ಶುಕ್ರವಾರ, ಮೇ 20, 2022
23 °C
ಮಾಲು ಸಮೇತ ಸಿಕ್ಕಿಬಿದ್ದ ಕಳ್ಳರು: ₹66,500 ಮೌಲ್ಯದ ನೋಟು ವಶ

ಖೋಟಾ ನೋಟು ಜಾಲ ಪತ್ತೆ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಖೋಟಾ ನೋಟು ಚಲಾವಣೆ ಜಾಲವನ್ನು ಪತ್ತೆ ಮಾಡಿರುವ ಕೇಶ್ವಾಪುರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ, ₹66,500 ಮೌಲ್ಯದ ಖೋಟಾ ನೋಟುಗಳು ಹಾಗೂ ವಿವಿಧ ಕಂಪನಿಗಳ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಹಳೇ ಹುಬ್ಬಳ್ಳಿಯ ಶ್ರೀನಿವಾಸ ವಾಸಪ್ಪ ತಟ್ಟಿ, ಸಲೀಂ ಇಮಾಮಸಾಬ ಮುಲ್ಲಾ, ಗೋಪಿನಾಥ ಜಗನ್ನಾಥ ಹಬೀಬ ಹಾಗೂ ಮೌಲಾಸಾಬ ಮುಕ್ತಂಸಾಬಾ ಗುಡಿಹಾಳ ಬಂಧಿತರು. ಆರೋಪಿಗಳು ಕೇಶ್ವಾಪುರದಲ್ಲಿ ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ, ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು.

ಕಾರ್ಯಾಚರಣೆ ವೇಳೆ ಆರೋಪಿಗಳ ಬಳಿ ಇದ್ದ ₹500 ಮುಖಬೆಲೆಯ 93 ಖೋಟಾ ನೋಟು ಮತ್ತು 10 ಅಸಲಿ ನೋಟು, ₹100 ಮುಖಬೆಲೆಯ 200 ಖೋಟಾ ನೋಟು ಹಾಗೂ ₹100 ಮುಖಬೆಲೆಯ 2 ಅಸಲಿ ನೋಟುಗಳನ್ನು ಜಪ್ತಿ ಮಾಡಲಾಯಿತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಿರುವ ಇನ್‌ಸ್ಪೆಕ್ಟರ್ ಸುರೇಶ ಕುಂಬಾರ ನೇತೃತ್ವದ ತಂಡಕ್ಕೆ ಪೊಲೀಸ್ ಕಮಿಷನರ್ ಲಾಬೂ ರಾಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರು ಅಡ್ಡಗಟ್ಟಿ ಸರಗಳ್ಳತನ

ಪೆಟ್ರೋಲ್ ಬಂಕ್ ವಿಳಾಸ ಕೇಳುವ ನೆಪದಲ್ಲಿ ನಗರದ ಹೊರವಲಯದ ಬಳಿ ಶುಕ್ರವಾರ ರಾತ್ರಿ ರಾಜು ಕುಲಕರ್ಣಿ ಎಂಬುವರ ಕಾರು ತಡೆದ ಮೂವರು ಕಳ್ಳರು, ಚಾಕುವಿನಿಂದ ಬೆದರಿಸಿ 7 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ಕುಲಕರ್ಣಿ ಅವರ ಕಾರನ್ನು ಸ್ಕೂಟರ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಕಳ್ಳರು ರಿಲಾ‌ಯನ್ಸ್ ಫ್ರೆಶ್‌ ಶಾಪ್ ಬಳಿ ರಾಜು ಅವರನ್ನು ವಿಳಾಸ ಕೇಳುವ ನೆಪದಲ್ಲಿ ತಡೆದು, ಕೃತ್ಯ ಎಸಗಿದ್ದಾರೆ. ಹಿಂದಿಯಲ್ಲಿ ಮಾತನಾಡುತ್ತಿದ್ದ ಕಳ್ಳರು, ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಸಬಾ ಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸುಲಿಗೆಕೋರರ ಬಂಧನ

ವ್ಯಕ್ತಿಯೊಬ್ಬರನ್ನು ಬೆದರಿಸಿ ಮೊಬೈಲ್ ಸುಲಿಗೆ ಮಾಡಿದ್ದ ನಾಲ್ವರನ್ನು ಕಮರಿಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಳೇ ಹುಬ್ಬಳ್ಳಿಯ ಫಹೀಮ್ ಸೌದಾಗರ, ಫಯಾಜ್ ಸೌದಾಗರ, ಅಬು ಸುಫೀಯಾನ್ ಮನಿಯಾರ ಹಾಗೂ ಶಾನವಾಜ ನೀರಲಗಿ ಬಂಧಿತರು. ಆರೋಪಿಗಳಿಂದ ಮೊಬೈಲ್ ಜಪ್ತಿ ಮಾಡಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಲ್ದಾಣ ಬಳಿ ಶವ ಪತ್ತೆ

ನಗರದ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಕಾಂಪೌಂಡ್ ಬಳಿಯ ಮರವೊಂದರಲ್ಲಿ, ಅಪರಿಚಿತ ವ್ಯಕ್ತಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದೆ‌. ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ವ್ಯಕ್ತಿಯ ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೋಕುಲ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಟೈಯರ್, ಟ್ಯೂಬ್ ಕಳ್ಳರ ಬಂಧನ

ಟೈಯರ್, ಟ್ಯೂಬ್ ಹಾಗೂ ಇತರ ವಸ್ತುಗಳನ್ನು ಕದ್ದೊಯ್ದಿದ್ದ ಇಬ್ಬರನ್ನು ಗೋಕುಲ ರಸ್ತೆ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಾರುತಿ ನಗರದ ಹಳ್ಳೆಪ್ಪ ಪೂಜಾರ ಮತ್ತು ಗದಗ ಜಿಲ್ಲೆಯ ನರಸಾಪುರದ ವಸೀಂ ಸೈದಾಪುರ ಬಂಧಿತರಾಗಿದ್ದು, ಮತ್ತೊಬ್ಬ ತಲೆ ಮರೆಸಿಕೊಂಡಿದ್ದಾನೆ. ಇಬ್ಬರಿಂದ ₹2.10 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳು ಫೆ. 4ರಂದು ಗೋಕುಲ ರಸ್ತೆಯ ಶಿವಶಕ್ತಿ ಎಂಟರ್‌ಪ್ರೈಸಸ್ ಗೋಡೌನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಟೈಯರ್, ಟ್ಯೂಬ್ ಹಾಗೂ ಇತರ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ತಿಳಿಸಿದರು.

ಕಾರು ಕಳ್ಳತನ

ಇಲ್ಲಿನ ರೇಣುಕಾನಗರದ ವಿಕ್ರಮ ವಾಲಿ ಎಂಬುವರ ಮನೆಗೆ ರಾತ್ರಿ ನುಗ್ಗಿರುವ ಕಳ್ಳರು, ₹10 ಸಾವಿರ ನಗದು ಹಾಗೂ ಮನೆ ಬಳಿ ನಿಲ್ಲಿಸಿದ್ದ ₹3.60 ಲಕ್ಷ ಮೌಲ್ಯದ ಸ್ವಿಫ್ಟ್ ಡಿಸೈರ್ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ.

ಕಬ್ಬಿಣದ ಸಲಾಕೆಯಿಂದ ಬಾಗಿಲನ್ನು ಮೀಟಿ ಒಳಗೆ ನುಗ್ಗಿರುವ ಕಳ್ಳರು, ಕೈಗೆ ಸಿಕ್ಕ ನಗದು ದೋಚಿಸಿದ್ದಾರೆ. ನಕಲಿ ಕೀ ಬಳಸಿ ಕಾರನ್ನು  ಕಳ್ಳತನ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಘಟನಾ ಸ್ಥಳದ ಸುತ್ತಮುತ್ತ ಇರುವ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಗೋಕುಲ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು