ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಸೋಂಕಿತರಿಗೆ ‘ಇ– ಸಂಜೀವಿನಿ’ ನೆರವು

ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ದೂರ ಸಮಾಲೋಚನೆ ಸೌಲಭ್ಯ
Last Updated 17 ಜನವರಿ 2022, 16:19 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್–19 ಸೋಂಕಿತರು ತಮ್ಮ ಮನೆ ಹಾಗೂ ಕ್ವಾರಂಟೈನ್‌ನಲ್ಲಿ ಇರುವವರಿಗೆ ಅನುಕೂಲವಾಗುವಂತೆ ಇ–ಸಂಜೀವಿನಿ ಹೊರರೋಗಿ ಚಿಕಿತ್ಸೆ ಮೂಲಕ ದೂರಸಮಾಲೋಚನೆ ಸೌಲಭ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಆರಂಭಿಸಿದೆ.

ಗೂಗಲ್‌ ಪ್ಲೇ ಅಥವಾ ಆ್ಯಪಲ್‌ ಆ್ಯಪ್ ಸ್ಟೋರ್‌ನಿಂದ ಇ–ಸಂಜೀವಿನಿ ಒಪಿಡಿ ಅಪ್ಲಿಕೇಷನ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ನೋಂದಾಯಿಸಿಕೊಂಡು, ಟೋಕನ್ ಪಡೆಯಬೇಕು. ಬರುವ ಒಟಿಪಿ ಬಳಸಿಕೊಂಡು ಸೋಂಕಿತರ ಮೊಬೈಲ್ ಸಂಖ್ಯೆ ಪರಿಶೀಲಿಸಬೇಕು. ಸೋಂಕಿತರ ನೋಂದಣಿ ಅರ್ಜಿ ಭರ್ತಿ ಮಾಡಿ, ಆರೋಗ್ಯ ಸಂಬಂಧಿತ ದಾಖಲೆಗಳಿದ್ದಲ್ಲಿ ಅಪ್‌ಲೋಡ್ ಮಾಡಬಹುದು.

ರೋಗಿಯ ಗುರುತಿನೊಂದಿಗೆ ಅಪ್ಲಿಕೇಷನ್‌ಗೆ ಲಾಗಿನ್ ಆದ ನಂತರ ಅಲ್ಲಿರುವ ವರ್ಚ್ಯುಯಲ್ ಕರೆ ಬಟನ್ ಒತ್ತಿದರೆ ಸೌಲಭ್ಯ ಸಕ್ರಿಯಗೊಳ್ಳಲಿದೆ. ಆಗ ಸೋಂಕಿತರು ವಿಡಿಯೊ ಕರೆ ಪ್ರಾರಂಭಿಸಬಹುದು. ಇದರಲ್ಲಿ ವೈದ್ಯರಿಂದ ಅಗತ್ಯ ಮಾಹಿತಿ, ಇ–ಪ್ರಿಸ್ಕ್ರಿಪ್ಶನ್ ಪಡೆಯಬಹುದು. ಇದನ್ನು ಡೌನ್‌ಲೋಡ್ ಮಾಡಿ ಔಷಧ ಖರೀದಿಸಬಹುದು. ವಿಡಿಯೊ ಸಮಾಲೋಚನೆ, ಚಾಟ್ ಮಾಡಿ ಆರೋಗ್ಯ ಕುರಿತ ಆಪ್ತಸಮಾಲೋಚನೆ ನಡೆಸಲು ಸಾಧ್ಯ.

ಇ–ಸಂಜೀವಿನಿ ಕುರಿತು ಸಹಾಯವಾಣಿ+91-11-23978046, ಟೋಲ್ ಫ್ರೀ ಸಂಖ್ಯೆ: 1075, ಸಹಾಯವಾಣಿ ಇ-ಮೇಲ್: ncov2019@gov.in, ವೆಬ್‍ಸೈಟ್: esanjeevaniopd.in ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಕೋವಿಡ್ ವಾರ್‌ ರೂಂ: ಕೊರೊನಾ 3ನೇ ಅಲೆಯನ್ನು ನಿಯಂತ್ರಿಸಿ, ಜಿಲ್ಲೆಯಲ್ಲಿನ ಸೋಂಕಿತರಿಗೆ ಅಗತ್ಯ ಮಾಹಿತಿ ನೀಡಿ ಸಕಾಲಕ್ಕೆ ಆರೋಗ್ಯ ಚಿಕಿತ್ಸೆ ನೆರವು ನೀಡಲು ಜಿಲ್ಲಾಡಳಿತವು ಕೋವಿಡ್ ವಾರ್‌ ರೂಂ ಮತ್ತು ಸಹಾಯವಾಣಿಯನ್ನು ಆರಂಭಿಸಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ತಿಳಿಸಿದ್ದಾರೆ.

‘ಕೋವಿಡ್ ದೃಢಪಟ್ಟ ಸೋಂಕಿತರಿಗೆ ಅಗತ್ಯ ಮಾಹಿತಿ ಇಲ್ಲಿ ಸಿಗಲಿದೆ. ಆಸ್ಪತ್ರೆಗೆ ದಾಖಲಾಗಲು ಬಯಸಿದರೆ ಕೋವಿಡ್ ವಾರ್ ರೂಂ ಸಿಬ್ಬಂದಿ ಅಗತ್ಯ ಮಾಹಿತಿ ನೀಡಿ ನೆರವಾಗಲಿದ್ದಾರೆ. ಹುಬ್ಬಳ್ಳಿ ದೇಶಪಾಂಡೆ ಪ್ರತಿಷ್ಠಾನದಲ್ಲಿ ಆರಂಭಿಸಿರುವ ಸಹಾಯವಾಣಿ ದಿನದ 24 ಗಂಟೆ ಕಾರ್ಯನಿರ್ವಹಿಸಲು ಮೂರು ಪಾಳಿಗಳಲ್ಲಿ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ’ ಎಂದರು.

‘ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಕಿಮ್ಸ್, ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು, ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ. ಜ. 16ರವರೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 3,235 ಹಾಸಿಗೆಗಳನ್ನು ಚಿಕಿತ್ಸೆಗಾಗಿ ಸಿದ್ಧಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್ ಸಂಬಂಧಿತ ಆರೋಗ್ಯ ಸಲಹೆ, ಯಾವುದೇ ತೊಂದರೆ, ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಲು ಜಿಲ್ಲಾಡಳಿತ ಸಹಾಯವಾಣಿಗಳನ್ನು ಆರಂಭಿಸಿದೆ. ಮಾಹಿತಿಗೆ ಸಹಾಯವಾಣಿ–1077,ಆರೋಗ್ಯ ಸಹಾಯವಾಣಿ-104 ಮತ್ತು ದೇಶಪಾಂಡೆ ಪ್ರತಿಷ್ಠಾನದ ಸಹಾಯವಾಣಿ ಮೊಬೈಲ್ ಸಂಖ್ಯೆ 80471 68111 ಸಂಪರ್ಕಿಸಬಹುದು’ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT