ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ವಿಮೆ ಪಾವತಿ ವಿಳಂಬ; ರೈತರ ಪರದಾಟ

ನಷ್ಟ ಉಂಟಾದರೂ ಸಕಾಲಕ್ಕೆ ಪಾವತಿಯಾದ ಹಣ; ಸಾಲ ಮಾಡಬೇಕಾದ ಅನಿವಾರ್ಯತೆ
Published : 24 ಆಗಸ್ಟ್ 2024, 5:33 IST
Last Updated : 24 ಆಗಸ್ಟ್ 2024, 5:33 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಅತಿವೃಷ್ಟಿ, ಅನಾವೃಷ್ಟಿ ಮತ್ತು ಹವಾಮಾನ ಬದಲಾವಣೆಯಿಂದ ಮಾವು ಬೆಳೆ ನಷ್ಟವಾದಾಗ, ಬೆಳೆ ವಿಮೆ ಸಕಾಲಕ್ಕೆ ಸಿಗದೆ ಬೆಳೆಗಾರರು ಪರದಾಡುವಂತಾಗಿದೆ. 

ಧಾರವಾಡ ಜಿಲ್ಲೆಯಲ್ಲಿ 8,575 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಹಮಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 7,249 ಮಾವು ಬೆಳೆಗಾರರು ವಿಮೆಗೆ ನೋಂದಣಿ ಮಾಡಿಸಿದ್ದಾರೆ. ನಷ್ಟ ಉಂಟಾದ ಪ್ರತಿ ವರ್ಷವೂ ವಿಮಾ ಮೊತ್ತ ತಡವಾಗಿ ಬಿಡುಗಡೆಯಾಗುತ್ತಿದ್ದು, ಇದು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಎಂಬುದು ಬೆಳೆಗಾರರ ಅಳಲು.

‘2021ರ ಮಾವಿನ ಬೆಳೆ ವಿಮೆ ಮೊತ್ತ ಈಚೆಗೆ ನನ್ನ ಖಾತೆಗೆ ಪಾವತಿಯಾಗಿದೆ. 2022, 2023ರ ವಿಮೆ ಹಣ ಇನ್ನೂ ಖಾತೆಗೆ ಬಂದಿಲ್ಲ. ಈ ವರ್ಷದ ಪ್ರೀಮಿಯಂ ಮೊತ್ತ ಈಗಾಗಲೇ ಕಟ್ಟಿರುವೆ. ಕಳೆದೆರಡು ವರ್ಷಗಳ ವಿಮೆ ವಿಳಂಬವಾಗಿರುವ ಕುರಿತು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಶೀಘ್ರ ಬಿಡುಗಡೆಯಾಗುವ ಭರವಸೆ ನೀಡುತ್ತಾರೆ’ ಎಂದು ಗಾಮನಗಟ್ಟಿಯ ಮಾವು ಬೆಳೆಗಾರ ಬಸವರಾಜ ಮನಗುಂಡಿ ತಿಳಿಸಿದರು.

‘ಮಾವಿನ ಮರ, ಬೆಳೆಗಳ ನಿರ್ವಹಣೆಗೆ ವರ್ಷಕ್ಕೆ ₹50 ಸಾವಿರ ಖರ್ಚಾಗುತ್ತದೆ. ಬೆಳೆ ನಷ್ಟವಾದರೆ ಆರ್ಥಿಕವಾಗಿ ಕುಸಿಯುತ್ತೇವೆ. ಬೇರೆ ಬೆಳೆ ಇರದಿದ್ದರಂತೂ ಸಾಲ ಅನಿವಾರ್ಯವಾಗುತ್ತದೆ. ಸಕಾಲಕ್ಕೆ ವಿಮೆ ಮೊತ್ತ ಸಿಕ್ಕರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಅವರು.  

‘2022ರಲ್ಲಿ ಬ್ಯಾಂಕ್‌ ಖಾತೆ ಬಂದ್‌ ಆಗಿದ್ದರಿಂದ ವಿಮೆ ಬಂದಿಲ್ಲ. ಕಳೆದ ವರ್ಷ ಅಪಾರ ಪ್ರಮಾಣದಲ್ಲಿ ಮಾವು ಹಾನಿಯಾಯಿತು. ವಿಮೆ ಹಣ ಇನ್ನೂ ಕೈಸೇರಿಲ್ಲ. ನೆರವಿಗಾಗಿ ಕಾಯುವುದು ಅನಿವಾರ್ಯವಾಗಿದೆ. ಈ ಕಾರಣಕ್ಕೆ ಹಲವು ಬೆಳೆಗಾರರು ಮರಗಳನ್ನು ಕತ್ತರಿಸಿ, ಬೇರೆ ಬೆಳೆಗಳ ಮೊರೆ ಹೋಗುತ್ತಿದ್ದಾರೆ. ಬೆಳೆನಷ್ಟಕ್ಕೆ ಸರ್ಕಾರದಿಂದ ಸಿಗುವ ಪರಿಹಾರವಂತೂ ಗಗನಕುಸುಮ. ವಿಮೆ ಮೊತ್ತವನ್ನಾದರೂ ಬೇಗ ನೀಡಲು ಸರ್ಕಾರ ಕ್ರಮ ವಹಿಸಬೇಕು’ ಎಂದು ರೈತ ಈಶ್ವರ ಮಾಳಣ್ಣವರ ತಿಳಿಸಿದರು.

ನವೆಂಬರ್‌–ಡಿಸೆಂಬರ್‌ನಲ್ಲಿ ಸಾಧ್ಯತೆ

‘ಮಾವು ಬೆಳೆ ನವೆಂಬರ್‌–ಡಿಸೆಂಬರ್‌ ಸಮಯದಲ್ಲಿ ಹೂ ಬಿಟ್ಟರೂ, ಹವಾಮಾನ ಆಧರಿಸಿ ಮೇ–ಜೂನ್‌ನಲ್ಲಿ ಸಮೀಕ್ಷೆ ನಡೆಸಿ, ನಷ್ಟದ ಲೆಕ್ಕಾಚಾರ ಮಾಡಲಾಗುತ್ತದೆ. ರಾಜ್ಯದಾದ್ಯಂತ ಈ ಪ್ರಕ್ರಿಯೆ ಮುಗಿದು ವಿಮಾ ಕಂಪನಿಯು ಮೊತ್ತವನ್ನು ರೈತರ ಖಾತೆಗೆ ಪಾವತಿಸಲು ಕನಿಷ್ಠ ಆರು ತಿಂಗಳು ಸಮಯ ಹಿಡಿಯುತ್ತದೆ. 2022, 2023ರ ವಿಮೆ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಪಾವತಿಯಾಗಬಹುದು’ ಎಂಬುದು ತೋಟಗಾರಿಕಾ ಇಲಾಖೆಯ ಮಾಹಿತಿ.  

‘ವಿಮಾ ಕಂಪನಿ ಹಾಗೂ ರೈತರ ನಡುವೆ ನೇರ ವ್ಯವಹಾರ ನಡೆಯುತ್ತದೆ. ಬೆಳೆ ಪರಿಶೀಲನೆ ವೇಳೆ ತಪ್ಪು ಮಾಹಿತಿ ದಾಖಲಾಗಿದ್ದರೆ ಮಾತ್ರ ಇಲಾಖೆ ಮಧ್ಯ ಪ್ರವೇಶಿಸುತ್ತದೆ. ಮರುಪರಿಶೀಲನೆ ನಡೆಸಿ, ಮಾಹಿತಿ ದಾಖಲಿಸಲಾಗುತ್ತದೆ’ ಎನ್ನುತ್ತಾರೆ ಅಧಿಕಾರಿಗಳು.

ವಿಮೆ ಪಾವತಿಯಲ್ಲಿ ವಿಳಂಬವಾದರೂ, ರೈತರೇ ನಿಖರ ಮಾಹಿತಿ ನೀಡಿದರೆ ತೊಂದರೆಯಾಗದು. ಕೆಲ ಪ್ರಕರಣದಲ್ಲಿ ಸಮಸ್ಯೆಯಾಗಿದ್ದು, ಸರಿಪಡಿಸಲಾಗುತ್ತದೆ
ಪ್ರಭುಲಿಂಗ ಗಡ್ಡದ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ
ಒಂದೊಂದು ಜಿಲ್ಲೆಗೆ, ತಾಲ್ಲೂಕಿಗೆ ಪ್ರತ್ಯೇಕವಾಗಿ ವಿಮೆ ನಿಗದಿ ಮಾಡಲಾಗುತ್ತದೆ. ಅಧಿಕಾರಿಗಳು ಎಲ್ಲ ಕಡೆ ಭೇಟಿ ನೀಡಿ, ಬೆಳೆ ಪರಿಶೀಲಿಸುವುದಿಲ್ಲ. ಇದರಿಂದ ಸಮಸ್ಯೆಯಾಗಿದೆ
ಮಹದೇವಪ್ಪ ಯಡವಣ್ಣನವರ, ಮಾವು ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT