ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ ಕಿಮ್ಸ್ ವೈದ್ಯ ಹೆಸರಿನಲ್ಲಿ ₹60 ಸಾವಿರ ಪಡೆದು ವಂಚನೆ

Published 18 ಡಿಸೆಂಬರ್ 2023, 16:08 IST
Last Updated 18 ಡಿಸೆಂಬರ್ 2023, 16:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕಿಮ್ಸ್ ವೈದ್ಯ ರಾಮಲಿಂಗಪ್ಪ ಅಂಟರತಾನಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದಿರುವ ಅಪರಿಚಿತ ವ್ಯಕ್ತಿಗಳು, ಸೊಲಾಪುರದ ಡಾ.ಎಸ್.ಪಿ.ಸರದೇಸಾಯಿ ಎಂಬುವರಿಂದ ₹60 ಸಾವಿರ ಪಡೆದು ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಖಾತೆಯ ಡಿಪಿಗೆ ರಾಮಲಿಂಗಪ್ಪ ಅವರ ಭಾವಚಿತ್ರ ಹಾಕಿರುವ ಆರೋಪಿಗಳು, ಹಣಕ್ಕೆ ಬೇಡಿಕೆ ಇಟ್ಟು ಪೋಸ್ಟ್‌ ಮಾಡಿದ್ದಾರೆ. ಇದನ್ನು ನಂಬಿರುವ ಎಸ್.ಪಿ.ಸರದೇಸಾಯಿ ಅವರು ಫೋನ್‌ಪೇ ಮೂಲಕ ಹಣ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

₹2.05 ಲಕ್ಷ ವಂಚನೆ: ಖಾಸಗಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ನಂಬಿಸಿ ನವನಗರದ ಬಸವ ಲೇಔಟ್‌ನ ಪ್ರೀತಿ ಮಠಪತಿ ಎಂಬುವರಿಗೆ ₹ 2.05 ಲಕ್ಷ ವಂಚಿಸಲಾಗಿದೆ.

ಚೌಬಲಿ ಶೇಟ್‌ ಎಂಬಾತ ತನ್ನ ಇವಿಗೋ ಫಾಸ್ಟ್ ಚಾರ್ಜಿಂಗ್ ಕಂಪನಿಯಲ್ಲಿ ಚೈನ್‌ ಸಿಸ್ಟಮ್ ಮಾದರಿಯಲ್ಲಿ ವಿವಿಧ ಯೋಜನೆ ಅಡಿ ಹೂಡಿಕೆ ಮಾಡಿದರೆ ಹಣ ದ್ವಿಗುಣ ಮಾಡಿಕೊಡಲಾಗುವುದು ಎಂದು ಪ್ರೀತಿ ಅವರಿಗೆ ಕಂಪನಿಯ ವೆಬ್‌ಸೈಟ್‌ ಲಿಂಕ್‌ ಕಳಿಸಿ, ಅವರ ಹೆಸರಿನಲ್ಲಿ ಖಾತೆ ತೆರದಿದ್ದಾನೆ. ನಂತರ ಲಾಭಾಂಶದ ಹಣ ನೀಡಿ ನಂಬಿಸಿದ್ದಾನೆ.

ಇದನ್ನು ನಂಬಿರುವ ಪ್ರೀತಿ ಅವರು ಹಂತಹಂತವಾಗಿ ಹಣ ಹೂಡಿಕೆ ಮಾಡಿದ್ದಾರೆ. ನಂತರ ವೆಬ್‌ಸೈಟ್‌ ಲಾಕ್ ಮಾಡಿ ಹಣ ಹಿಂದಿರುಗಿಸದೆ ವಂಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೊ: ಇಲ್ಲಿನ ಹಳೇ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಲೋಕೇಶ ರಾವ್ ಮತ್ತು ಶಾಂತಿ ಅವರು ಆತ್ಮಹತ್ಯೆಗೂ ಮುನ್ನ, ‘ನಮ್ಮ ಸಾವಿಗೆ ನಾವೇ ಕಾರಣ. ಆಟೊ ಚಾಲಕನ ತಪ್ಪಿಲ್ಲ’ ಎಂದು ಸೆಲ್ಫಿ ವಿಡಿಯೊ ಮಾಡಿದ್ದು, ಘಟನೆಗೆ ಅವರ ಅಕ್ರಮ ಸಂಬಂಧ ಕುಟುಂಬದವರಿಗೆ ತಿಳಿದಿದ್ದೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನ ಪೀಣ್ಯ ಎರಡನೇ ಹಂತದ ನಿವಾಸಿಗಳಾದ ಇವರು, ಭಾನುವಾರ ನಗರದ ಆಟೊ ಚಾಲಕ ಮಾರುತಿ ಜಾಧವ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಲೋಕೇಶ ತನ್ನ ಪತ್ನಿ ಪಾರ್ವತಿ ಅವರ ತಂಗಿ ಶಾಂತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಷಯ ಪತ್ನಿಗೆ ತಿಳಿಯುತ್ತಿದ್ದಂತೆ ಹುಬ್ಬಳ್ಳಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ಸೋಮವಾರ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.

ತಂದೆಗೆ ಚಾಕು ಇರಿದ ಮಗ: ನಗರದ ಗೋಪನಕೊಪ್ಪದ ಹರಿಜನಕೇರಿಯಲ್ಲಿ ಹಣದ ವಿಚಾರವಾಗಿ ಮಗ ತಂದೆಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಆರೋಪಿ ಉಮೇಶನನ್ನು ಪೊಲೀಸರು ಬಂಧಿಸಿದ್ದಾರೆ.

‌ಆನಂದ ಹೊಸಮನಿ ಚಾಕು ಇರಿತಕ್ಕೆ ಒಳಗಾದವರು. ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಲ ತೀರಿಸಲು ₹3 ಲಕ್ಷ ಕೊಡಿಸುವಂತೆ ಆರೋಪಿ ಉಮೇಶ ತನ್ನ ತಾಯಿ ರೇಣುಕಾ ಹೊಸಮನಿ ಅವರನ್ನು ಪೀಡಿಸಿದ್ದಾನೆ. ಬಳಿಕ ತಂದೆಯೊಂದಿಗೂ ಜಗಳವಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಆತ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT