ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಂಜಾ’ ತಯಾರಿಸುವ 4ನೇ ತಲೆಮಾರು

ಮೊಹರಂ: ಸಾನಿಗರ ಮನೆತನದ ಪಂಜಾಗಳಿಗೆ ರಾಜ್ಯದಾದ್ಯಂತ ಬೇಡಿಕೆ
Last Updated 20 ಆಗಸ್ಟ್ 2021, 7:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾವೈಕ್ಯ ಸಾರುವ ವಿಶಿಷ್ಟ ಆಚರಣೆ ಮೊಹರಂ. ಹಿಂದೂ ಹಾಗೂ ಮುಸ್ಲಿಮರ ಓಣಿಗಳಲ್ಲೂ ಪಂಜಾ ಅಥವಾ ಅಲೈದೇವ್ರು ಎಂದು ಕರೆಯಲಾಗುವ ದೇವರ ಮೂರ್ತಿಗಳನ್ನು ಸ್ಥಾಪಿಸುವುದು ಈ ಆಚರಣೆಯ ವಿಶೇಷ. ಇಲ್ಲಿನ ಬಮ್ಮಾಪುರ ಚಿತ್ರಗಾರ ಓಣಿಯ ಜಾವೀದ್ ಸಾನಿಗರ ಅವರ ಮನೆತನ, ನಾಲ್ಕು ತಲೆಮಾರುಗಳಿಂದ ಈ ಪಂಜಾಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದೆ.

ಪವಿತ್ರ ಕಾರ್ಯ ಎಂದು ಈ ಕಸುಬು ಮುಂದುವರಿಸಿಕೊಂಡು ಬಂದಿರುವ ಮನೆತನವುಬೀ ಫಾತಿಮಾ, ಮೌಲಾಅಲಿ, ಹಸನ್ ಹುಸೇನ್, ಅಬ್ಬಾಸ್ ಅಲಿ, ಅಸ್ಗರ್ ಅಲಿ, ಅಕ್ಬರ್ ಅಲಿ, ಇಮಾಮ್ ಜಾದೆ, ಬಾರಾ ಇಮಾಮ್, ಕಾಸೀಂ ದೂಲೆ ಅವರು ಪಂಜಾಗಳನ್ನು ತಯಾರಿಸುತ್ತಾರೆ. ರಾಜ್ಯದವರಷ್ಟೇ ಅಲ್ಲದೆ, ಹೊರ ರಾಜ್ಯಗಳ ಭಕ್ತರು ಸಹ ಇವರಿಂದ, ಪಂಜಾಗಳನ್ನು ಮಾಡಿಸಿಕೊಂಡು ಹೋಗುತ್ತಾರೆ.

‘ಮುತ್ತಜ್ಜ ಕೋಕಾಕ್ ಶಾ, ಅಜ್ಜ ಇಬ್ರಾಹಿಂ ಸಾಬ್ ಸಾನಿಗರ, ಅಪ್ಪ, ಶೇಖರ್ ಸಾಬ್‌ ಸಾನಿಗರ ಅವರ ಕಾಲದಿಂದ ಪಂಜಾಗಳನ್ನು ತಯಾರಿಸಿಕೊಂಡು ಬಂದಿದ್ದೇವೆ. ನಮ್ಮದು ನಾಲ್ಕನೇ ತಲೆಮಾರು. ಅಣ್ಣ ಜಾಕೀರ್ ಹೈಮದ್ ಹಾಗೂ ತಮ್ಮ ಮಹಮದ್ ಗೌಸ್ ಅವರೊಂದಿಗೆ ಪಂಜಾಗಳನ್ನು ತಯಾರಿಸುವ ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಜೊತೆಗೆ, ದೇವರ ಮೂರ್ತಿಯ ಪ್ರಭಾವಳಿ ಮಾಡಿ ಕೊಡುತ್ತೇವೆ’ ಎಂದು ಜಾವೇದ್ ಸಾನಿಗರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಗರಿಷ್ಠ 3 ತಿಂಗಳು ಬೇಕು

‘ವರ್ಷಕ್ಕೆ ಕನಿಷ್ಠ 15ರಿಂದ 20 ಪಂಜಾಗಳನ್ನು ಮಾಡುತ್ತೇವೆ. ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ಕಡಿಮೆ ಆರ್ಡರ್‌ಗಳು ಸಿಕ್ಕಿವೆ. ಭಕ್ತರು ವರ್ಷಕ್ಕೂ ಮುಂಚೆಯೇ ಬಂದು ತಮಗೆ ಬೇಕಾದ ಹೆಸರಿನ ಹಾಗೂ ಅಳತೆಯ ಪಂಜಾಗೆ ಆರ್ಡರ್ ಕೊಟ್ಟು ಹೋಗುತ್ತಾರೆ. ಸಣ್ಣ ಪಂಜಾ ತಯಾರಿಸಲು ಕನಿಷ್ಠ ಹದಿನೈದು ದಿನ ಹಿಡಿದರೆ, ದೊಡ್ಡ ಅಳತೆಗೆ ಮೂರು ತಿಂಗಳು ಬೇಕಾಗುತ್ತದೆ. ಅದಕ್ಕೆಬೇಕಾದ ಸ್ಟೀಲ್ ಮತ್ತು ಹಿತ್ತಾಳೆ ಸಾಮಗ್ರಿಯನ್ನು ಬೆಳಗಾವಿಯಿಂದ ತರಿಸಿಕೊಳ್ಳುತ್ತೇವೆ. ಮಹಾರಾಷ್ಟ್ರದ ಮುಂಬೈ, ಗುಜರಾತ್‌ನ ಅಹಮದಾಬಾದ್‌ನವರು ಸೇರಿದಂತೆ ಕರ್ನಾಟಕ ವಿವಿಧ ಜಿಲ್ಲೆಗಳ ಭಕ್ತರು ನಮ್ಮಿಂದ ಪಂಜಾಗಳನ್ನು ಮಾಡಿಸಿಕೊಂಡು ಹೋಗುತ್ತಾರೆ’ ಎಂದು ತಿಳಿಸಿದರು.

‘ಶುಕ್ರವಾರದಂದು ನಮಾಜ್ ಸಲ್ಲಿಸಿ ಪೂಜೆಯೊಂದಿಗೆ ಪಂಜಾದ ಕೆಲಸ ಆರಂಭಿಸುತ್ತೇವೆ.ಅಮಾವಾಸ್ಯೆ, ಚಂದ್ರಗ್ರಹಣ, ಸೂರ್ಯಗ್ರಹಣದಂದು ಭಕ್ತರು ಹೇಳಿದ ದೇವರ ಹೆಸರನ್ನು ಪಂಜಾ ಹಾಳೆ ಮೇಲೆ ಬರೆಯುತ್ತೇವೆ. ಆಗ ಅದಕ್ಕೆ ದುಷ್ಟಶಕ್ತಿ ನಿವಾರಿಸುವ ಶಕ್ತಿ ಬರುತ್ತದೆ. ಬೇರೆ ಸಂದರ್ಭದಲ್ಲಿ ಹಾಕಿದರೆ ಅಷ್ಟೊಂದು ಶಕ್ತಿ ಇರುವುದಿಲ್ಲ ಎಂದು ಹಿರಿಯರು ಹೇಳುತ್ತಿದ್ದರು. ನಾವೂ ಅದನ್ನೇ ಮುಂದುವರಿಸಿಕೊಂಡು ಬಂದಿದ್ದೇವೆ’ ಎಂದರು.

ಹೊರಳು ಹಾದಿಯಲ್ಲಿ ಕಸುಬು

ಪಂಜಾ ತಯಾರಿಸುವ ಸಾನಿಗರ ಮನೆತನದ ಕುಲ ಕಸುಬು ಈಗ ಹೊರಳು ಹಾದಿಯಲ್ಲಿದೆ. ನಿರ್ದಿಷ್ಟ ಮನೆತನದವರೇ ಮಾಡುತ್ತಿದ್ದ ಪಂಜಾಗಳನ್ನು ಈಗ ಬೇರೆಯವರೂ ತಯಾರಿಸಿ ಮಾರಾಟ ಮಾಡಲಾರಂಭಿಸಿದ್ದಾರೆ. ಇದರಿಂದಾಗಿ, ಅದನ್ನೇ ಕಸುಬಾಗಿಸಿಕೊಂಡವರು ಪರ್ಯಾಯ ದುಡಿಮೆಯತ್ತ ಮುಖ ಮಾಡುವ ಸ್ಥಿತಿ ಬಂದಿದೆ.

‘ನಮ್ಮ ತಂದೆಯ ಕಾಲದವರೆಗೂ ಇದೇ ಕಸುಬಿನಿಂದ ಕುಟುಂಬ ನಡೆದುಕೊಂಡು ಬಂದಿದೆ. ಈಗ ಎಲ್ಲವೂ ಬದಲಾಗಿದೆ. ಬಾಂಡೆ ಅಂಗಡಿಯಲ್ಲೂ ಪಂಜಾಗಳು ಸಿಗುತ್ತವೆ. ಹಾಗಾಗಿ, ಇದನ್ನೇ ನಂಬಿಕೊಂಡು ಬದುಕುವುದು ಕಷ್ಟವಾಗಿದೆ. ನಮಗೂ ಮಕ್ಕಳಿದ್ದಾರೆ. ಅವರ ಓದಿನ ಖರ್ಚು ಸೇರಿದಂತೆ, ಈಗಿನ ಜೀವನ ನಿರ್ವಹಣೆ ವೆಚ್ಚವೂ ಹೆಚ್ಚಾಗಿದೆ’ ಎಂದು ಜಾವೇದ್ ಸಾನಿಗರ ತಮ್ಮ ಸ್ಥಿತಿಯನ್ನು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT