ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ| ಸೈಬರ್‌ ಅಪರಾಧ; ಜಾಗೃತಿ ಅಗತ್ಯ- ರಮನ್ ಗುಪ್ತಾ

ಸೈಬರ್‌ ಅಪರಾಧ ಜಾಗೃತಿ ಕಾರ್ಯಾಗಾರ: ಕಮಿಷನರ್‌ ಗುಪ್ತಾ ಸಲಹೆ
Published 10 ಆಗಸ್ಟ್ 2023, 7:36 IST
Last Updated 10 ಆಗಸ್ಟ್ 2023, 7:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕಣ್ಣಿಗೆ ಕಾಣುವ ಅಪರಾಧ ಪ್ರಕರಣಗಳಿಗಿಂತ, ಕಣ್ಣಿಗೆ ಕಾಣದ ಸೈಬರ್‌ ಅಪರಾಧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಡಿಜಿಟಲ್‌ ಯುಗದಲ್ಲಿ ಇಂಟರ್‌ನೆಟ್‌ ಬಳಸುವ ಪ್ರತಿಯೊಂದು ಕ್ಷಣವೂ ಜಾಗೃತಿಯಿಂದ ಇರಬೇಕು. ಇಲ್ಲದಿದ್ದರೆ ಸುಲಭವಾಗಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿಬಿಡುತ್ತೇವೆ’ ಎಂದು ಹು-ಧಾ ಮಹಾನಗರ ಪೊಲೀಸ್ ಕಮಿಷನರ್‌ ರಮನ್ ಗುಪ್ತಾ ಎಚ್ಚರಿಸಿದರು.

ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ಸೈಬರ್ ಅಪರಾಧ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಪ್ರತಿಯೊಂದು ವ್ಯವಹಾರಕ್ಕೂ ನಾವು ಡಿಜಿಟಲ್‌ ಅವಲಂಬಿಸಿದ್ದೇವೆ. ಡಿಜಿಟಲ್‌ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಜವಾದ ಜಗತ್ತು ಮರೆತು, ಜಾಲತಾಣಗಳ ಜಗತ್ತಿನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದೇವೆ. ಡಿಜಿಟಲ್‌ ಉಪಕರಣಗಳ ಬಳಕೆ ಹೆಚ್ಚಾಗುತ್ತಿದ್ದಂತೆ, ಸೈಬರ್‌ ಅಪರಾಧಗಳ ಸಂಖ್ಯೆಯೂ ಹೆಚ್ಚಾಗುತ್ತಿವೆ. ಅದು ಮನರಂಜನೆ ನೀಡುವ ಜೊತೆಗೆ ಅಪಾಯಕಾರಿಯೂ ಹೌದು’ ಎಂದರು.

‘ಜಾಲತಾಣಗಳಲ್ಲಿ ಬಳಸುವ ಕೆಲವು ಖಾತೆಗಳ ಪಾಸ್‌ವರ್ಡ್‌ ಹಾಗೂ ಇಂಟರ್‌ನೆಟ್‌ ಬ್ಯಾಂಕ್‌ನ ಪಾಸ್‌ವರ್ಡ್ ಕ್ಲಿಷ್ಟಕರವಾಗಿರಬೇಕು. ದೇಶದ ಯಾವುದೋ ಒಂದು ಮೂಲೆಯಲ್ಲಿ ಕೂತು ನಮ್ಮ ಖಾತೆಯನ್ನು ಹ್ಯಾಕ್‌ ಮಾಡುತ್ತಾರೆ. ಇಲ್ಲವೇ, ನಮ್ಮಿಂದಲೇ ವೈಯಕ್ತಿಕ ಮಾಹಿತಿ ಪಡೆದು ವಂಚಿಸುತ್ತಾರೆ. ಗೂಗಲ್‌ ಸರ್ಚ್‌ನ ಆರಂಭದಲ್ಲಿ ಸಿಗುವ ಗ್ರಾಹಕರ ಸಹಾಯವಾಣಿ ಬಹುತೇಕ ವಂಚಕರದ್ದೇ ಆಗಿರುತ್ತದೆ. ಅವರು ಕಂಪನಿಗೆ ಹಣಕೊಟ್ಟು ಆರಂಭದಲ್ಲಿಯೇ ನಂಬರ್‌ ಬರುವಂತೆ ಮಾಡಿಕೊಂಡಿರುತ್ತಾರೆ. ಶೇ 90 ರಷ್ಟು ಮಂದಿ ಅಂತಹ ಸಹಾಯವಾಣಿ ನಂಬರ್‌ನಿಂದಲೇ ವಂಚನೆಗೊಳಗಾಗುತ್ತಾರೆ. ನಾವೇ ಅವರಿಗೆ ಕರೆ ಮಾಡಿ, ನಮ್ಮ‌ ಮಾಹಿತಿ ನೀಡಿ ಅವರ ಜಾಲದಲ್ಲಿ ಸಿಲುಕುತ್ತೇವೆ. ಸೈಬರ್‌ ಅಪರಾಧಕ್ಕೊಳಗಾದ ಒಂದು ತಾಸಿನ ಒಳಗೆ (ಗೋಲ್ಡನ್‌ ಹವರ್) 1930ಗೆ ಕರೆ ಮಾಡಿ ತಿಳಿಸಿದರೆ, ಪೊಲೀಸರು ಹಣ ವರ್ಗಾವಣೆಯಾದ ಖಾತೆಯನ್ನು ತಕ್ಷಣ ಬ್ಲಾಕ್ ಮಾಡುತ್ತಾರೆ. ದುರಾಸೆಯೇ ಸೈಬರ್‌ ಅಪರಾಧಕ್ಕೆ ಪ್ರಮುಖ ಕಾರಣ’ ಎಂದು ಅಭಿಪ್ರಾಯಪಟ್ಟರು.

ಜಾಲತಾಣಗಳಲ್ಲಿ ನಡೆಯುವ ಸೈಬರ್‌ ಅಪರಾಧ ಕುರಿತು ಪಲೋ ಆಲ್ಟೋ ನೆಟ್‌ವರ್ಕ್‌ ಕಂಪನಿಯ ಹಿರಿಯ ಎಂಜಿನಿಯರ್ ಪ್ರಣಯ ಮಾಣಿಕ್‌ ಮಾಹಿತಿ ನೀಡಿದರು. ‘ದೇಶದ ಜನಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು ಮೊಬೈಲ್‌ಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ ಶೇ 70ರಷ್ಟು ಮೊಬೈಲ್‌ಗಳು ಇಂಟರ್‌ನೆಟ್‌ ಸಂಪರ್ಕ ಹೊಂದಿವೆ. ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್‌, ವಾಟ್ಸ್‌ಆ್ಯಪ್‌ ಜಾಲತಾಣಗಳನ್ನು ಬಳಸುವ ಕೆಲವರು, ಭದ್ರತೆಗೆ ಗಮನ ನೀಡುವುದಿಲ್ಲ. ಅದರಿಂದ ಸುಲಭವಾಗಿ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ಜಾಲತಾಣ ಬಳಸುವವರು ವೈಯಕ್ತಿಕ ಮಾಹಿತಿ ನೀಡುವಾಗ ಜಾಗೃತೆಯಿಂದ ಇರಬೇಕು’ ಎಂದರು.

ಕೆಸಿಸಿಐ ಅಧ್ಯಕ್ಷ ವಿನಯ ಜವಳಿ, ಉದಯ ರೇವಣಕರ್, ಸಿದ್ಧಾರೂಢ ಅಂಗಡಿ, ಶಿವಾನಂದ‌ ತಿಮ್ಮಾಪುರ, ಸಂದೀಪ ಬಿಡಸಾರಿಯ ಇದ್ದರು.

‘ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬೇಡಿ’ ‘ಜಾಲತಾಣಗಳಲ್ಲಿ ಹೆಸರು ಭಾವಚಿತ್ರ ಮೇಲ್‌ ಐಡಿ ಮೊಬೈಲ್‌ ನಂಬರ್‌ಗಳನ್ನು ನೀಡಿದ ಎಷ್ಟೋ ಮಂದಿ ಹಣ ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿಯ ಬದುಕು ಸಹ ಹಾಳಾಗಿದೆ. ದೊಡ್ಡ ಉದ್ಯಮಿಗಳು ವಂಚಕರ ಕರೆಗೆ ಮರುಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾರೆ. ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ಜಾಲತಾಣಗಳಲ್ಲಿ ಹಂಚಿಕೆ ಮಾಡಿಕೊಳ್ಳಬಾರದು. ಭಾವನಾತ್ಮಕವಾಗಿ ಸಂದೇಶ ಕಳುಹಿಸಿ ವಂಚಿಸುವವರು ಇದ್ದಾರೆ. ಅಂತಹ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೆ ಅಳಿಸಿಹಾಕಬೇಕು’ ಎಂದು ಕಮಿಷನರ್‌ ಗುಪ್ತಾ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT