ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಬರ: ನೀರಿನ ಸಮಸ್ಯೆ ಉಲ್ಬಣ ಆತಂಕ

Published 18 ಫೆಬ್ರುವರಿ 2024, 4:09 IST
Last Updated 18 ಫೆಬ್ರುವರಿ 2024, 4:09 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚತೊಡಗಿದೆ. ಮುಂದಿನ ದಿನಗಳಲ್ಲಿ ಇದು ತಾರರಕ್ಕೆ ಹೋಗುವ ಸಾಧ್ಯತೆ ಇದೆ. ಇದರ ನಿವಾರಣೆ ಮತ್ತು ತುರ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರವು ಜಿಲ್ಲೆಯ ಬರಪೀಡಿತ ಪ್ರತಿ ತಾಲ್ಲೂಕಿಗೆ ₹25 ಲಕ್ಷದಂತೆ 8 ತಾಲ್ಲೂಕುಗಳಿಗೆ ತಾತ್ಕಾಲಿಕವಾಗಿ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಧಾರವಾಡ, ಅಳ್ನಾವರ, ಹುಬ್ಬಳ್ಳಿ ಗ್ರಾಮೀಣ, ಹುಬ್ಬಳ್ಳಿ ಶಹರ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಮತ್ತು ಕಲಘಟಗಿ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳಬಹುದಾದ ಒಟ್ಟು 139 ಗ್ರಾಮಗಳನ್ನು ಪ್ರಸ್ತುತ ಗುರುತಿಸಿದೆ.

ಧಾರವಾಡ ತಾಲ್ಲೂಕಿನಲ್ಲಿ ಪ್ರಸ್ತುತ 17 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ ಸಂಭವನೀಯ ಗ್ರಾಮಗಳು ಎಂದು ಗುರುತಿಸಲಾಗಿದೆ. ಹುಬ್ಬಳ್ಳಿ ತಾಲ್ಲೂಕು ವ್ಯಾಪ್ತಿಯ 16 ಗ್ರಾಮಗಳ ಪೈಕಿ ಉಮಚಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಕುಂದುಗೋಳದಲ್ಲಿ 15 ಗ್ರಾಮಗಳು, ಕಲಘಟಗಿ–54, ನವಲಗುಂದ–16,  ಅಣ್ಣಿಗೇರಿ–12 ಮತ್ತು ಅಳ್ನಾವರ ತಾಲ್ಲೂಕಿನಲ್ಲಿ 9 ಗ್ರಾಮಗಳು ಸೇರಿ ಒಟ್ಟು 139 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಬಹುದಾದ ಗ್ರಾಮಗಳೆಂದು ಗುರುತಿಸಲಾಗಿದೆ. 

ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಎಚ್ಚರಿಕೆ

‘ಕುಂದಗೋಳ ತಾಲ್ಲೂಕಿನ ಶಿರೂರು, ಬೆಳ್ಳಿಗಟ್ಟಿ, ಸಂಶಿ, ಕೊಡ್ಲಿವಾಡ, ಬೆನಕನಹಳ್ಳಿ ಸೇರಿ 8 ರಿಂದ 10 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಟ್ಯಾಂಕ್‌ಗಳ ಮೂಲಕ ನೀರು ಪೂರೈಸಲು ಅಧಿಕಾರಿಗಳಿಗೆ ಕೋರಿದರೆ, ಇಂದಿಗೂ ಸ್ಪಂದಿಸುತ್ತಿಲ್ಲ. ಶಿರೂರು ಗ್ರಾಮದಲ್ಲಿ ಹಾಳಾಗಿದ್ದು, ಮೂರು ಕೊಳವೆಬಾವಿಗಳನ್ನು ದುರಸ್ತಿ ಮಾಡಿ ತಾತ್ಕಾಲಿಕವಾಗಿ ನೀರು ಪೂರೈಸಲಾಗುತ್ತಿದೆ. ಉಳಿದ ಹಳ್ಳಿಗಳಲ್ಲಿ ಇಂದಿಗೂ ಸಮಸ್ಯೆ ಇದೆ. ವಾರದೊಳಗೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಖಾಲಿ ಕೊಡಗಳ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ರತ್ನ ಭಾರತ ರೈತ ಸಮಾಜದ ಮುಖಂಡ, ಕುಂದಗೋಳದ ಹೇಮನಗೌಡ ಬ.ಬಸನಗೌಡ ತಿಳಿಸಿದರು.

‘ಕುಂದಗೋಳ ತಾಲ್ಲೂಕಿನ ಕೊಡ್ಲಿವಾಡ ಗ್ರಾಮದಲ್ಲಿ ನಿತ್ಯ 50 ಸಾವಿರ ಲೀಟರ್‌ ನೀರನ್ನು ಟ್ಯಾಂಕ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಸಹಜವಾಗಿ ಕೊಳವೆಬಾವಿಗಳ ಅಂತರ್ಜಲ ಮಟ್ಟ ಕುಸಿದಿದೆ. ತಾಲ್ಲೂಕಿನಲ್ಲಿ ಹೆಚ್ಚು ನೀರು ಬರುವ 43 ಕೊಳವೆಬಾವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ನೀರಿನ ಸಮಸ್ಯೆ ಉಂಟಾದಲ್ಲಿ ಆ ಕೊಳವೆಬಾವಿಗಳ ಮೂಲಕ ನೀರು ಪಡೆದು ಜನರಿಗೆ ಪೂರೈಸುವ ಚಿಂತನೆಯಿದೆ’ ಎಂದು ಕುಂದಗೋಳ ತಾಲ್ಲೂಕು ಪಂಚಾಯಿತಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಪಾಟೀಲ ತಿಳಿಸಿದರು.

ಕುಡಿಯುವ ನೀರಿನ ಸಮಸ್ಯೆ ತೀವ್ರ

‘ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟೆ, ಸಂಗಮೇಶ್ವರ, ಸುಳಕಟ್ಟಿ, ಆಲದಕಟ್ಟಿ ಸೇರಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇಲ್ಲಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಅಲ್ಪಸ್ವಲ್ಪ ಮಾತ್ರ ನೀರು ಬರುತ್ತಿದೆ. ಜನರು ಈಗಾಗಲೇ ನೀರಿಗಾಗಿ ಪರದಾಡುವಂತಾಗಿದೆ’ ಎನ್ನುತ್ತಾರೆ ರೈತ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರುಶುರಾಮ ಎತ್ತಿನಗುಡ್ಡ ತಿಳಿಸಿದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡರೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪಡೆದು ಪೊರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಉಮಚಗಿ ಗ್ರಾಮದಲ್ಲಿ ಮಾತ್ರ ನೀರಿನ ಸಮಸ್ಯೆ ಉಂಟಾಗಿದ್ದು, ಅಲ್ಲಿ 3 ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರೇಣುಕಾರಾಧ್ಯ ಸೊಪ್ಪಿನಮಠ ವಿವರಿಸಿದರು. 

ಕೆರೆ ನೀರು ಖಾಲಿ ಮಾಡಿದ ಗ್ರಾಮಸ್ಥರು: ನೀರಿಗೆ ಪರದಾಟ

‘ಜಿಲ್ಲೆಯಲ್ಲೇ ಹುಬ್ಬಳ್ಳಿ ಗ್ರಾಮೀಣ ತಾಲ್ಲೂಕಿನ ಉಮಚಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು ಉಲ್ಬಣಗೊಂಡಿದೆ. ಗ್ರಾಮದಲ್ಲಿ ಅಂದಾಜು 2500 ಜನಸಂಖ್ಯೆ ಇದೆ. ಗ್ರಾಮಕ್ಕೆ ನಿತ್ಯ ಮೂರು ಟ್ಯಾಂಕರ್‌ಗಳ ಮೂಲಕ 24 ಸಾವಿರ ಲೀಟರ್‌ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ‘ ಎಂದು ಹುಬ್ಬಳ್ಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಉಮಚಗಿ ಗ್ರಾಮದಲ್ಲಿ ಮಳೆಗಾಲದ ವೇಳೆ ಜನ– ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಕೆರೆ ನಿರ್ಮಿಸಲಾಗಿದೆ. ಇದರಲ್ಲಿ 2 ವರ್ಷಗಳಿಗೆ ಆಗುವಷ್ಟು ನೀರು ಸಂಗ್ರಹವಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಗ್ರಾಮದ ವ್ಯಕ್ತಿಯೊಬ್ಬರು ಕೆರೆಯಲ್ಲಿ ಬಿದ್ದು ಮೃತಪಟ್ಟರು ಎಂಬ ಕಾರಣಕ್ಕೆ ಗ್ರಾಮದ ಜನರು ಸೇರಿ ಕೆರೆಯಲ್ಲಿದ್ದ ಎಲ್ಲಾ ನೀರನ್ನು ಮೋಟರ್‌ ಪೈಪ್‌ ಮೂಲಕ ಹೊರಗೆ ಹಾಕಿ ಇಡೀ ಕೆರೆಯನ್ನೇ ಖಾಲಿ ಮಾಡಿದರು. ಇದೀಗ ಇಡೀ ಗ್ರಾಮವು ನೀರಿನ ಸಮಸ್ಯೆಯಿದೆ. ನೀರನ್ನು ಹೊರಗೆ ಹಾಕಿ ತಪ್ಪು ಮಾಡಿದ್ದೇವೆ ಎಂಬುದು ಗ್ರಾಮಸ್ಥರ ಅರಿವಿಗೆ ಬಂದಿದೆ’ ಎಂದರು.

ಕುಡಿಯುವ ನೀರು ಬರ ಸಮಸ್ಯೆ ನಿಭಾಯಿಸಲು ಈಗಾಗಲೇ ನಮಲ್ಲಿ ₹5 ಕೋಟಿ ಅನುದಾನವಿದೆ. ರಾಜ್ಯ ಸರ್ಕಾರ ಕೂಡ ಹೆಚ್ಚುವರಿ ₹15 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಲಾಗುವುದು.
ದಿವ್ಯಪ್ರಭು ಜಿ.ಆರ್‌.ಜೆ., ಜಿಲ್ಲಾಧಿಕಾರಿ
ಬರ ಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ತುರ್ತು ಕ್ರಮಕೈಗೊಳ್ಳಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅನುದಾನ ನೀಡಿದೆ.ತಾಲ್ಲೂಕುವಾರು ಹಂಚಿಕೆ ಮಾಡಲಾಗುವುದು.
ರೇಣುಕಾರಾಧ್ಯ ಸೊಪ್ಪಿನ ಮಠ, ಇಇ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಜಿ.ಪಂ. 
ಹುಬ್ಬಳ್ಳಿ ನಗರ ತಾಲ್ಲೂಕಿನಲ್ಲಿ 21 ಗ್ರಾಮಗಳಿದ್ದು ಇವುಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿಲ್ಲ. ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ನಮ್ಮಲ್ಲಿ ಪ್ರಸ್ತುತ 6 ತಿಂಗಳಿಗೆ ಆಗುವಷ್ಟು ನೀರಿನ ಸಂಗ್ರಹವಿದೆ
ಕಲಗೌಡ್ರ ಪಾಟೀಲ, ಹುಬ್ಬಳ್ಳಿ ನಗರ ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT