ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕಾರಿಣಿಯಲ್ಲಿ ರೈತರ ಸಮಸ್ಯೆಗಳ ಚರ್ಚೆ

ಧಾರವಾಡ ವಿಭಾಗದ ಪದಾಧಿಕಾರಿಗಳ ಸಭೆ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿಕೆ
Last Updated 10 ಸೆಪ್ಟೆಂಬರ್ 2020, 16:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅನ್ನದಾತರ ಸಮಸ್ಯೆಗಳನ್ನು ಪಟ್ಟಿ ಮಾಡಿ, ಅವುಗಳ ಬಗ್ಗೆ ಮುಂದಿನ ತಿಂಗಳು ನಡೆಯುವ ಪಕ್ಷದ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರೈತ ಮೋರ್ಚಾದಿಂದ ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳ ಮೂಲಕ ರಾಜ್ಯದಲ್ಲಿ ಪ್ರವಾಸ ಮಾಡಲಾಗುತ್ತಿದೆ. ರೈತರು ಹಾಗೂ ಸರ್ಕಾರದ ನಡುವೆ ಮೋರ್ಚಾ ಸೇತುವೆಯಾಗಿ ಕೆಲಸ ಮಾಡಲಿದೆ’ ಎಂದರು.

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಧಾರವಾಡ ಜಿಲ್ಲೆಗೆ 2019ರಲ್ಲಿ ₹95.85 ಕೋಟಿ ಹಣ ಬಂದಿದೆ. ಈ ವರ್ಷ ಇದುವರೆಗೆ ₹20.69 ಕೋಟಿ ಬಿಡುಗಡೆಯಾಗಿದೆ. ಗೋವಿನ ಜೋಳವನ್ನು ನೇರವಾಗಿ ಕಾರ್ಖಾನೆಗಳೇ ಖರೀದಿಸಲು ವ್ಯವಸ್ಥೆ ಮಾಡುವ ಯೋಜನೆ ರೂಪಿಸಲಾಗುತ್ತಿದೆ’ ಎಂದರು.

ಕೊರತೆಯಿಲ್ಲ: ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವಕ್ಕಿಂತಲೂ ಶೇ 10ರಷ್ಟು ಹೆಚ್ಚು ಯೂರಿಯಾ ಗೊಬ್ಬರ ರಾಜ್ಯಕ್ಕೆ ಸಿಕ್ಕಿದೆ. ಆದ್ದರಿಂದ ಗೊಬ್ಬರದ ಅಭಾವವಿಲ್ಲ ಎಂದರು.

ಹಾಗಾದರೆ ರೈತರಿಗೆ ಏಕೆ ಗೊಬ್ಬರ ಸಿಗುತ್ತಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಕೋವಿಡ್‌ ಕಾರಣದಿಂದ ಸರಿಯಾದ ಸಮಯಕ್ಕೆ ರೈತರಿಗೆ ಗೊಬ್ಬರ ತಲುಪಿಸಲಾಗದ ಕಾರಣ ಸಮಸ್ಯೆಯಾಗಿದೆ. ಯೂರಿಯಾ ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಕೋವಿಡ್‌ನಿಂದಾಗಿ ದೇಶದ ಬಹುತೇಕ ಚಟುವಟಿಕೆಗಳು ಸ್ಥಗಿತವಾಗಿದ್ದ ಸಮಯದಲ್ಲಿಯೂ ರೈತರು ತಮ್ಮ ಕೆಲಸ ಬಿಟ್ಟಿಲ್ಲ. ಈ ಬಾರಿ ಶೇ 7ರಷ್ಟು ಆಹಾರ ಉತ್ಪಾದನೆ ಹೆಚ್ಚಾಗಿದೆ. ನರೇಗಾ ಸೇರಿದಂತೆ ವಿವಿಧ ಯೋಜನೆಗಳಡಿ ತೋಟಗಾರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವವರ ಸಂಖ್ಯೆ ಇಮ್ಮಡಿಗೊಂಡಿದೆ’ ಎಂದರು.

ಧಾರವಾಡ–ಬೆಳಗಾವಿ ನೇರ ಹೊಸ ರೈಲು ಮಾರ್ಗಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ‘ಸಂಪರ್ಕ ಸುಲಭಗೊಳಿಸಲು ಈ ರೈಲು ಮಾರ್ಗ ಅನಿವಾರ್ಯ. ಇಲ್ಲವಾದರೆ, ಬೆಳಗಾವಿಯಿಂದ–ಧಾರವಾಡಕ್ಕೆ ಬರಲು ಮೂರ್ನಾಲ್ಕು ಗಂಟೆ ಕಾಯಬೇಕಾಗುತ್ತದೆ. ಈ ಕಾಮಗಾರಿಯಿಂದ ರೈತರ ಫಲವತ್ತಾದ ಭೂಮಿ ಹಾಳಾಗುವ ಅಪಾಯವಿದ್ದರೆ ಹೆದ್ದಾರಿಯ ಸಮೀಪದ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್‌ ನಿರ್ಮಿಸಬಹುದು’ ಎಂದು ಅಭಿಪ್ರಾಯಪಟ್ಟರು.

ಮೂರು ಜಿಲ್ಲೆಗಳ ಸದಸ್ಯರ ಸಭೆ

ಹುಬ್ಬಳ್ಳಿಯ ಕೃಷ್ಣ ಕಲ್ಯಾಣ ಮಂಟಪದಲ್ಲಿ ಈರಣ್ಣ ಕಡಾಡಿ ಅವರು ಧಾರವಾಡ, ಗದಗ ಮತ್ತು ಹಾವೇರಿ ವಿಭಾಗದ ರೈತ ಮೋರ್ಚಾ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಪಕ್ಷ ಹಾಗೂ ರೈತರ ಸಂಘಟನೆಗೆ ಒತ್ತು ಕೊಡುವಂತೆ ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ, ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಗುರಿಕಾರ, ಪ್ರಮುಖರಾದ ಎಸ್‌. ಶಿವಪ್ರಸಾದ, ಗುರು ಲಿಂಗೇಗೌಡ, ಲಿಂಗರಾಜ ಪಾಟೀಲ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳ, ಈಶ್ವರಗೌಡ ಪಾಟೀಲ, ರಾಜಣ್ಣ ಕುಲಕರ್ಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT