ಬುಧವಾರ, ಏಪ್ರಿಲ್ 21, 2021
30 °C
ಮೈಸೂರು–ಧಾರವಾಡ ಎಕ್ಸ್‌ಪ್ರೆಸ್‌ ರೈಲನ್ನು ಮೀರಜ್‌ಗೆ ವಿಸ್ತರಿಸುವದಕ್ಕೆ ವಿರೋಧ

ಈ ರೈಲು ಇರಲಿ; ಹೊಸ ರೈಲು ಬಿಡಲಿ

ಇ. ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ಮೈಸೂರು–ಧಾರವಾಡ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 17301/302) ರೈಲನ್ನು ಮೀರಜ್‌ಗೆ ವಿಸ್ತರಿಸುವ ಪ್ರಸ್ತಾವದ ಕುರಿತು ತೀವ್ರ ವಿರೋಧ ವ್ಯಕ್ತವಾಗಿದೆ.

ಪ್ರಸ್ತಾವಕ್ಕೆ ಧಾರವಾಡದ ಹಲವು ಸಮಾನ ಮನಸ್ಕರು, ರೈಲ್ವೆ ಇಲಾಖೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ.

ರೈಲ್ವೆ ಸಚಿವ ಪೀಯೂಷ್ ಗೋಯಲ್‌ ಅವರಿಗೆ ಪತ್ರ ಬರೆದಿರುವ ಕೆಲವರು, ರೈಲನ್ನು ಯಥಾಸ್ಥಿತಿಯಂತೆ ಮುಂದುವರಿಸಲು ಕೋರಿದ್ದಾರೆ. ಜತೆಗೆ ಮೈಸೂರು ಮೀರಜ್‌ವರೆಗೂ ಹೊಸ ರೈಲನ್ನು ಪರಿಚಯಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಹೀಗೆ ಪತ್ರ ಬರೆದವರಲ್ಲಿ ಒಬ್ಬರಾದ ಸಂಜೀವ ಹಿರೇಮಠ ಅವರು ಪ್ರತಿಕ್ರಿಯಿಸಿ, ‘ಈ ರೈಲು ಬರೀ ಹುಬ್ಬಳ್ಳಿ ಧಾರವಾಡಕ್ಕೆ ಮಾತ್ರವಲ್ಲ ಉತ್ತರ ಕರ್ನಾಟಕದ ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ ಜಿಲ್ಲೆಯ ಪ್ರಯಾಣಿಕರೂ ಇದೇ ರೈಲನ್ನು ನೆಚ್ಚಿಕೊಂಡಿದ್ದಾರೆ. ಹತ್ತಿರದ ಸವದತ್ತಿ, ರಾಮದುರ್ಗ, ಹಳಿಯಾಳ, ದಾಂಡೇಲಿ, ಕಿತ್ತೂರು ಹಾಗೂ ಕಲಘಟಗಿ ಪ್ರಯಾಣಿಕರೂ ಇದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಅವರೆಲ್ಲರಿಗೂ ಈ ರೈಲಿನ ವೇಳೆಗೆ ಹೊಂದಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಸದ್ಯ ಈ ರೈಲಿನಲ್ಲಿ ಜನರಲ್‌ ಕೋಚ್‌ ಸಂಖ್ಯೆ 7 ಮಾತ್ರ ಇದೆ. ಧಾರವಾಡ ಹಾಗೂ ಹುಬ್ಬಳ್ಳಿಯಿಂದ ಸೇರಿ ನಿತ್ಯ ಸುಮಾರು 500 ಪ್ರಯಾಣಿಕರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಸ್ಲೀಪರ್‌ನಲ್ಲೂ ಅಂದಾಜು 300ರಿಂದ 350 ಬರ್ತ್‌ಗಳು ಸಿಗುತ್ತಿವೆ. ಒಂದೊಮ್ಮೆ ಇದೇ ರೈಲನ್ನು ಮೀರಜ್‌ಗೆ ವಿಸ್ತರಿಸಿದರೆ, ಹುಬ್ಬಳ್ಳಿ ಧಾರವಾಡದ ನಾಗರಿಕರಿಗೆ ಸೀಟುಗಳು ಕಡಿಮೆ ಲಭ್ಯವಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಉತ್ತರ ಕರ್ನಾಟಕದ ಹಲವು ಭಾಗಗಳಿಗೆ ಹುಬ್ಬಳ್ಳಿ–ಧಾರವಾಡ ಕೇಂದ್ರ ಪ್ರದೇಶವಾಗಿದೆ. ಮೈಸೂರಿಗೆ ಹೋಗುವವರು ಹಾಗೂ ಕಡೂರಿನಲ್ಲಿ ಇಳಿದು ಧರ್ಮಸ್ಥಳಕ್ಕೆ ಹೋಗುವವರು ಈ ರೈಲನ್ನೇ ನೆಚ್ಚಿಕೊಂಡಿದ್ದಾರೆ. ಹೀಗಾಗಿ ಬಹಳಷ್ಟು ಪ್ರಯಾಣಿಕರು ಅವಳಿ ನಗರಕ್ಕೆ ಬಂದು, ರೈಲು ಮೂಲಕ ಪ್ರಯಾಣಿಸುತ್ತಾರೆ. ಆದರೆ ಇರುವ ರೈಲಿನ ವೇಳೆ ಬದಲಿಸುವುದು ಅಥವಾ ಅದನ್ನು ಮೀರಜ್‌ವರೆಗೆ ವಿಸ್ತರಿಸುವುದರಿಂದ ಮೈಸೂರಿನೊಂದಿಗೆ ಸಂಪರ್ಕ ಹೊಂದಿರುವ ಈ ಭಾಗದ ಬಹಳಷ್ಟು ಪ್ರಯಾಣಿಕರಿಗೆ ತೊಂದರೆಯಾಗಲಿದೆ’ ಎಂದು ಸಂಜೀವ ಅವರು ಸಮಸ್ಯೆಯನ್ನು ತೋಡಿಕೊಂಡರು.

ಇದೇ ವಿಷಯವಾಗಿ ಸಚಿವರಿಗೆ ಪತ್ರ ಬರೆದಿರುವ ನೈರುತ್ಯ ರೈಲ್ವೆಯ ಡಿಆರ್‌ಯುಸಿಸಿ ಮಾಜಿ ಸದಸ್ಯ ಪಿ.ಜಿ. ನರಸಾಪುರ, ‘ಮುಂಬೈನಿಂದ ಮೈಸೂರಿಗೆ ಹೊಸ ರೈಲನ್ನು ಬಿಡುವತ್ತ ರೈಲ್ವೆ ಇಲಾಖೆ ಯೋಚಿಸಿದರೆ ಉತ್ತಮ. 24 ತಾಸಿನ ಪ್ರಯಾಣದ ಈ ರೈಲಿನಿಂದಾಗಿ ಈ ಭಾಗದ ಬಹಳಷ್ಟು ಪ್ರದೇಶಗಳಿಗೆ ಅನುಕೂಲವಾಗಲಿದೆ. ಆ ರೈಲು ಬೆಳಗಾವಿಗೆ ಬೆಳಿಗ್ಗೆ ಬೇಗನೆ ತಲುಪುವಂತೆ ಸಮಯ ನಿಗದಿಪಡಿಸಿದಲ್ಲಿ ಆ ಭಾಗದ ಜನರಿಗೂ ಅನುಕೂಲವಾಗಲಿದೆ’ ಎಂದರು.

ಇದೀಗ ಈ ವಿಷಯ ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಷಯ ಚರ್ಚೆಯಾಗುತ್ತಿದೆ. ಧಾರವಾಡ–ಮೈಸೂರು ಎಕ್ಸ್‌ಪ್ರೆಸ್‌ ರೈಲನ್ನು ಬೇರೆಡೆ ವಿಸ್ತರಿಸದಂತೆ ಹಲವರು ಸಂದೇಶಗಳನ್ನು ಹಾಕಿದ್ದಾರೆ. ಜತೆಗೆ ಹೊಸ ರೈಲನ್ನು ಬಿಡಲೂ ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.