ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Dharwad Krishi Mela | ಔಷಧೀಯ ಸಸ್ಯ ಪ್ರದರ್ಶನ; ಮಾಹಿತಿಗೆ ‘ಕ್ಯುಆರ್‌ ಕೋಡ್‌‘

ಮಂಜು ಆರ್. ಗಿರಿಯಾಲ
Published : 23 ಸೆಪ್ಟೆಂಬರ್ 2024, 5:26 IST
Last Updated : 23 ಸೆಪ್ಟೆಂಬರ್ 2024, 5:26 IST
ಫಾಲೋ ಮಾಡಿ
Comments

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಔಷಧೀಯ ಮತ್ತು ಸುಗಂಧ ಸಸ್ಯಗಳ ಪ್ರದರ್ಶನ ಗಮನ ಸಳೆಯುತ್ತಿದೆ. ಸಸ್ಯಗಳ ‘ಕ್ಯುಆರ್’ ಕೋಡ್ ಹಾಳೆ ಇಡಲಾಗಿದ್ದು, ಸ್ಕ್ಯಾನ್ ಮಾಡಿ ಸಸ್ಯಗಳ ಉಪಯೋಗ ತಿಳಿದುಕೊಳ್ಳಬಹುದು.

ವಿಶ್ವವಿದ್ಯಾಲಯದ ಸೈದಾಪುರ್ ಫಾರ್ಮನ್ ಹೈಟೆಕ್ ತೋಟಗಾರಿಕೆ ಘಟಕ ಈ ಸಸ್ಯಗಳನ್ನು ಅನಾವರಣಗೊಳಿಸಿದೆ. ಮೇಳದ ವೀಕ್ಷಣೆಗೆ ಬರುವ ವಿದ್ಯಾರ್ಥಿಗಳು, ಸಾರ್ವಜನಿಕರು ಸಸ್ಯಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. 

ಸೈದಾಪುರ ಫಾರ್ಮ್‍ನಲ್ಲಿ 150 ಕ್ಕೂ ಹೆಚ್ಚು ವಿವಿಧ ಪ್ರಭೇದದ ಸಸ್ಯಗಳಿವೆ. ಈ ಪೈಕಿ ಸುಮಾರು 60 ಔಷಧೀಯ ಸಸ್ಯಗಳು ಮಾರಾಟಕ್ಕೆ ಲಭ್ಯ ಇವೆ. ಸಸಿಗೆ ₹ 30 ರಿಂದ ₹ 80 ದರ ನಿಗದಿಪಡಿಸಲಾಗಿದೆ.

ಲವಂಗ ತುಳಸಿ, ಲೋಳೆಸರ, ಕಕ್ಕೆ, ಗುಲಗಂಜಿ, ನಿಂಬೆ ಹುಲ್ಲು, ಲಾವಂಚ, ಗುಗ್ಗಳ, ಬಸವೆ, ರೋಸಮೇರಿ, ಭೃಂಗರಾಜ, ಶಾತವರಿ, ಕಚೀರ, ಸಪೇದ ಮುಸ್ಲಿ, ಶಂಕಪುಷ್ಟಿ, ನೆಲಬೇವು... ಸಹಿತ ಅನೇಕ ಸಸ್ಯಗಳು ಪ್ರದರ್ಶನದಲ್ಲಿ ಇವೆ. ಮಾಹಿತಿ ನೀಡಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಇದ್ದಾರೆ.

ಮಧುಮೇಹ ನಿಯಂತ್ರಣ, ಜ್ವರ ನಿವಾರಕ, ಅತಿಸಾರ ನಿಯಂತ್ರಣ, ಸೊಳ್ಳೆ ನಿರೋಧಕ, ಮೂತ್ರಕೋಶದ ಕಲ್ಲು, ಹೊಟ್ಟೆ ನೋವು, ರಕ್ತದ ಒತ್ತಡ ನಿಯಂತ್ರಣ, ಪೌಷ್ಟಿಕಾಂಶ ವೃದ್ಧಿ, ನಿದ್ರಾಹೀನತೆ ನಿಯಂತ್ರಣ, ಜಂತುನಾಶಕ ಮೊದಲಾದವುಗಳಿಗೆ ಸಂಬಂಧಿಸಿದ ಔಷಧೀಯ ಗಿಡಗಳಿವೆ.

‘ಮೇಳದಲ್ಲಿ 60 ಔಷಧೀಯ ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಲೋಳೆಸರ, ಇನ್ಸುಲಿನ್ ಗಿಡ, ನೆಲಬೇವು, ತುಳಸಿ, ಚಕ್ರಮಣಿಗೆ ಹೆಚ್ಚು ಬೇಡಿಕೆ ಇದೆ’ ಎಂದು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಸರಸ್ವತಿ ಸಂಪಗಾವಿ ತಿಳಿಸಿದರು.

‘ತುಳಸಿ ಎಲೆ, ಬೀಜ ಬೇರುಗಳು ಅಸ್ತಮಾ, ಚರ್ಮರೋಗ, ನೆಗಡಿ, ಕಿವಿನೋವು ಗುಣಪಡಿಸುತ್ತವೆ. ಭೃಂಗರಾಜ ಎಲೆ ಕೇಶವರ್ಧನೆಗೆ ಸಹಕಾರಿಯಾಗಿದೆ. ಈ ಸಸ್ಯಗಳನ್ನು ಕಡಿಮೆ ನೀರಿನಲ್ಲಿ ಬೆಳೆಯಬಹುದು. ವೈದ್ಯರ ಸಲಹೆ ಪಡೆದು ಈ ಔಷಧೀಯ ಸಸ್ಯಗಳನ್ನು ಬಳಸಬಹುದು’ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಮಧುಮೇಹ ನಿರ್ವಹಣೆ, ಮೂತ್ರ ಕೋಶದ ಕಲ್ಲು ಸಮಸ್ಯೆಗೆ ಪರಿಹಾರ, ಬಾಯಿಹುಣ್ಣು ನಿವಾರಣೆ, ತೆಲೆನೋವು ನಿವಾರಣೆ ಮೊದಲಾದವುಗಳಿಗೆ ಔಷಧೀಯ ಸಸ್ಯಗಳ ಮಾಹಿತಿಯನ್ನು ಪ್ರದರ್ಶಿಸಲಾಗಿದೆ.

ಮನೆ ಅಂಗಳ ಅಥವಾ ಚಾವಣಿಯ ಕುಂಡಗಳಲ್ಲಿ ಔಷಧೀಯ ಸಸ್ಯ ಬೆಳೆಸಬಹುದು. ಕೆಲವು ಸಸ್ಯಗಳ ಎಲೆ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ
–ಸರಸ್ವತಿ ಸಂಪಗಾವಿ, ಕೃಷಿ ವಿವಿ ತೋಟಗಾರಿಕೆ ವಿಜ್ಞಾನಿ
ಔಷಧೀಯ ಸಸ್ಯಗಳ ಪಕ್ಕ ಕ್ಯುಆರ್ ಕೋಡ್ ಇಡುವುದರ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಫಲಕ ಅಳವಡಿಸಬೇಕಿತ್ತು. ಮೊಬೈಲ್ ಫೋನ್‌ ಇಲ್ಲದವರೂ ಮಾಹಿತಿ ಪಡೆಯಬಹುದಿತ್ತು
–ವಿಶ್ವನಾಥ ತೆಂಗಳ್ಳಿ, ರೈತ ಕಲಬುರಗಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT