ ಬಂದಿದ್ದ ಅನೇಕ ಶಿಕ್ಷಕರು ಹಳೇ ಹುಬ್ಬಳ್ಳಿ ಬಸ್‌ ನಿಲ್ದಾಣದಲ್ಲಿ ಸೇರಿದ್ದರು. ಅವರನ್ನು ಜಿಲ್ಲಾ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಸಾರಿಗೆ ಇಲಾಖೆಯಿಂದ ಮಾಡಲಾಗಿದ್ದ ಬಸ್‌ಗಳಲ್ಲಿ ಒಂದಷ್ಟು ಜನ ಶಿಕ್ಷಕರು ತೆರಳಿದ್ದರು. ಇನ್ನೂ ಕೆಲ ಶಿಕ್ಷಕರು ಬಸ್‌ಗಾಗಿ ಕಾಯುತ್ತಿದ್ದರು. ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಕಾರಣ ಕೆಲ ಶಿಕ್ಷಕರು ವೈಯಕ್ತಿಕ ವಾಹನದಲ್ಲಿ ಹೋದರು.

ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಕರು ಬೆಳಿಗ್ಗೆ 10 ಗಂಟೆಗೆ ಮೌಲ್ಯಮಾಪನ ಆರಂಭವಾಗುತ್ತದೆ. ಇನ್ನೂ ಬಸ್‌ ಬಂದಿಲ್ಲ. ತಾಲ್ಲೂಕು ಪ್ರದೇಶಗಳಿಂದ ಇಲ್ಲಿಗೆ ಬಂದಿದ್ದೇವೆ. ಮೌಲ್ಯಮಾಪನ ಇನ್ನೂ ಮೂರು ದಿನ ನಡೆಯುತ್ತದೆ. ನಾಳೆ, ನಾಡಿದ್ದು ಹೀಗೆಯೇ ಪರಿಸ್ಥಿತಿ ಮುಂದುವರಿದರೆ ಹೇಗೆ? ಎಂದು ಆತಂಕ ವ್ಯಕ್ತಪಡಿಸಿದರು.

ಮುಗಿಬಿದ್ದ ಜನ: ಬೆಳಿಗ್ಗೆ 5ರಿಂದ ಮಧ್ಯಾಹ್ನ 12 ಗಂಟೆಯ ತನಕ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ. ನಗರದ ಜನತಾ ಬಜಾರ್‌, ದುರ್ಗದ ಬೈಲ್‌,‌ ಶಿರೂರ ಪಾರ್ಕ್‌, ಸಿದ್ಧೇಶ್ವರ ಪಾರ್ಕ್‌, ಕೇಶ್ವಾಪುರ ವೃತ್ತ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿ ಹಾಲು, ತರಕಾರಿ ಮತ್ತು ದಿನಸಿ ಸಾಮಗ್ರಿಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದರು. ಹೊಸೂರು ಕ್ರಾಸ್‌ನಲ್ಲಿ ಬುಧವಾರದಿಂದ ಪಡಿತರ ವಿತರಣೆ ಆರಂಭವಾಗಿದ್ದು, ಖರೀದಿಸಲು ಜನ ಸಾಲಾಗಿ ನಿಂತಿದ್ದ ಚಿತ್ರಣ ಕಂಡು ಬಂತು.

ಕಿತ್ತೂರು ರಾಣಿ ಚನ್ನಮ್ಮ ವೃತ್ತ, ರೈಲ್ವೆ ನಿಲ್ದಾಣದ ಮುಂಭಾಗ, ವಿದ್ಯಾನಗರ, ಗೋಕುಲ ರಸ್ತೆಯಲ್ಲಿ ವಾಹನಗಳ ಓಡಾಟ ಎಂದಿಗಿಂತ ಕಡಿಮೆಯಿತ್ತು. ಲಾಕ್‌ಡೌನ್‌ ಯಶಸ್ವಿಗೊಳಿಸಲು ಪೊಲೀಸರು ಬಂದೋಬಸ್ತ್‌ ಕಾರ್ಯದಲ್ಲಿ ತೊಡಗಿದ್ದರು. ಅಮರಗೋಳದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬುಧವಾರ ಬೆಳಿಗ್ಗೆ ಎಂದಿನಂತೆಯೇ ತರಕಾರಿ ವ್ಯಾಪಾರ ಜರುಗಿತು. ಜಿಲ್ಲೆಯಲ್ಲಿ ಜು. 24ರ ವರೆಗೆ ಲಾಕ್‌ಡೌನ್‌ ಜಾರಿಯಲ್ಲಿ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT