ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುದೇವ ರವೀಂದ್ರನಾಥ ಟ್ಯಾಗೋರ ವಿರಮಿಸಿದ ಸ್ಥಳ ಸ್ಮಾರಕವನ್ನಾಗಿಸಲು ಆಗ್ರಹ

ಟ್ಯಾಗೋರ ಅವರ 158ನೇ ಜನ್ಮದಿನಾಚರಣೆ
Last Updated 7 ಮೇ 2019, 10:09 IST
ಅಕ್ಷರ ಗಾತ್ರ

ಧಾರವಾಡ: ‘ಮೈಸೂರು ದಸರಾಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಹಾರಾಜರ ಆಹ್ವಾನದ ಮೇರೆಗೆ 1922ರ ಅ. 25ರಂದು ರೈಲಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಗುರುದೇವ ರವೀಂದ್ರನಾಥ ಟ್ಯಾಗೋರ ಅವರು ಧಾರವಾಡ ನಿಲ್ದಾಣದಲ್ಲಿ ಇಳಿದು ವಿರಮಿಸಿದ ಸ್ಥಳವನ್ನು ಸ್ಮಾರಕವನ್ನಾಗಿ ಪರಿವರ್ತಿಸಬೇಕು’ ಎಂದು ಪುರಸ್ಕಾರ ಸೇವಾ ಸಂಸ್ಥೆ ಒತ್ತಾಯಿಸಿದೆ.

ರವೀಂದ್ರರ 158ನೇ ಜನ್ಮದಿನವಾದ ಮಂಗಳವಾರ ಇಲ್ಲಿನ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿದ ಸಂಸ್ಥೆಯ ಸದಸ್ಯರು, ಗುರುದೇವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಜನಪ್ರತಿನಿಧಿಗಳು, ರೈಲ್ವೇ ಇಲಾಖೆ, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಸಂಸ್ಥೆಯ ಅಧ್ಯಕ್ಷ ಕೃಷ್ಣ ಜೋಶಿ ಮಾತನಾಡಿ, ‘ಸಾಹಿತ್ಯ ರಚನೆ, ಉಪನ್ಯಾಸಗಳ ಮೂಲಕ ದೇಶವಿದೇಶಗಳಲ್ಲಿ ಭಾರತೀಯ ಸಂಸ್ಕೃತಿಯ ಹಿರಿಮೆ ಹಾಗೂ ವೈಶಿಷ್ಟ್ಯತೆ ಪರಿಚಯಿಸಿದ ವಿಶ್ವಕವಿ ರವೀಂದ್ರನಾಥ ಟ್ಯಾಗೋರ ಅವರು ಬಂಗಾಳಿ ಭಾಷೆಯ ಹೊಸ ಶೈಲಿಯ ಜನಕರಾಗಿದ್ದಾರೆ. ದೇಶದ ಬೌದ್ಧಿಕ ಹಾಗೂ ಸಾಂಸ್ಕೃತಿಕ ಬಾಳನ್ನು ಶ್ರೀಮಂತಗೊಳಿಸಿದ ಅವರು ರಚಿಸಿದ ಕೃತಿಗಳನ್ನು ಸಾರ್ವಜನಿಕರ ಮಾಹಿತಿಗೆ ಸಂಗ್ರಹಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಇದಕ್ಕಾಗಿ ಧಾರವಾಡದ ನಿಲ್ದಾಣದಲ್ಲಿ ಸ್ಮಾರಕ ನಿರ್ಮಾಣವಾಗಬೇಕು’ ಎಂದು ಆಗ್ರಹಿಸಿದರು.

ಹಿರಿಯ ಸಾಹಿತಿ ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿ, ‘ಟ್ಯಾಗೋರ ಅವರು ಕವಿತೆಗಳನ್ನು ರಚಿಸುವುದರ ಜತೆಗೆ ನಾಟಕ, ಸಂಗೀತ ಶಿಕ್ಷಣ ತಜ್ಞರು ಆಗಿದ್ದರು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ’ವಿಶ್ವಭಾರತಿ’ಯು ಇಂದು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದಿದೆ. ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ಆಸಕ್ತಿ ಇರದ ರವೀಂದ್ರರು ಪ್ರಕೃತಿಯ ಮಡಿಲಲ್ಲೇ ಮಕ್ಕಳು ಅಭ್ಯಾಸ ಮಾಡುವಂತಾಗಬೇಕು ಎಂಬ ಭಾವನೆ ಹೊಂದಿದ್ದರು. ಜನ ಸಾಮಾನ್ಯರ ಜೀವನದ ಸುಲಭ ಸರಳ ವಿಷಯಗಳಿಂದ ಅವರ ಕಿರು ಕಥೆಗಳ ಹಂದರ ನಿರ್ಮಿಸಲಾಗಿದೆ. ಕವಿ ರವೀಂದ್ರರು ಬ್ರಿಟಿಷರ ಸಾರ್ವಭೌಮತ್ವವನ್ನು ಧಿಕ್ಕರಿಸಿದ ಸ್ವಾಂತಂತ್ರ್ಯ ಪ್ರಿಯರು’ ಎಂದು ಬಣ್ಣಿಸಿದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್‌.ಎಚ್.ಮಿಟ್ಟಲಕೋಡ, ಸಾಹಿತಿ ಶ್ರೀನಿವಾಸ ವಾಡಪ್ಪಿ, ಚನ್ನಪ್ಪ ಅಂಗಡಿ, ರೈಲ್ವೇ ನಿಲ್ದಾಣದ ಅಧಿಕಾರಿ ಜಿ.ಜಿ. ಕುಲಕರ್ಣಿ, ಕೆ.ಎಚ್.ನಾಯಕ, ಮುರಳಿಧರರಾವ್‌ ಮಾತನಾಡಿದರು.

ವೀರಣ್ಣ ಒಡ್ಡೀನ, ಬಿ.ಬಿ. ಪಾಟೀಲ,ಚಂದ್ರಶೇಖರ ಅಮೀನಗಡ, ಪಂಡಿತ ಮುಂಜಿ, ಎಂ.ಬಿ ಬೆನಪ್ಪನವರ, ಎಸ್.ವಾಯ. ಕುಲಕರ್ಣಿ, ರಾಘವೇಂದ್ರ ಕುಂದಗೋಳ, ಲಾರೆನ್ಸ್ ಝಳಕಿ, ಕಾರ್ಗಿಲ್ ಹಿರೋ ಬಸಪ್ಪ ಜಾಧವ, ವೈ.ಪಿ. ಮದ್ನೂರ, ಮಹಾಂತೇಶ ನರೇಗಲ್, ಎಸ್.ವಿ. ಸಂಗೂರಮಠ, ಮಾರ್ತಾಂಡಪ್ಪ ಕತ್ತಿ, ಎಂ.ಕೆ. ಸುಧನ್ವಾ, ರಮೇಶ ನಾಡಿಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT