ಶುಕ್ರವಾರ, ಡಿಸೆಂಬರ್ 3, 2021
26 °C
ಹಿಂದೆ ತೈಲ ಬೆಲೆ ಏರಿಕೆಯಾದಾಗ ಬೀದಿಗೆ ಬಂದು, ಕಾಂಗ್ರೆಸ್‌ಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದರು: ಟೀಕೆ

‘ತೈಲ ಬೆಲೆ ಏರಿಕೆ: ಈಗ ಆರ್‌ಎಸ್‌ಎಸ್‌ ಎಲ್ಲಿದೆ?’: ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಈ ಹಿಂದೆ ಆರ್‌ಎಸ್‌ಎಸ್‌ ನವರು ತೈಲ ಬೆಲೆ ಏರಿಕೆಯಾದಾಗ ಬೀದಿಗೆ ಬಂದು, ಕಾಂಗ್ರೆಸ್‌ಗೆ ಬಾಯಿಗೆ ಬಂದಂತೆ  ಬಯ್ಯುತ್ತಿದ್ದರು. ಈಗ ಎಲ್ಲಿ ಹೋಗಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಟ್ಲರ್‌ ರೀತಿಯ ಆಡಳಿತ ದೇಶದಲ್ಲಿದೆ. ತಾವು ಏನೇ ಮಾಡಿದರೂ ಜನರು ಮತ ನೀಡುತ್ತಾರೆ ಎಂದು ಬಿಜೆಪಿ ಭಾವಿಸಿದಂತಿದೆ. ಸಮಯ ಬಂದಾಗ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

‘ಮೋದಿ ಅವರು ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಏಳು ವರ್ಷದ ಅವಧಿಯಲ್ಲಿ ಅವರು 15 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ, ಬಹುತೇಕರು ಇರುವ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿಯಿವೆ. ಅವುಗಳನ್ನು ಭರ್ತಿ ಮಾಡಿಕೊಂಡರೆ 62 ಲಕ್ಷ ಮಂದಿಗೆ ಉದ್ಯೋಗ ನೀಡಬಹುದಿತ್ತು’ ಎಂದು ಹೇಳಿದರು.

‘ಜಿಎಸ್‌ಟಿ ಪರಿಹಾರಕ್ಕೆ ಸಂಬಂಧಿಸಿ ರಾಜ್ಯಕ್ಕೆ ಕೇಂದ್ರದಿಂದ ₹20 ಸಾವಿರ ಕೋಟಿಗೂ ಅಧಿಕ ಮೊತ್ತ ಬರಬೇಕು. ಆದರೆ, ಅದನ್ನು ಕೇಳುವವರೇ ಇಲ್ಲವಾಗಿದೆ’ ಎಂದರು.

‘ಉಪ ಚುನಾವಣೆ ನಡೆಯುವ ಎರಡು ಕ್ಷೇತ್ರಗಳಲ್ಲಿ ಹಣದ ಹೊಳೆ ಹರಿಯುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರಿಗೂ ಗೊತ್ತಿದೆ. ಇಂತಹ ಸಂದರ್ಭದಲ್ಲಿ ಸಿಬಿಐ, ಆದಾಯ ತೆರಿಗೆ ಇಲಾಖೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಧಿಕಾರ ದುರುಪಯೋಗ ಪಡೆಸಿಕೊಳ್ಳುವುದೇ ಅವರ ಕಾಯಕವಾಗಿದೆ’ ಎಂದು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು