ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಕೋವಿಡ್‌ಗೆ ಚಿಕಿತ್ಸೆ: ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಸೌಕರ್ಯ

ಆಸ್ಪತ್ರೆ ಮಾಲೀಕರೊಂದಿಗೆ ಸಭೆ: ಶೇ 50ರಷ್ಟು ಹಾಸಿಗೆ ಮೀಸಲಿಡಲು ಜಿಲ್ಲಾಧಿಕಾರಿ ಸೂಚನೆ
Last Updated 19 ಜುಲೈ 2020, 14:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸರ್ಕಾರದ ನಿರ್ದೇಶನದಂತೆ ಖಾಸಗಿ ಆಸ್ಪತ್ರೆಗಳು ಶೇಕಡಾ 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಬೇಕು. ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದೆ ಬರುವ ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ‘ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಿಮ್ಸ್ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಖಾಸಗಿ ಆಸ್ಪತ್ರೆಗಳೂ ಕೈ ಜೋಡಿಸಬೇಕಿದೆ’ ಎಂದರು.

‘ಜಿಲ್ಲೆಯಲ್ಲಿ ಇದುವರೆಗೆ ಅಂದಾಜು ಎರಡು ಸಾವಿರ ಕೋವಿಡ್ ಪ್ರಕರಣಗಳು ಧೃಡಪಟ್ಟಿವೆ. ಸೋಂಕಿನ ಲಕ್ಷಣಗಳು ಇಲ್ಲದ ರೋಗಿಗಳನ್ನು ಕೋವಿಡ್ ಕೇರ್ ಕೇಂದ್ರಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಇನ್‌ಫ್ಲೂಯೆಂಜಾ ಲೈಕ್‌ ಇಲ್‌ನೆಸ್‌ (ಐಎಲ್‌ಐ)ನಂತಹ ಲಕ್ಷಣ ಇರುವವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ’ ಎಂದು ಹೇಳಿದರು.

‘ಎಸ್‌ಡಿಎಂ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿಗೆ ಆ್ಯಂಟಿಜನ್ ಟೆಸ್ಟ್‌ಗಳನ್ನು ನೀಡಲಾಗಿದ್ದು, ಇದರಿಂದ ಬೇಗನೆ ಕೋವಿಡ್ ಪತ್ತೆ ಹಚ್ಚಬಹುದಾಗಿದೆ. ‌ಹಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ ಹಾಸಿಗೆಗಳನ್ನು ನೀಡಲು ಈಗ ಮುಂದೆ ಬಂದಿವೆ. ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಮುಂದೆ ಬರುವ ಆಸ್ಪತ್ರೆಗಳಿಗೆ, ಈಗಾಗಲೇ ಗುಣಮುಖರಾಗಿರುವ ರೋಗಿಗಳ ಮಾಹಿತಿಯನ್ನು ನೀಡಲಾಗುವುದು’ ಎಂದು ತಿಳಿಸಿದರು.

‘ಗರ್ಭಿಣಿಯರ ಕೋವಿಡ್ ತಪಾಸಣೆ ನಡೆಸಲು ಖಾಸಗಿ ಆಸ್ಪತ್ರೆಗಳು ಹಣ ಪಡೆಯಬಾರದು. ಅಲ್ಲದೆ, ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದಲೇ ಆಹಾರ ಪೂರೈಕೆ ಮಾಡಲಾಗುವುದು. ಸ್ವಚ್ಛತಾ ಸಿಬ್ಬಂದಿ ಸೇರಿದಂತೆ, ನಿರ್ವಹಣೆಗಾಗಿ ಅಗತ್ಯ ಸಿಬ್ಬಂದಿಯನ್ನು ಒದಗಿಸಲಾಗುವುದು’ ಎಂದರು.

‘ಖಾಸಗಿ ಕ್ಯಾನ್ಸರ್ ಹಾಗೂ ಹೆರಿಗೆ ಆಸ್ಪತ್ರೆಗಳಲ್ಲಿ ಕೋವಿಡ್-19ಗೆ ಚಿಕಿತ್ಸೆ ನೀಡುವುದರಿಂದ ವಿನಾಯಿತಿ ನೀಡಬೇಕು’ ಎಂದು ಖಾಸಗಿ ವೈದ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಉಪವಿಭಾಧಿಕಾರಿ ಮಹಮದ್ ಜುಬೇರ, ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಐಎಂಎ ಹುಬ್ಬಳ್ಳಿ ಅಸೋಷನ್ ಅಧ್ಯಕ್ಷ ಡಾ. ಕ್ರಾಂತಿ ಕಿರಣ್, ಕಾರ್ಯದರ್ಶಿ ಡಾ. ಮಂಜುನಾಥ ನಾಯ್ಕರ್, ಕೆಪಿಎಂಇಎ ಅಧ್ಯಕ್ಷ ಡಾ. ವಿಜಯ ಗಾಡಗಿ, ವೈದ್ಯರಾದ ಡಾ. ನಾಲತವಾಡ ಮಠ, ಡಾ. ಬಿ.ಆರ್. ಪಾಟೀಲ ಹಾಗೂ ಐಎಂಎ ಸದಸ್ಯರು ಇದ್ದರು.

‘ದಿನಕ್ಕೆ 1,300 ಪರೀಕ್ಷೆ’

‘ಕಿಮ್ಸ್, ಡಿಮಾನ್ಸ್ ಹಾಗೂ ಎನ್ಎಂಆರ್ ಪ್ರಯೋಗಾಲಯಗಳಲ್ಲಿ ಆರ್‌ಟಿಪಿಸಿಆರ್ (ರ‍್ಯಾಪಿಡ್ ಟೆಸ್ಟ್‌ ಪಾಲಿಮರೈಸ್ಡ್‌ ಚೈನ್‌ ರಿಯಾಕ್ಷನ್‌) ತಂತ್ರಜ್ಞಾನ ಬಳಸಿ ದಿನಕ್ಕೆ 1,300 ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತಿದೆ’ ಎಂದು ನಿತೇಶ್ ಪಾಟೀಲ ಹೇಳಿದರು.

‘ಬೆಳಗಾವಿ, ಹಾವೇರಿ, ಗದಗ, ಕೊಪ್ಪಳ, ಬಿಜಾಪುರ, ಬಾಗಲಕೋಟೆ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ಮಾದರಿಗಳನ್ನು ಪರೀಕ್ಷೆಗಾಗಿ ಜಿಲ್ಲೆಗೆ ಕಳಿಸಿಕೊಡಲಾಗುತ್ತಿದೆ. ಇದರಿಂದಾಗಿ ವರದಿ ನೀಡುವುದು ಸ್ವಲ್ಪ ತಡವಾಗುತ್ತಿದೆ. 1,200 ಹಾಸಿಗೆಗಳ ಸಾಮರ್ಥ್ಯವುಳ್ಳ ಕಿಮ್ಸ್‌ನಲ್ಲಿ 250 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಬದಲಾಯಿಸಲಾಗಿದೆ. ಇನ್ನೂ 350 ಹಾಸಿಗೆಗಳನ್ನು ಕೋವಿಡ್ ರೋಗಿಗಳಿಗಾಗಿ ಮಾರ್ಪಡಿಸಲಾಗಿದ್ದು, ಒಟ್ಟು 600‌ ಹಾಸಿಗೆಗಳನ್ನು ಮೀಡಲಿಡಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT