ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಕೀರ ಸನದಿ, ವಿನೋದ ಅಸೂಟಿಗೆ ಒಲಿದ ಅದೃಷ್ಟ

ನಿಗಮ– ಮಂಡಳಿಗೆ ನೇಮಕ: ಜಿಲ್ಲೆಯ ಇಬ್ಬರಿಗೆ ಸ್ಥಾನ
Published 1 ಮಾರ್ಚ್ 2024, 4:16 IST
Last Updated 1 ಮಾರ್ಚ್ 2024, 4:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಸರ್ಕಾರವು ವಿವಿಧ ನಿಗಮ – ಮಂಡಳಿಗಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಧಾರವಾಡ ಜಿಲ್ಲೆಯ ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರಿಗೆ ಅವಕಾಶ ದೊರೆತಿದೆ. ಹುಬ್ಬಳ್ಳಿ– ಧಾರವಾಡ ನಗರಾಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾಗಿ ಹುಬ್ಬಳ್ಳಿಯ ಶಾಕೀರ ಸನದಿ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾಗಿ ನವಲಗುಂದದ ವಿನೋದ ಅಸೂಟಿ ನೇಮಕಗೊಂಡಿದ್ದಾರೆ.

ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಅವರ ಪುತ್ರರಾಗಿರುವ ಶಾಕೀರ ಸನದಿ ಹಲವು ವರ್ಷಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಐಸಿಸಿ ಸದಸ್ಯರಾಗಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ನಿರೀಕ್ಷೆಯಿರಲಿಲ್ಲ: ‘ನಿಗಮ ಮಂಡಳಿಗೆ ನನ್ನನ್ನು ಆಯ್ಕೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೆ. ಆದರೂ, ಪಕ್ಷದ ವರಿಷ್ಠರು ಕೈಗೊಂಡಿರುವ ತೀರ್ಮಾನವನ್ನು ಸ್ವೀಕರಿಸುತ್ತೇನೆ’ ಎಂದು ಶಾಕೀರ ಸನದಿ  ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಹುಡಾದಲ್ಲಿ ಮಾಡಲು ಬಹಳಷ್ಟು ಕೆಲಸವಿದೆ. ಅವಳಿ ನಗರದ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಮಾಡಲು ಸಾಕಷ್ಟು ಅವಕಾಶಗಳಿವೆ. ನಗರಕ್ಕೆ ರಿಂಗ್‌ ರೋಡ್‌ ಅವಶ್ಯಕತೆ ಇದೆ. ಮಕ್ಕಳ ಉದ್ಯಾನ ಸೇರಿದಂತೆ ಹಲವು ಮೂಲಸೌಕರ್ಯಗಳ ಅವಶ್ಯಕತೆ ಇದೆ. ಅಧಿಕಾರಿಗಳ ಜೊತೆ ಚರ್ಚಿಸಿ, ಕ್ರಮಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಖುಷಿಯಾಗಿದೆ:

‘ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸ್ಥಾನ ಸಿಕ್ಕಿರುವುದು ನನ್ನ ಸೌಭಾಗ್ಯವಾಗಿದೆ. ಖುಷಿಯಾಗಿದ್ದೇನೆ’ ಎಂದು ವಿನೋದ ಅಸೂಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರಾಜ್ಯಮಟ್ಟದ  ನಿಗಮ ಇದಾಗಿರುವುದರಿಂದ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ವಿಶೇಷವಾಗಿ  ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದರು.

ಜಿಲ್ಲೆಗೆ ಒಟ್ಟು 4 ಸ್ಥಾನ:

ಇತ್ತೀಚೆಗೆ ಬಿಡುಗಡೆಯಾಗಿದ್ದ ನಿಗಮ ಮಂಡಳಿ ಆಯ್ಕೆಯ ಮೊದಲ ಪಟ್ಟಿಯಲ್ಲಿ ಧಾರವಾಡ ಶಾಸಕ ವಿನಯ ಕುಲಕರ್ಣಿ ಹಾಗೂ ಹುಬ್ಬಳ್ಳಿ– ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ವಿನಯ ಕುಲಕರ್ಣಿ ಅವರಿಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ಪ್ರಸಾದ ಅಬ್ಬಯ್ಯ ಅವರಿಗೆ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಇದರೊಂದಿಗೆ ಜಿಲ್ಲೆಗೆ ಒಟ್ಟು 4 ನಿಗಮ– ಮಂಡಳಿಗಳು ಸಿಕ್ಕಂತಾಗಿದೆ.

ಎಲ್ಲರಿಗೂ ಪಾಲು:

ಜಾತಿ– ಧರ್ಮ ಲೆಕ್ಕಾಚಾರ ಮಾಡಿ, ನಿಗಮ ಮಂಡಳಿ ಸ್ಥಾನಗಳನ್ನು ಹಂಚಿರುವುದು ಮೇಲ್ನೊಟಕ್ಕೆ ಕಂಡುಬಂದಿದೆ. ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿರುವ ವಿನಯ ಕುಲಕರ್ಣಿ, ಎಸ್‌.ಸಿ ಸಮುದಾಯದ ಪ್ರಸಾದ ಅಬ್ಬಯ್ಯ, ಕುರುಬ ಸಮುದಾಯದ ವಿನೋದ ಅಸೂಟಿ ಹಾಗೂ ಮುಸ್ಲಿಂ ಸಮುದಾಯದ ಶಾಕೀರ ಸನದಿ ಅವರಿಗೆ ಸ್ಥಾನ ನೀಡಲಾಗಿದೆ. ಈ ಮೂಲಕ ಎಲ್ಲ ಸಮುದಾಯದವರಿಗೂ ಅವಕಾಶ ನೀಡಿರುವುದು ಕಂಡುಬಂದಿದೆ.

ವಿನೋದ ಅಸೂಟಿ
ವಿನೋದ ಅಸೂಟಿ
ರಾಜಶೇಖರ ಮೆಣಸಿನಕಾಯಿ
ರಾಜಶೇಖರ ಮೆಣಸಿನಕಾಯಿ

ರಾಜಶೇಖರ ಮೆಣಸಿನಕಾಯಿ ಅಸಮಾಧಾನ

ಹುಬ್ಬಳ್ಳಿ: ‘ರಾಜಕೀಯ ಮನೆತನದ ಹಿನ್ನೆಲೆ ಹೊಂದಿರುವ ನಾನು ಕಳೆದ ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದು ನನ್ನ ದುರ್ದೈವ ಎನಿಸಿದೆ’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಮಾಜಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ ಬೇಸರ ವ್ಯಕ್ತಪಡಿಸಿದ್ದಾರೆ.  ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಎನ್ನುವ ವಿಶ್ವಾಸವಿತ್ತು. ಆದರೆ ನೇಮಕಾತಿಯಲ್ಲಿ ಪರಿಗಣಿಸದಿರುವುದು ದುರ್ದೈವ. ಇದು ನನ್ನ ಪ್ರಾಮಾಣಿಕತೆ ಪಕ್ಷ ನಿಷ್ಠೆಗೆ ನೀಡಿದ ಶಿಕ್ಷೆಯೇ? ಅಲ್ಪಸಂಖ್ಯಾತರು ದಲಿತರು ಹಿಂದುಳಿದ ಮತ್ತು ಕಾರ್ಮಿಕರು ಹಾಗೂ ರೈತಪರ ನಿರಂತರ ಹೋರಾಟ ಮಾಡಿದ ಫಲವೊ ಅಥವಾ ಲಿಂಗಾಯತ ಸಮಾಜದವನು ಅಂತ ಕಡೆಗಣಿಸಿದರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ಬಾರಿ ವಿಧಾನಸಭೆ ಚುನಾವಣೆ ಆಕಾಂಕ್ಷಿಯಾಗಿದ್ದೆ. ಪಕ್ಷವು ಟಿಕೆಟ್ ನೀಡದಿದ್ದರೂ  ಬೇಸರಿಸಿಕೊಳ್ಳದೇ ಅಭ್ಯರ್ಥಿ ಪರ ಗೆಲುವಿಗಾಗಿ ಶ್ರಮಿಸಿದ್ದೇನೆ. ನನ್ನ ಪಕ್ಷ ನಿಷ್ಠೆ ಪ್ರಾಮಾಣಿಕ ಸೇವೆ ಶ್ರಮಕ್ಕೆ ಬೆಲೆ ಎಷ್ಟು ಎಂಬುದು ಸಾಬೀತಾಗಿದ್ದು ಪಕ್ಷದೊಳಗಿನ 3 ದಶಕಗಳ ನನ್ನ ಸೇವೆ ವ್ಯರ್ಥ ಎನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT