ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳೆ ಹಾನಿ: ₹ 212 ಕೋಟಿ ಪರಿಹಾರಕ್ಕೆ ಪ್ರಸ್ತಾವ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 514 ಮಿಮೀ., ವಾಡಿಕೆ ಮಳೆಯಾಗಬೇಕಿತ್ತು. ಆದರೆ, 399 ಮಿಮೀ., ಸುರಿದ ಮಳೆ
Published 18 ಅಕ್ಟೋಬರ್ 2023, 7:08 IST
Last Updated 18 ಅಕ್ಟೋಬರ್ 2023, 7:08 IST
ಅಕ್ಷರ ಗಾತ್ರ

–ಎಲ್‌.ಮಂಜುನಾಥ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾದ ಅನಾವೃಷ್ಟಿಯಿಂದ ಜಿಲ್ಲೆಯಲ್ಲಿ ಒಟ್ಟು 1.89 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ ಹಾಗೂ 22 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಜಿಲ್ಲೆಯ ಎಲ್ಲಾ 8 ತಾಲ್ಲೂಕುಗಳನ್ನೂ ತೀವ್ರ ಬರಪೀಡಿತ ಪ್ರದೇಶಗಳು ಎಂದು ಘೋಷಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವೂ ಸಹ ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕ್ಷಿಪ್ರಪಡೆ (ಎನ್‌ಡಿಆರ್‌ಎಫ್‌) ಮಾರ್ಗಸೂಚಿ ಅನ್ವಯ ಮೊದಲ ಹಂತದಲ್ಲಿ ₹ 161 ಕೋಟಿ. ಎರಡನೇ ಹಂತದಲ್ಲಿ 51 ಕೋಟಿ ಸೇರಿದಂತೆ ಒಟ್ಟು ₹ 212.11 ಕೋಟಿ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. 

ಮುಂಗಾರು ಹಂಗಾಮಿನಲ್ಲಿ 399 ಮಿಮೀ. ಮಳೆ ಕೊರತೆ: ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 2.56 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಬಿತ್ತನೆ ಗುರಿಯಿತ್ತು. ಜೂನ್‌ನಲ್ಲಿ ಬಿತ್ತನೆ ಚಟುವಟಿಕೆ ಆರಂಭವಾಗುವ ವೇಳೆ 125 ಮಿ.ಮೀ. ಬದಲು ಕೇವಲ 44 ಮಿಮೀ. ಮಾತ್ರ ಮಳೆಯಾಯಿತು. ಜುಲೈನಲ್ಲಿ 160 ಮಿ.ಮೀ. ಬದಲು 250 ಮಿಮೀ., ಮಳೆಯಾಯಿತು. ಈ ಅವಧಿಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಿತು.

ಈ ವೈಪರೀತ್ಯದಿಂದ ಜಿಲ್ಲೆಯ ಕೆಲ ಪ್ರದೇಶಗಳ ಜಮೀನಿನಲ್ಲಿ ಹೆಚ್ಚು ತೇವಾಂಶದಿಂದ ಬೆಳೆ ಹಾನಿಯಾದವು. ಆಗಸ್ಟ್‌ನಲ್ಲಿ 119 ಮಿಮೀ. ಬದಲು 41 ಮಿಮೀ. ಮಾತ್ರ ಮಳೆ ಸುರಿಯಿತು. ಸೆಪ್ಟೆಂಬರ್‌ನಲ್ಲೂ 120 ಮಿ.ಮೀ. ಬದಲು 62 ಮಿ.ಮೀ. ಮಳೆಯಾಯಿತು. ಹೀಗೆ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು 514 ಮಿ.ಮೀಟರ್ ಬದಲು ಕೇವಲ 399 ಮಿ.ಮೀಟರ್ ಮಾತ್ರ ಮಳೆಯಾಯಿತು.

ಜಿಲ್ಲೆಯ 8 ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂದು ಘೋಷಿಸಲಾಗಿದ್ದು ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
–ಗುರುದತ್ತ ಹೆಗಡೆ ಜಿಲ್ಲಾಧಿಕಾರಿ.

ಈ ಎಲ್ಲದರ ಪರಿಣಾಮದಿಂದ ಮೆಕ್ಕೆಜೋಳ, ಹೆಸರು, ಸೋಯಾಬೀನ್‌, ಶೇಂಗಾ, ಭತ್ತ ಹಾಗೂ ಹತ್ತಿ ಬೆಳೆಗಳು ಹಾನಿಯಾದವು. ರೈತರು ಸಂಕಷ್ಟದ ಸುಳಿಯಲ್ಲಿ ಸಿಲುಕಿದರು.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.56 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆ ಬಿತ್ತನೆ ಗುರಿಯಿತ್ತು. ಇದರಲ್ಲಿ 2.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಕೃಷಿ ಬೆಳೆ ಬಿತ್ತನೆಯಾಯಿತು. ಮಳೆ ಕೊರತೆಯಿಂದ ಒಟ್ಟು 1.89 ಲಕ್ಷ ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆ ಹಾನಿಯಾಯಿತು. ಇದರ ಜೊತೆಗೆ 22 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಹಾನಿಯಾಗಿದೆ‘ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಕಿರಣ್‌ಕುಮಾರ್ ಮಾಹಿತಿ ನೀಡಿದರು.

8 ತಾಲ್ಲೂಕು ತೀವ್ರ ಬರಪೀಡಿತ ಪ್ರದೇಶ ಘೋಷಣೆ:  ‘ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಮೂರು ತಾಲ್ಲೂಕುಗಳನ್ನು (ಧಾರವಾಡ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ನಗರ, ಕುಂದುಗೋಳ, ನವಲಗುಂದ) ಮತ್ತು ಎರಡನೇ ಹಂತದಲ್ಲಿ ಮೂರು ತಾಲ್ಲೂಕು (ಕಲಘಟಗಿ, ಅಳ್ನಾವರ ಮತ್ತು ಅಣ್ಣಿಗೇರಿ) ಸೇರಿ ಒಟ್ಟು 8 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಿತು. ಕೇಂದ್ರದ ಬರ ಅಧ್ಯಯನ ತಂಡದ ಸದಸ್ಯರು ಜಿಲ್ಲೆಗೆ ವಿವಿಧೆಡೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಮುಂಗಾರು ವೇಳೆಯಲ್ಲಿ ಜಿಲ್ಲೆಯಲ್ಲಿ ಉಂಟಾದ ಅನಾವೃಷ್ಟಿಯಿಂದ ನೆಲಗಡಲೆ ಸೋಯಾಬಿನ್‌ ಹೆಸರು ಉದ್ದು ತೊಗರಿ ಮೆಕ್ಕೆಜೋಳ ಬೆಳೆ ಹಾನಿಯಾದವು. ರೈತರು ಸಂಕಷ್ಟಕ್ಕೆ ಒಳಗಾದರು.
–ಎಂ.ಕಿರಣ್‌ಕುಮಾರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT