ಹುಬ್ಬಳ್ಳಿ: ‘ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಹಾಗೂ ಅವರ ಆರೋಗ್ಯ ಸುಧಾರಣೆಗೆ ಒತ್ತು ನೀಡಬೇಕು. ಮೊಟ್ಟೆ ಸೇವನೆಯನ್ನು ಮಕ್ಕಳ ಆಯ್ಕೆಗೆ ಬಿಡಬೇಕು...’
ಬಿಸಿಯೂಟದ ಯೋಜನೆಯಲ್ಲಿ ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರ ಡಿ. 1ರಿಂದ ಮೊಟ್ಟೆ ವಿತರಿಸುತ್ತಿರುವುದಕ್ಕೆ ಸಂಬಂಧಿಸಿದಂತೆ, ‘ಶಾಲಾ ಮಕ್ಕಳಿಗೆ ಮೊಟ್ಟೆ: ಅಡ್ಡಿ– ಆತಂಕ ಸರಿಯೇ’ ಕುರಿತು ‘ಪ್ರಜಾವಾಣಿ’ ಶುಕ್ರವಾರ ಆಯೋಜಿಸಿದ್ದ ಬಹುಮಾಧ್ಯಮ ಸಂವಾದದಲ್ಲಿ ಈ ಅಭಿಪ್ರಾಯ ಕೇಳಿಬಂತು.
‘ಮೊಟ್ಟೆಗೆ ವಿರೋಧವಿಲ್ಲ; ಶಾಲೆಯಲ್ಲಿ ಕೊಡಬೇಡಿ’
ಮೊಟ್ಟೆ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಶಾಲೆಯಲ್ಲಿ ಕೊಡುವುದಕ್ಕೆ ವಿರೋಧವಿದೆ. ಸರ್ಕಾರಿ ಅಥವಾ ಅನುದಾನಿತ ಶಾಲೆಗಳು ಸಾರ್ವಜನಿಕ ಸಂಸ್ಥೆಗಳು. ಇಲ್ಲಿ ಮಾಂಸಾಹಾರದಷ್ಟೇ ಸಸ್ಯಾಹಾರ ಪದ್ಧತಿ ಹೊಂದಿರುವವರು ಇದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಸಸ್ಯಾಹಾರ ಪದ್ಧತಿ ಹೆಚ್ಚು. ಲಿಂಗಾಯತ, ಬ್ರಾಹ್ಮಣ, ಜೈನ ಸೇರಿದಂತೆ ವಿವಿಧ ಧಾರ್ಮಿಕ ಹಿನ್ನೆಲೆಯ ವಿದ್ಯಾರ್ಥಿಗಳು ಶಾಲೆಗಳಲ್ಲಿ ಇದ್ದಾರೆ. ಮನೆಗಳಲ್ಲಿ ಯಾವುದೇ ಆಹಾರ ಸೇವಿಸಿದರೂ ಅದಕ್ಕೆ ಯಾರೂ ಅಭ್ಯಂತರ ಮಾಡಬಾರದು. ಅದು ಅವರ ವೈಯಕ್ತಿಕ ವಿಷಯ. ಆದರೆ, ಶಾಲೆಗಳಲ್ಲಿ ಮೊಟ್ಟೆ ಕೊಡುವುದರಿಂದ, ಮಕ್ಕಳಲ್ಲಿ ಒಂದು ರೀತಿಯ ಪಂಕ್ತಿಭೇದ ಶುರುವಾಗುತ್ತದೆ. ಸಸ್ಯಾಹಾರಿ ಮಕ್ಕಳೂ ಮೊಟ್ಟೆ ಸೇವಿಸಿದರೆ, ಅವರ ಕುಟುಂಬದ ಧಾರ್ಮಿಕ ಆಚರಣೆಗೆ ಧಕ್ಕೆಯಾಗುತ್ತದೆ.
–ಬಸವರಾಜ ಧನ್ನೂರ, ರಾಷ್ಟ್ರೀಯ ಅಧ್ಯಕ್ಷ, ರಾಷ್ಟ್ರೀಯ ಬಸವ ದಳ
‘ಪ್ರತಿಷ್ಠೆಗಾಗಿ ವಿರೋಧ ಸಲ್ಲ’
ಮೊಟ್ಟೆ ಮಾಂಸಾಹಾರ ವೆಂದು ಪರಿಗಣಿತವಾಗಿಲ್ಲ. ಅದು ಪೌಷ್ಟಿಕಾಂಶಯುಕ್ತ ಆಹಾರವಾಗಿದ್ದು, ಎಲ್ಲರೂ ಇಷ್ಟಪಡುತ್ತಿದ್ದಾರೆ. ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಯಾವುದೇ ವಿರೋಧ ಇಲ್ಲ. ಮಾಂಸಾಹಾರ ಸೇವಿಸುವವರನ್ನು ಕೀಳಾಗಿ, ಸಸ್ಯಾಹಾರಿಗಳನ್ನು ಮೇಲಾಗಿ ನೋಡುವ ಪರಿಪಾಠವಿದೆ. ಆದರೆ, ಮೊಟ್ಟೆ ತಿನ್ನುವವನು ಹಾಗೂ ತಿನ್ನದಿರುವವನೂ ನಮ್ಮವನೇ. ಜೊತೆ ಕುಳಿತ ಮಾತ್ರಕ್ಕೂ ಏನೂ ಆಗುವುದಿಲ್ಲ ಎಂಬ ಸಮಾನತೆಯನ್ನು ತರುವ ಕೆಲಸ ಈ ಮೂಲಕ ಶಾಲಾ ಹಂತದಿಂದಲೂ ಜಾರಿಗೆ ತರಬೇಕು. ಯಾವುದೇ ಸಂಘ–ಸಂಸ್ಥೆಗಳು ಪ್ರತಿಷ್ಠೆಗಾಗಿ ಮೊಟ್ಟೆ ವಿತರಣೆಯನ್ನು ವಿರೋಧಿಸುವುದು ಬೇಡ.
–ಈ. ಬಸವರಾಜು, ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಪರಿಷತ್ತು
‘ಪ್ರಜಾಸತ್ತೆಗೆ ಬೆಲೆ ಎಲ್ಲಿ?’
ಸಸ್ಯಾಹಾರಿಗಳಲ್ಲಿ ಒಂದು ವರ್ಗ ಬೆಳ್ಳುಳ್ಳಿ ತಿನ್ನುವುದು ಅಧಮ ಎಂದು ಭಾವಿಸುತ್ತದೆ. ಇಸ್ಕಾನ್ ಬಿಸಿಯೂಟದಲ್ಲಿ ಬೆಳ್ಳುಳ್ಳಿ ಬಳಸು ವುದಿಲ್ಲ. ನಾಳೆ ಬೆಳ್ಳುಳ್ಳಿ ಹಾಕದ ಅಡುಗೆ ತಿನ್ನುವುದು ಅಸಮಾನತೆ. ಅದನ್ನು ಬಲವಂತವಾಗಿ ತಿನ್ನಲು ಒತ್ತಾಯಿಸುತ್ತಾರೆ ಎಂದು ಯಾರಾದರೂ ಹೇಳಿದರೆ? ಮನೆಯ ಖಾಸಗಿ ನಂಬಿಕೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಒಂದು ವರ್ಗ ಹೇರುವುದು ಸರಿಯಲ್ಲ. ರಾಜ್ಯದಲ್ಲಿ ಶೇ 30ರಷ್ಟು ಸಸ್ಯಾಹಾರಿಗಳಿಲ್ಲ. ಇವರು ಆಹಾರ ಶತಮಾನದ ಆಹಾರ ಪದ್ಧತಿ ಎಂದು ಹೇಳುತ್ತೇವೆಯೇ? ವೈಯಕ್ತಿಕವಾದ ಧಾರ್ಮಿಕ ನಂಬಿಕೆಗಳು, ಭಾವನೆಗಳು ಅವೈಜ್ಞಾನಿಕ ವಾಗಿದ್ದರೆ ಅದನ್ನು ಹೋಗಲಾಡಿಸುವುದು ಶಿಕ್ಷಣದ ಮಹತ್ವದ ಉದ್ದೇಶ. ಅಲ್ಪಸಂಖ್ಯಾತರ ಶೇ 25ರಷ್ಟು ಮಂದಿ ಊಟ ಮಾಡುವ ಪದ್ಧತಿಗೆ ತೊಂದರೆಯಾಗುತ್ತದೆ ಎಂದರೆ, ಶೇ 75ರಷ್ಟು ಮಂದಿಯ ಪ್ರಜಾಸತ್ತೆಗೆ ಬೆಲೆ ಎಲ್ಲಿ?
–ಕೆ.ಪಿ. ಸುರೇಶ, ಲೇಖಕರು
‘ಆಹಾರದ ಲಾಭವೇ ಮುಖ್ಯ’
ಮೊಟ್ಟೆ ತಿನ್ನುವ ವಿಷಯ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದು ಬೇಸರದ ಸಂಗತಿ. ಸರ್ಕಾರ ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿದೆಯೋ ಇಲ್ಲವೋ ಗೊತ್ತಿಲ್ಲ. ಮೊಟ್ಟೆ ಸಸ್ಯಾಹಾರ, ಮಾಂಸಾಹಾರ ಏನೇ ಆಗಿರಲಿ. ಅದನ್ನು ತಿಂದಾಗ ಎಷ್ಟು ಲಾಭ ಇದೆ ಎನ್ನುವುದು ಪ್ರಮುಖಾಂಶ. ಎಲ್ಲದರಲ್ಲೂ ನಾವು ಸಮಾನತೆ ನೋಡುತ್ತೇವೆ. ಶಾಲೆಯಲ್ಲಿ ಮಗು ಧರಿಸುವ ಬಟ್ಟೆ, ಬ್ಯಾಗ್ ಎಲ್ಲರಲ್ಲೂ ಸಮಾನತೆ ನೋಡುತ್ತೇವೆ. ಮೊಟ್ಟೆಗೆ ಯಾಕೆ ನಾವು ಒಂದು ಸ್ಥಾನ ನೀಡುತ್ತೇವೆ? ಯಾರೂ ಸಹ ಬಲವಂತವಾಗಿ ಸಸ್ಯಾಹಾರಿಯಾಗಿ ಎಂದು ಹೇಳಿಲ್ಲ. ಮೊಟ್ಟೆಯಿಂದ ಪ್ರೊಟೀನ್ ಮಾತ್ರ ಸಿಗುತ್ತದೆ. ಆದರೆ, ಸಸ್ಯದಲ್ಲಿ ಎಲ್ಲವೂ ಸಿಗುತ್ತದೆ.
–ಡಾ. ಎಚ್.ಎಸ್. ಪ್ರೇಮಾ, ಪೌಷ್ಟಿಕಾಂಶ ತಜ್ಞೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.