ಮಂಗಳವಾರ, ಜೂನ್ 2, 2020
27 °C
ದನಗಳ ದಾಳಿಯಿಂದ ಗಾಯಗೊಂಡಿದ್ದ ಹಸು; ಹೊಟ್ಟೆಯಲ್ಲೇ ಮೃತಪಟ್ಟಿದ್ದ ಕರು

ಹುಬ್ಬಳ್ಳಿ: ಗರ್ಭೀಣಿ ಹಸುವಿಗೆ ವೈದ್ಯರ ಜೀವದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಗರ್ಭೀಣಿ ಹಸುವಿಗೆ ಪಶು ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ, ಮರುಜನ್ಮ ನೀಡುವ ಮೂಲಕ ಮಾನವೀಯತೆ ಮೆರೆದಿದೆ.

ಉಣಕಲ್ ಕ್ರಾಸ್‌ ರಾಮಲಿಂಗೇಶ್ವರ ದೇವಸ್ಥಾನದ ಬಯಲಿನಲ್ಲಿ ಶುಕ್ರವಾರ ನಾಲ್ಕೈದು ದನಗಳ ಗುಂಪು ಗರ್ಭೀಣಿ ಹಸುವಿನ ಮೇಲೆ ದಾಳಿ ನಡೆಸಿದ್ದವು. ಕೋಡುಗಳಿಂದ ತಿವಿದಿದ್ದರಿಂದ ಹಸುವಿನ ಹೊಟ್ಟೆಯ ಭಾಗ ಕುಯ್ದು ಹೋಗಿತ್ತು. ನೋವಿನಿಂದಾಗಿ ಹಸು ಪ್ರಜ್ಞೆ ತಪ್ಪಿ ಬಯಲಲ್ಲೇ ಬಿದ್ದಿತ್ತು.

ಇದೇ ಮಾರ್ಗದಲ್ಲಿ ಹೊರಟ್ಟಿದ್ದ ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ಹಾಗೂ ಮಿತ್ರರು ಹಸುವನ್ನು ಗಮನಿಸಿದರು. ಬಳಿಕ, ಪಶುವೈದ್ಯರನ್ನು ಸ್ಥಳಕ್ಕೆ ಕರೆಯಿಸಿದರು. ವೈದ್ಯರಾದ ಡಾ. ಈರಣ್ಣ ಸುಂಕದ, ಡಾ. ಶರಣು ಬದಾಮಿ, ಡಾ. ಹೊನ್ನಿನಾಯ್ಕರ, ಸಿಬ್ಬಂದಿ ಕೆ.ಬಿ. ಹುಬ್ಬಳ್ಳಿ, ಮೌನೇಶ ಹಾಗೂ ಎಸ್.ಕೆ. ಗೌಡರ ಅವರ ತಂಡ ಸ್ಥಳಕ್ಕೆ ಬಂತು.

‘ವೈದ್ಯರು ಹಸುವನ್ನು ಪರಿಶೀಲಿಸಿದಾಗ, ಗರ್ಭದಲ್ಲಿದ್ದ ಕರು ಅಷ್ಟೊತ್ತಿಗಾಗಲೇ ಕೊನೆಯುಸಿರೆಳೆದಿತ್ತು. ಕೂಡಲೇ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಹಸು ಕೂಡ ಸಾಯಲಿದೆ ಎಂದ ವೈದ್ಯರು ಅಭಿಪ್ರಾಯಪಟ್ಟರು. ಅದಕ್ಕಾಗಿ, ಸ್ಥಳೀಯ ಪಶು ಆಸ್ಪತ್ರೆ ಅಥವಾ ಕೃಷಿ ವಿಶ್ವವಿದ್ಯಾಲಯಕ್ಕೆ ಹಸುವನ್ನು ಕರೆದೊಯ್ಯಬೇಕು ಎಂದರು. ಆದರೆ, ರಾತ್ರಿ ಹಸುವನ್ನು ಅಲ್ಲಿಗೆ ಕರೆದೊಯ್ಯಲು ಅಸಾಧ್ಯವಾಗಿದ್ದರಿಂದ ಸ್ಥಳದಲ್ಲೇ ಶಸ್ತ್ರಚಿಕಿತ್ಸೆ ನೆರವೇರಿಸುವಂತೆ ಮನವಿ ಮಾಡಿದೆವು’ ಎಂದು ರಾಜಣ್ಣ ಕೊರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಂತರ ವೈದ್ಯರ ತಂಡ ಅಲ್ಲೇ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿತು. ವಾಹನದ ಮೂಲಕ ಹಸುವನ್ನು ಸಿದ್ಧಪ್ಪಜ್ಜನ ಹೊಸಮಠದ ಆವರಣಕ್ಕೆ ತಂದು, ಅಗತ್ಯ ವ್ಯವಸ್ಥೆ ಮಾಡಿದೆವು. ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯಲ್ಲೇ ಸತ್ತಿದ್ದ ಕರುವನ್ನು ಹೊರತೆಗೆದರು. ಗಾಯಗೊಂಡಿದ್ದ ಜಾಗಕ್ಕೆ ಹೊಲಿಗೆ ಹಾಕಿ ಔಷಧ ನೀಡಿದ ಬಳಿಕ, ಹಸು ಚೇತರಿಸಿಕೊಂಡಿತು. ಸದ್ಯ ಹಸುವನ್ನು ಮಠದ ಆವರಣದಲ್ಲೇ ಇದ್ದು, ಸ್ಥಳೀಯರೇ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.