ಬುಧವಾರ, ಜನವರಿ 27, 2021
24 °C

ಈದ್‌ ಮಿಲಾದ್‌ ಸಂಭ್ರಮಕ್ಕೆ ಕ್ಷಣಗಣನೆ...

ಬಸೀರಅಹ್ಮದ್ ನಗಾರಿ Updated:

ಅಕ್ಷರ ಗಾತ್ರ : | |

Deccan Herald

ರಬೀವುಲ್‌ ಅವ್ವಲ್ ಇಸ್ಲಾಮಿಕ್‌ ಕ್ಯಾಲೆಂಡರ್‌ನ ಮೂರನೇ ತಿಂಗಳು. ಈ ತಿಂಗಳ 12ನೇ ದಿನ ವಿಶ್ವದ ಹತ್ತು–ಹಲವು ಇಸ್ಲಾಮಿಕ್‌ ರಾಷ್ಟ್ರಗಳ ಪಾಲಿಗೆ ಸಂಭ್ರಮದ ಕ್ಷಣಗಳು. ಅದಕ್ಕೆ ಕಾರಣ ಮುಸ್ಲಿಂ ಸಮುದಾಯದ ಕೊನೆಯ ಪ್ರವಾದಿ ಹಜರತ್‌ ಮೊಹಮ್ಮದ್(ಸ) ಅವರ ಜನ್ಮದಿನ. ಈ ಸಡಗರವನ್ನು ‘ಈದ್‌ ಮಿಲಾದ್‌’, ‘ಈದ್‌ ಮಿಲಾದುನ್ನಬಿ’, ‘ಮೌಲಿದ್‌’ ಹಾಗೂ ‘ಮೌಲಿದ್‌ ಅಲ್–ನಬಿ ಅಲ್‌ ಷರೀಫ್‌’ ಎಂದು ಕರೆಯುತ್ತಾರೆ. ಅರೆಬಿಕ್‌ ಭಾಷೆಯಲ್ಲಿ ‘ಈದ್‌’ ಎಂದರೆ ಹಬ್ಬ, ‘ಮಿಲಾದ್‌’ ಎಂದರೆ ಜನ್ಮ ಎಂದರ್ಥ.

ಯಾರು ಈ ಪ್ರವಾದಿ?

ಸರಳತೆಯ ಹರಿಕಾರ ಎನಿಸಿದ್ದ, ಎಲ್ಲ ಬಗೆಯ ಕೆಡುಕು ಮತ್ತು ಅನಾಚಾರಗಳಿಂದ ಆವೃತವಾದ ಸಮಾಜವನ್ನು ವಿಶ್ವಕ್ಕೆ ಮಾದರಿ ಎನ್ನಿಸುವ ನಿಟ್ಟಿನಲ್ಲಿ ರೂಪಿಸಿದ ಮಹನೀಯ ಮೊಹಮ್ಮದ್(ಸ) ಪೈಗಂಬರ್‌. 570ನೇ ಇಸ್ವಿಯಲ್ಲಿ ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ಜನಿಸಿದವರು. ಅವರು ಇಸ್ಲಾಂ ಕೊನೆಯ ಪ್ರವಾದಿಯೂ ಹೌದು. ಮುಂದಿನ ತಲೆಮಾರುಗಳಿಗೆ ಇಸ್ಲಾಂ ಕೊಂಡೊಯ್ಯುವ ಹೊಣೆಯನ್ನು ಅವರು ಪ್ರತಿ ಮುಸ್ಲಿಮರಿಗೆ ವಹಿಸಿದವರು. ಅದಕ್ಕೂ ಮೊದಲು ಇಹಲೋಕ ಮತ್ತು ಪರಲೋಕಗಳ ಯಶಸ್ಸಿಗೆ ಅವರ ಜೀವನ ವಿಧಾನವೇ ಮಾದರಿ ಎಂಬಂತೆ ಬದುಕಿ ತೋರಿದವರು. ಹಿಂಸೆ, ಅನ್ಯಾಯ, ದೌರ್ಜನ್ಯ, ಕಪಟತನ, ಮೋಸ ಸ್ವ–ನಾಶ ಹಾಗೂ ಸಮಾಜ ವಿನಾಶದ ದಾರಿ. ಸಚ್ಚಾರಿತ್ರ್ಯ, ಸನ್ನಡತೆ, ನಿಷ್ಕಪಟ ನಡವಳಿಕೆಯಿಂದ ಮೋಕ್ಷ ಸೇರಬಹುದು ಎಂಬುದನ್ನು ಮಾನವರಿಗೆ ಕಲಿಸಿಕೊಟ್ಟವರು.

ಆಚರಣೆ ಹೇಗೆ...?

ಈದ್‌ ಮಿಲಾದ್‌ ಅನ್ನು ಹಲವು ಬಗೆಯಲ್ಲಿ ಆಚರಣೆ ಮಾಡುತ್ತಾರೆ. ರಬೀವುಲ್‌ ಅವ್ವಲ್‌ ತಿಂಗಳ 10, 11 ಹಾಗೂ 12ನೇ ದಿನ ಕೆಲವರು ಉಪವಾಸ ಆಚರಿಸುತ್ತಾರೆ. ಮತ್ತೆ ಕೆಲವರು ತಿಂಗಳ ಆರಂಭದಿಂದ 12 ದಿನಗಳ ಕಾಲ ಉಪವಾಸ ಮಾಡುವುನ್ನೂ ಕಾಣುತ್ತೇವೆ. ಇದು ಕಡ್ಡಾಯ ಅಲ್ಲ, ಸ್ವ–ಇಚ್ಛೆಯಿಂದ ನಡೆಯುತ್ತದೆ.

ವಿಶೇಷ ನಮಾಜ್‌ಗಳನ್ನು ಮಾಡಲಾಗುತ್ತದೆ. ಕುರ್‌ಆನ್‌ ಪಠಣ, ಜಿಕ್ರಗೆ(ಜಪ) ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ದೊಡ್ಡ ಮಟ್ಟದಲ್ಲಿ ನಗರ, ಪಟ್ಟಣ ಗ್ರಾಮಗಳಲ್ಲಿ ಮೆರವಣಿಗಳು ನಡೆಯುತ್ತವೆ. ಸಾವಿರಾರು ಜನರು ಹಸಿರು ಧ್ವಜಗಳೊಂದಿಗೆ ಅದರಲ್ಲಿ ಪಾಲ್ಗೊಳ್ಳುತ್ತಾರೆ. ಮನೆಗಳು, ಮಸೀದಿಗಳು ಹಾಗೂ ಹಲವು ಕಟ್ಟಡಗಳನ್ನು ಬಣ್ಣ–ಬಣ್ಣದ ವಿದ್ಯುತ್‌ ದೀಪಗಳಿಂದ ಸಿಂಗರಿಸಲಾಗುತ್ತದೆ. ಪ್ರವಾದಿ ಅವರ ಸಂದೇಶಗಳಿರುವ ಹಸಿರು ಬಣ್ಣದ ಬಂಟಿಗ್ಸ್‌, ಬ್ಯಾನರ್‌ಗಳು, ತೋರಣಗಳು, ಧ್ವಜಗಳನ್ನು ಕಟ್ಟಿ ಮುಸ್ಲಿಮರು ಸಡಗರ ‌ಪಡುತ್ತಾರೆ. ಕೆಲವು ಮಸೀದಿಗಳು ಸೇರಿದಂತೆ ಸಮುದಾಯ ಭವನಗಳಲ್ಲಿ ‘ಸಾಮೂಹಿಕ ಊಟೋಪಚಾರ’ಗಳನ್ನು ಆಯೋಜಿಸಲಾಗುತ್ತದೆ. 

ಪ್ರವಾದಿ ಮೊಹಮ್ಮದ್(ಸ) ಅವರ ಜೀವನ ಕುರಿತ ಪ್ರವಚನ, ಅವರ ಕುರಿತ ಗೀತೆಗಳ ಕುರಿತ ವಿಶೇಷ ಕಾರ್ಯಕ್ರಮಗಳ ಆಯೋಜನೆ ನಡೆಯುತ್ತದೆ. ಹಲವೆಡೆ ಸಿಹಿಯನ್ನು ಹಂಚಲಾಗುತ್ತದೆ. ಹುಬ್ಬಳ್ಳಿ–ಧಾರವಾಡದಲ್ಲೂ ಈ ಸಂಭ್ರಮ ಕಾಣುತ್ತೇವೆ.

ಬಹುವಿಧ ಅಭಿಪ್ರಾಯ...

ಮೊಹಮ್ಮದ್(ಸ) ಪೈಗಂಬರ್ ಅವರ ಜನ್ಮದಿನ ಹೇಗೆ ಆಚರಿಸಬೇಕು ಎಂಬುದರ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಭಿನ್ನ ನಂಬಿಕೆಗಳಿವೆ. ಕೊನೆಯ ಪ್ರವಾದಿಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಬೇಕು ಎಂದು ಕೆಲವು ಪಂಗಡಗಳು ಪ್ರತಿಪಾದಿಸುತ್ತವೆ. ಆದರೆ, ಜನ್ಮದಿನದಂಥ ಆಚರಣೆಗಳು ಇಸ್ಲಾಂನ ಮೂಲ ನಿಯಮಗಳಿಗೆ ತದ್ಧವಿರುದ್ಧ ಎಂದು ಮತ್ತೆ ಕೆಲ ಪಂಗಡಗಳು ವಾದ ಮಂಡಿಸುತ್ತವೆ. ತಮ್ಮ ಸಮರ್ಥನೆಗಳಿಗೆ ಎರಡೂ ಸಾಲಿನ ಪಂಗಡಗಳು ‘ಹದೀಸ್‌’ (ಮೊಹಮ್ಮದ್(ಸ) ಪೈಗಂಬರ್‌ ಅವರು ಜೀವನಗಾಥೆಯ ವಾಖ್ಯಾನಗಳು) ಹಾಗೂ ಮೊಹಮ್ಮದ್(ಸ) ಪೈಗಂಬರ್‌ ಅವರ ಜೀವನ ವಿಧಾನವನ್ನು ಉಲ್ಲೇಖಿಸುತ್ತವೆ.

ಕೆಲ ಮಟ್ಟಿಗೆ ಸುನ್ನಿ ಹಾಗೂ ಶಿಯಾ ಪಂಗಡಗಳು ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತವೆ. ಆದರೆ, ಆಡಂಬರದ ಸಂಭ್ರಮಾಚರಣೆಗಳನ್ನು ವಾಹಬಿಗಳು, ಸಲಾಫಿಗಳು, ದೇವಬಂದ್‌ ಹಾಗೂ ಅಹ್ಮದೀಯಾ ಪಂಗಡಗಳು ವಿರೋಧಿಸುತ್ತವೆ. ಈ ಪಂಗಡಗಳು ಹೆಚ್ಚಾಗಿರುವ ಸೌದಿ ಅರೆಬಿಯಾ, ಕತಾರ್‌ನಂಥ ರಾಷ್ಟ್ರಗಳಲ್ಲಿ ದೊಡ್ಡಮಟ್ಟದ ಆಚರಣೆ ಕಾಣದು.


ಈದ್‌ ಹಬ್ಬಕ್ಕಾಗಿ ಧ್ವಜಗಳ ಮಾರಾಟ

‘ಮೊಹಮ್ಮದ್‌(ಸ) ಪೈಗಂಬರ್‌ ಸೇರಿದಂತೆ ಯಾರದ್ದೇ ಜನ್ಮದಿನ‌ ಆಚರಿಸುವುದು ಇಸ್ಲಾಮಿಕ್ ಪದ್ಧತಿ ಅಲ್ಲ. ಪೈಗಂಬರ್‌ ಅವರು ಬದುಕಿದ್ದಾಗ ಆಗಲಿ, ಇಲ್ಲವೇ ಅವರು ಇಹಲೋಕ ತ್ಯಜಿಸಿದ ನಂತರ ಆಡಳಿತ ನಡೆಸಿದ ಹಜರತ್‌ ಅಬುಬಕ್ಕರ್‌(ರ), ಹಜರತ್ ಉಮರ್‌(ರ), ಹಜರತ್‌ ಉಸ್ಮಾನ್‌(ರ), ಹಜರತ್‌ ಅಲಿ(ರ) ಅವರ ಅವಧಿಯಲ್ಲಿ ಇಂಥ ಆಚರಣೆಗಳು ನಡೆದಿಲ್ಲ ಎಂದು ಹದೀಸ್‌ನಿಂದ ತಿಳಿಯುತ್ತದೆ. ಹೀಗಾಗಿ ಅವರ ಹೆಸರಿನಲ್ಲಿ ಆಡಂಬರ ಆಚರಣೆ ಸಲ್ಲ’ ಎನ್ನುತ್ತಾರೆ ಹಫೀಜ್‌ ಮೆಹಬೂಬ್‌.

ಅದಾಗ್ಯೂ, ‘ಮೊಹಮ್ಮದ್(ಸ) ಪೈಗಂಬರ್‌ ಅವರ ಸೀರತ್‌(ಜೀವನಗಾಥೆಯ ಪ್ರವಚನ) ಕುರಿತು ಚರ್ಚೆ, ಪ್ರವಚನ, ವಿಶೇಷ ನಮಾಜ, ಕುರಾನ್‌ ಪಠಣದಂಥ ಕಾರ್ಯಗಳ ಮೂಲಕ ಅವರ ಸ್ಮರಣೆ ಮಾಡಬಹುದು’ ಎಂದು ಅವರು ಹೇಳುತ್ತಾರೆ.

‘ಪ್ರವಾದಿ ಮೊಹಮ್ಮದ್(ಸ) ಅವರನ್ನು ಪ್ರಶಂಸಿಸುವುದು, ಅವರ ಗುಣ ಸ್ವಭಾವಗಳನ್ನು ವರ್ಣಿಸುವುದು ಪುಣ್ಯ ಕಾರ್ಯವಲ್ಲವೇ? ಅಂಥ ಕಾರ್ಯಕ್ರಮಗಳಿಗೆ ಅಪಸ್ವರ ಏಕೆ’ ಎಂಬುದು ಮತ್ತೆ ಕೆಲ ಪಂಗಡಗಳ ಪ್ರಶ್ನೆ.

‘ಬೃಹತ್‌ ಮೆರವಣಿಗೆ, ಅದರಲ್ಲಿ ಮೊಹಮ್ಮದ್(ಸ) ಅವರ ಕುರಿತ ಹಾಡುಗಳು, ಅವರ ಗುಣಗಾನ, ಅವರಿಗೆ ಜೀವನ ಕುರಿತ ಪ್ರವಚನಗಳನ್ನು ಮಾಡಬಹುದು. ಅದು ಬಿದ್‌ಅತ್‌(ಅನಾಚಾರ) ಆಗುವುದಿಲ್ಲ’ ಎಂದು ಅವರು ಪ್ರತಿಪಾದಿಸುತ್ತಾರೆ.

**

ಆಚರಣೆಗಿಂತಲೂ ಅನುಷ್ಠಾನ ಮುಖ್ಯ...

‘ರಬೀವುಲ್‌ ಅವ್ವಲ್‌ ತಿಂಗಳಲ್ಲಿ ಮೊಹಮ್ಮದ್(ಸ) ಅವರ ಜನ್ಮದಿನ ಆಚರಿಸುವುದು ಸಮಂಜಸವಲ್ಲ. ಏಕೆಂದರೆ ಕೆಲವು ವರದಿಗಳ ಪ್ರಕಾರ ಪ್ರವಾದಿ ಅವರ ನಿಧನವೂ ಇದೇ ದಿನ ಹಾಗೂ ಇದೇ ತಿಂಗಳಲ್ಲಿ ಸಂಭವಿಸಿದೆ. ಮತ್ತೊಂದೆಡೆ, ಜನ್ಮ ದಿನಾಚರಣೆ ಇಸ್ಲಾಮಿಕ ಪದ್ಧತಿಯೇ ಅಲ್ಲ.

ಪ್ರವಾದಿ ಅವರ ಸಂದೇಶ ಕೇವಲ ರಬೀವುಲ್‌ ಅವ್ವಲ್‌ ತಿಂಗಳಿಗೆ ಮಾತ್ರವೇ ಸೀಮಿತವೂ ಅಲ್ಲ. ಅದು ಇಡೀ ವರ್ಷ, ಪ್ರತಿ ಕ್ಷಣ ನೆನಪಿಡುವ, ಅನುಸರಿಸುವುದು ಮುಖ್ಯ’ ಎಂದು ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಡಾ.ಸಅದ್‌ ಬೆಳಗಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು