ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲ: ಗ್ರಾಮೀಣ ಜನರಿಗೆ ನಿರಂತರ ‘ಖಾತ್ರಿ’

ನರೇಗಾ: ‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನ
ಎಲ್.ಮಂಜುನಾಥ
Published 25 ಮಾರ್ಚ್ 2024, 6:04 IST
Last Updated 25 ಮಾರ್ಚ್ 2024, 6:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬರ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಬದುಕು ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರವು ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ‘ವಲಸೆ ಯಾಕ್ರೀ, ನಿಮ್ಮೂರಲ್ಲೇ ಉದ್ಯೋಗ ಖಾತ್ರಿ’ ಅಭಿಯಾನ ಆರಂಭಿಸಿದೆ.

ಜಿಲ್ಲೆಯಲ್ಲಿ ಈ ಅಭಿಯಾನದಡಿ ವೈಯಕ್ತಿಕ ಮತ್ತು ಗುಂಪು ಕಾಮಗಾರಿಗಳು ಆರಂಭವಾಗಿದ್ದು, ಪ್ರಮುಖವಾಗಿ ನೈಸರ್ಗಿಕ ಸಂಪನ್ಮೂಲ ವೃದ್ಧಿಸುವಲ್ಲಿ ಕೆರೆ, ನಾಲೆ ಹೂಳು ತೆಗೆಯುವುದು, ಬದು, ಚೆಕ್‌ ಡ್ಯಾಂ ಹಾಗೂ ಕಾಲುವೆ ನಿರ್ಮಾಣ, ಕೆರೆ ಅಂಚಿನಲ್ಲಿ ಅರಣ್ಯೀಕರಣ, ಬತ್ತಿದ ಕೊಳವೆ ಬಾವಿಗಳ ಸುತ್ತ ಮಳೆ ನೀರು ಮರುಪೂರಣ ಘಟಕ ನಿರ್ಮಾಣ, ಗಿಡಗಳನ್ನು ನೆಡಲು ಗುಂಡಿಗಳನ್ನು ತೋಡುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ.

‘ಕೂಲಿ ಆಧಾರಿತ ಕಾಮಗಾರಿಗಳನ್ನು ಸೃಜಿಸಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ಕೆಲಸ ನೀಡುವುದು ಅಭಿಯಾನದ ಉದ್ದೇಶ. ವಿಶೇಷ ಚೇತನರು, ಮಹಿಳೆಯರು, ಹಿರಿಯ ನಾಗರಿಕರು, ದುರ್ಬಲ ವರ್ಗದವರಿಗೆ ಆದ್ಯತೆ ಮೇರೆಗೆ ಉದ್ಯೋಗ ಚೀಟಿಯೊಂದಿಗೆ ಕೆಲಸ ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣವನ್ನು ತಗ್ಗಿಸುವ ಉದ್ದೇಶ ಹೊಂದಲಾಗಿದೆ. ಈ ಅಭಿಯಾನವು ಮಾರ್ಚ್‌ 15ರಿಂದ ಆರಂಭವಾಗಿದ್ದು, ಮೇ ಅಂತ್ಯದವರೆಗೆ ನಡೆಯಲಿದೆ’ ಎಂದು ಜಿಲ್ಲಾ ಪಂಚಾಯಿತಿ ಕಚೇರಿಯ ಉಪ ಕಾರ್ಯದರ್ಶಿ ವಿಜಯಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನೈಸರ್ಗಿಕ ಸಂಪನ್ಮೂಲ ವೃದ್ಧಿಗೆ ಪೂರಕವಾದಂತಹ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದ್ದು, ಅದರಂತೆಯೇ ಜಿಲ್ಲೆಯ 146 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 30,626 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಈಗಾಗಲೇ 4,697 ಕಾಮಗಾರಿಗಳು ಮುಗಿದಿದ್ದು, ಉಳಿದಂತೆ 25,929 ಕಾಮಗಾರಿಗಳು ಎಲ್ಲಾ ಗ್ರಾಮ ‍ಪಂಚಾಯಿತಿಗಳಲ್ಲಿ ನಡೆಯುತ್ತಿವೆ’ ಎಂದು ಅವರು ವಿವರಿಸಿದರು.

‘ಜಿಲೆಯಲ್ಲಿ 26ಲಕ್ಷ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿತ್ತು. ಇದರಲ್ಲಿ ಈಗಾಗಲೇ 23 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಶೇ 88 ಗುರಿ ಸಾಧಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

₹71.15 ಕೋಟಿ ಪಾವತಿ:  ಕಳೆದ ಏಪ್ರಿಲ್‌ನಿಂದ ನರೇಗಾ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ ಪ್ರಸ್ತುತ 1,69,654 ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಎಲ್ಲಾ ಫಲಾನುಭವಿಗಳಿಗೆ ಏಪ್ರಿಲ್‌ 23ರಿಂದ ಮಾರ್ಚ್‌ 20ರ ತನಕ ಒಟ್ಟು ₹71.15 ಕೋಟಿ ಕೂಲಿಯನ್ನು ಅವರ ಬ್ಯಾಂಕ್‌ ಖಾತೆಗಳಿಗೆ ಪಾವತಿ ಮಾಡಲಾಗಿದೆ. ಇನ್ನೂ ₹4.96 ಕೋಟಿ ಬಾಕಿ ಕೂಲಿ ಪಾವತಿ ಮಾಡಬೇಕಿದೆ’ ಎಂದು ಹೇಳುತ್ತಾರೆ ಅವರು. 

ನೈಸರ್ಗಿಕ ಸಂಪನ್ಮೂಲ ವೃದ್ಧಿಸುವ ಕಾಮಗಾರಿಗೆ ಆದ್ಯತೆ ಮೇ ಅಂತ್ಯದವರೆಗೆ ನಡೆಯುವ ಅಭಿಯಾನ ವಲಸೆ ಪ್ರಮಾಣ ತಗ್ಗಿಸಲು ಆದ್ಯತೆ
ಜಿಲ್ಲೆಯಲ್ಲಿ ನಿಯಮದನ್ವಯ ‘ನರೇಗಾ’ ಯೋಜನೆಯ ಕಾಮಗಾರಿಗಳು ನಡೆಯುತ್ತಿದ್ದು ಯೋಜನೆಗೆ ಸಂಬಂಧಿಸಿದ ಬಾಕಿ ಉಳಿದ ಎಲ್ಲಾ ಅನುದಾನವು ವಾರದೊಳಗೆ ಪಾವತಿಯಾಗಲಿದೆ.
ಸ್ವರೂಪ ಟಿ.ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯಿತಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT