ಬುಧವಾರ, ಆಗಸ್ಟ್ 4, 2021
23 °C
ಲಾಕ್‌ಡೌನ್‌ ಅವಧಿಯಲ್ಲಿ ಪರ್ಯಾಯ ಉದ್ಯೋಗ ಒದಗಿಸಿದ ಕಾಯಿಪಲ್ಲೆ ವ್ಯಾಪಾರ

ಕಾಯಂ ವ್ಯಾಪಾರಿಗಳಿಗೆ ನಷ್ಟ; ಹೊಸಬರಿಗೆ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಲಾಕ್‌ಡೌನ್‌ ಅವಧಿಯಲ್ಲಿ ‘ವಾರದ ಸಂತೆ’ಯ ವಹಿವಾಟು ಕಾಯಂ ವ್ಯಾಪಾರಿಗಳಿಗೆ ಮುಳುವಾದರೆ, ಪರ್ಯಾಯ ವೃತ್ತಿಯನ್ನಾಗಿಸಿಕೊಂಡ ಹಲವರಿಗೆ ಆದಾಯದ ಮೂಲವಾಗಿ ಪರಿಣಮಿಸಿದೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ‘ವಾರದ ಸಂತೆ’ಗಳಿಗೆ ನಿರ್ಬಂಧ ಹೇರಿತು. ಇದರಿಂದ ಹಲವು ಕುಟುಂಬಗಳ ಆದಾಯಕ್ಕೂ ಪೆಟ್ಟು ಬಿದ್ದಿತು. ಎಲ್ಲ ವರ್ಗಗಳ ಆದಾಯ ಮೂಲದ ಮೇಲೂ ಗಂಭೀರ ಪರಿಣಾಮ ಬೀರಿದ್ದರಿಂದ ಹಲವು ಕುಟುಂಬಗಳು ತರಕಾರಿ ಮಾರಾಟವನ್ನೇ ಪರ್ಯಾಯ ವೃತ್ತಿಯನ್ನಾಗಿಸಿಕೊಂಡು ಲಾಭ ಕಂಡವು.

ಅವಳಿ ನಗರದಲ್ಲಿ ವಾರದ ಏಳೂ ದಿನ ಒಂದಿಲ್ಲೊಂದು ಬಡಾವಣೆಯಲ್ಲಿ ವಾರದ ಸಂತೆ ನಡೆಯುತ್ತಿತ್ತು. ನೂರಾರು ಸಣ್ಣ ರೈತರು, ಚಿಲ್ಲರೆ ವ್ಯಾಪಾರಿಗಳು ಕಾಯಿಪಲ್ಲೆ ಮಾರಾಟ ಮಾಡುತ್ತಿದ್ದರು. ನಿರ್ಬಂಧದ ಬಳಿಕ ಹಲವರು ತರಕಾರಿ ಮಾರಾಟವನ್ನೇ ನಿಲ್ಲಿಸಿದರೆ, ಬೆರಳೆಣಿಕೆ ಮಂದಿ ಮಾತ್ರ ರಸ್ತೆ ಬದಿ, ವಾಹನಗಳ ಮೂಲಕ ಮಾರಾಟಕ್ಕೆ ಇಳಿದರು. ಇನ್ನು ಹೊಸ ವ್ಯಾಪಾರಿಗಳ ಸಂಖ್ಯೆ ಹೆಚ್ಚಾದ ಪರಿಣಾಮ ಆದಾಯ ಕ್ಷೀಣಿಸಿತು ಎಂಬುದು ಕಾಯಂ ವ್ಯಾಪಾರಿಗಳ ಅಳಲು.

ಈ ಮೊದಲು ಎಪಿಎಂಸಿ ಮಾರುಕಟ್ಟೆಯಿಂದ ನಿತ್ಯ ₹5–10 ಸಾವಿರ ಮೌಲ್ಯದ ತರಕಾರಿ, ಹಣ್ಣು ಹಾಗೂ ಸೊಪ್ಪು ತಂದು ಮಾರುತ್ತಿದ್ದೆವು. ದಿನಾ ಒಂದಿಲ್ಲೊಂದು ಸಂತೆಗೆ ಹೋಗುತ್ತಿದ್ದರಿಂದ ವ್ಯಾಪಾರ ಉತ್ತಮವಾಗಿತ್ತು. ಆದರೆ, ಈಗ ವಾರದ ಸಂತೆ ನಡೆಯುತ್ತಿಲ್ಲ. ರಸ್ತೆ ಬದಿ ಮಾರಾಟವೂ ಹೆಚ್ಚಿಲ್ಲ. ಮಾರುಕಟ್ಟೆಯಿಂದ ತರುವ ಅರ್ಧದಷ್ಟು ತರಕಾರಿಯನ್ನೇ ಎರಡು ಮೂರು ದಿನ ಮಾರಬೇಕು. ಅದರಲ್ಲೂ ಸ್ವಲ್ಪಭಾಗ ಕೊಳೆತು ಹಾಳಾಗಲಿದೆ. ಕುಟುಂಬದ ನಿರ್ವಹಣೆಗಾಗಿ ತರಕಾರಿ ಮಾರಾಟ ಮುಂದುವರಿಸಿದ್ದೇವೆ ಎಂದು ವಿಶ್ವೇಶ್ವರನಗರದ ವ್ಯಾಪಾರಿ ಸಾವಿತ್ರಿಬಾಯಿ ವಿವರಿಸಿದರು.

ಲಾಕ್‌ಡೌನ್‌ ನಂತರ ಎಪಿಎಂಸಿ ಮಾರುಕಟ್ಟೆಗೆ ಶೇ 35 ರಷ್ಟು ಹೊಸ ವ್ಯಾಪಾರಿಗಳು ಬರಲಾರಂಭಿಸಿದ್ದಾರೆ. ಕಾಯಂ ವ್ಯಾಪಾರಿಗಳು ಖರೀದಿಸುತ್ತಿದ್ದ ಕಾಯಿಪಲ್ಲೆ ಪ್ರಮಾಣ ಕಡಿಮೆಯಾಗಿದೆ ಎಂದು ಸಗಟು ವ್ಯಾಪಾರಿ ಮುಸ್ತಾಫ ಪ್ರಜಾವಾಣಿಗೆ ತಿಳಿಸಿದರು.

ಈಗ ವಾರದ ಸಂತೆ ನಡೆಯುತ್ತಿದ್ದ ಪ್ರದೇಶಗಳ ಸಮೀಪವೇ ತರಕಾರಿ ಮಾರುತ್ತೇವೆ. ಖರೀದಿಗಾಗಿ ಜನಸಂದಣಿ ಹೆಚ್ಚಿದಂತೆ ಕೊರೊನಾ ಭೀತಿಯೂ ಇದೆ. ಜತೆಗೆ ಪೊಲೀಸರ ಭಯವೂ ಕಾಡುತ್ತಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು