ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ವಜ ಮಾರಾಟಕ್ಕೆ ಸಾರಿಗೆಯೇ ಸಮಸ್ಯೆ!

ಕೊರೊನಾದಿಂದ ಕಡಿಮೆಯಾದ ಬೇಡಿಕೆ: ಆತಂಕದ ನಡುವೆ ನೇಯ್ಗೆ
Last Updated 12 ಜುಲೈ 2020, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾದಿಂದ ಬಹುತೇಕರ ದೈನಂದಿನ ಬದುಕು ಹಳಿತಪ್ಪಿದೆ. ಇದಕ್ಕೆ ಬಾವುಟದ ಮಾರಾಟವೂ ಹೊರತಾಗಿಲ್ಲ. ಇಲ್ಲಿನ ಬೆಂಗೇರಿಯಲ್ಲಿರುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರ ಧ್ವಜಗಳನ್ನು ಸಿದ್ಧಪಡಿಸಲಾಗುತ್ತಿದೆ. ಸ್ವಾತಂತ್ರ್ಯ ದಿನದೊಳಗೆ ಧ್ವಜಗಳನ್ನು ಬೇಡಿಕೆ ಸಲ್ಲಿಸುವವರಿಗೆಕಳುಹಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಧ್ವಜಕ್ಕೆ ಬೇಕಾದ ಬಟ್ಟೆ ನೇಯ್ಗೆ ಮಾಡಲಾಗುತ್ತದೆ. ಅದರ ಶುದ್ಧತೆ, ಬಣ್ಣ ಪರಿಶೀಲಿಸಿ ಧ್ವಜ ತಯಾರಿಕೆಗೆ ಬಳಸಿಕೊಳ್ಳಲಾಗುತ್ತದೆ. ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಮಾತ್ರ ರಾಷ್ಟ್ರಧ್ವಜ ನಿರ್ಮಾಣಕ್ಕೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್‌)ಯಿಂದ ಮಾನ್ಯತೆ ಪಡೆದಿದೆ.

‘ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರಧ್ವಜ ಸರಬರಾಜು ಮಾಡಲಾಗುತ್ತದೆ. ಪ್ರತಿವರ್ಷ ಜೂನ್‌ ಅಂತ್ಯದ ವೇಳೆಗೆ ಪುಣೆ, ಮುಂಬೈ, ಚೆನ್ನೈ, ಕೊಲ್ಕತ್ತಾಗೆ ಪಾರ್ಸೆಲ್‌ ಕಳುಹಿಸಬೇಕಾಗಿತ್ತು. ಆದರೆ, ಈವರೆಗೂ ಪಾರ್ಸೆಲ್‌ ಕಳುಹಿಸಲು ಆಗುತ್ತಿಲ್ಲ. ಸಾರಿಗೆ ವ್ಯವಸ್ಥೆಯಲ್ಲಿನ ಏರುಪೇರಿನಿಂದ ತೊಂದರೆಯಾಗಿದೆ. ಪಾರ್ಸೆಲ್‌ ಕಳುಹಿಸಿದರೂ ತುಂಬಾ ತಡವಾಗಿ ಮುಟ್ಟುತ್ತಿವೆ’ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿ ವಿವಿಧ 9 ಅಳತೆಯ ಧ್ವಜಗಳನ್ನು ಸಿದ್ಧಪಡಿಸಲಾಗುತ್ತದೆ. ಧ್ವಜಕ್ಕೆ ಬೇಕಾದ ನೂಲು, ನೇಯ್ಗೆಯಿಂದ ಧ್ವಜ ಸಿದ್ಧವಾಗುವವರೆಗೆ 18 ಬಾರಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.

ಶಾಲೆಗಳಿಗೆ ರಜೆ:ಕೊರೊನಾ ಕಾರಣದಿಂದಾಗಿ ಸದ್ಯಕ್ಕಂತೂ ಶಾಲಾ–ಕಾಲೇಜುಗಳು ತೆರೆಯುವ ಲಕ್ಷಣಗಳಿಲ್ಲ. ಹೀಗಾಗಿಹಿಂದಿನ ವರ್ಷಗಳಷ್ಟು ಧ್ವಜಗಳು ಮಾರಾಟ ಆಗಲಿಕ್ಕಿಲ್ಲ ಎಂಬ ಆತಂಕವೂ ಸಂಸ್ಥೆಯನ್ನು ಕಾಡುತ್ತಿದೆ.

ಎಲ್ಲ ಸರ್ಕಾರಿ ಕಚೇರಿಗಳು, ಸಂಘ-ಸಂಸ್ಥೆಗಳ ಕಟ್ಟಡದ ಮೇಲೆ2x3 ಅಡಿ ಅಳತೆಯ ರಾಷ್ಟ್ರಧ್ವಜ ಬಳಸುವುದರಿಂದ ಆ ಅಳತೆಯ ಧ್ವಜಕ್ಕೆ ಹೆಚ್ಚಿನ ಬೇಡಿಕೆಯಿದೆ. ಧ್ವಜಗಳಿಗೆ ಅಳತೆಯ ಆಧಾರದ ಮೇಲೆ ₹3 ರಿಂದ ಹಿಡಿದು ₹24,000ರವರೆಗೆ ಬೆಲೆ ನಿಗದಿ ಮಾಡಲಾಗಿದೆ.

ಕಳೆದ ಐದು ವರ್ಷಗಳಲ್ಲಿ ರಾಷ್ಟ್ರಧ್ವಜಗಳ ಮಾರಾಟದಲ್ಲಿ ಏರಿಕೆಯಾಗುತ್ತಲೇ ಬಂದಿದೆ. 2019 ರ ಮಾರ್ಚ್‌ನಿಂದ ಜುಲೈವರೆಗೆ ₹35 ಲಕ್ಷ ಮೌಲ್ಯದ ಧ್ವಜಗಳನ್ನು ಮಾರಾಟ ಮಾಡಲಾಗಿತ್ತು. 2020ರ ಜುಲೈ ಎರಡನೇ ವಾರದ ವೇಳೆಗೆ ₹ 22 ಲಕ್ಷದಷ್ಟು ಮೌಲ್ಯದ ಧ್ವಜಗಳನ್ನು ಮಾರಾಟ ಮಾಡಲಾಗಿದೆ.

ತಯಾರಿಕೆಯಲ್ಲಿಯೂ ಕುಸಿತ
ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಸಂಘದಲ್ಲೂ ಧ್ವಜ ತಯಾರಕರಿಗೆ ಕೊರೊನಾ ಭೀತಿ ಕಾಡುತ್ತಿದೆ. ಇದರಿಂದ ಕೆಲವರು ಕೆಲಸಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಇನ್ನೂ ಕೆಲವರಿಗೆ ಸಂಘದಿಂದಲೇ ವಾಹನ ವ್ಯವಸ್ಥೆ ಮಾಡಲಾಗಿದೆ. ಬಸ್‌ಗಳ ಸಂಚಾರ ಕಡಿಮೆ ಇರುವುದರಿಂದ ಬೇಗ ಮನೆಗೆ ತೆರಳುತ್ತಾರೆ. ಇದರಿಂದ ಧ್ವಜಗಳ ತಯಾರಿಕೆಯ ಪ್ರಮಾಣ ತಗ್ಗಿದೆ ಎಂದು ಮಠಪತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT