ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಅದ್ಧೂರಿ ಮೆರವಣಿಗೆ; ಗಣಪಗೆ ವಿದಾಯ

ಹುಬ್ಬಳ್ಳಿ ಗಣೇಶೋತ್ಸವಕ್ಕೆ ತೆರೆ; ಸಂಭ್ರಮಿಸಿದ ಯುವಕರು
Published 28 ಸೆಪ್ಟೆಂಬರ್ 2023, 16:02 IST
Last Updated 28 ಸೆಪ್ಟೆಂಬರ್ 2023, 16:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಣೇಶೋತ್ಸವಕ್ಕೆ ಹೆಸರಾದ ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಗಳನ್ನು ಗುರುವಾರ ಅದ್ಧೂರಿಯಾಗಿ ಮೆರವಣಿಗೆ ನಡೆಸಿ ವಿಸರ್ಜಿಸುವ ಮೂಲಕ ಪ್ರಸ್ತುತ ವರ್ಷದ ಗಣೇಶ ಹಬ್ಬಕ್ಕೆ ತೆರೆ ಎಳೆಯಲಾಯಿತು. ಮಧ್ಯಾಹ್ನ 2ರ ವೇಳೆ ಆರಂಭವಾದ ವಿಸರ್ಜನಾ ಮೆರವಣಿಗೆ ತಡರಾತ್ರಿವರೆಗೂ ನಡೆಯಿತು.

ದಾಜಿಬಾನ್‌ ಪೇಟೆಯಲ್ಲಿ ಪ್ರತಿಷ್ಠಾಪಿಸಿದ್ದ 25 ಅಡಿ ಎತ್ತರದ ‘ಹುಬ್ಬಳ್ಳಿ ಕಾ ರಾಜಾ’ ಗಣೇಶ ಮೂರ್ತಿ ಹಾಗೂ ಮರಾಠಾಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ ‘ಹುಬ್ಬಳ್ಳಿ ಕಾ ಮಹಾರಾಜಾ’ ಗಣಪತಿ ಸೇರಿದಂತೆ 400ಕ್ಕೂ ಹೆಚ್ಚು ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಒಂದೆಡೆ ಡಿಜೆ ಹಾಡು ಮೊಳಗಿದರೆ, ಮತ್ತೊಂದೆಡೆ ‘ಗಣಪತಿ ಬಪ್ಪಾ ಮೊರೆಯಾ, ಮಂಗಳಮೂರ್ತಿ ಮೊರೆಯಾ’, ‘ಗಜಾನನ ಮಹಾರಾಜ ಕೀ ಜೈ’ ಘೋಷಗಳು ಪ್ರತಿಧ್ವನಿಸುತ್ತಿದ್ದವು. ಡಿಜೆ, ಡಾಲ್ಬಿ ಅಬ್ಬರದ ಸದ್ದಿಗೆ ಯುವಕರು ಮನದಣಿಯೇ ಕುಣಿದು ಸಂಭ್ರಮಿಸಿದರು. ಜಾಂಝ್, ಪಂಚವಾದ್ಯ ಮೇಳಗಳು ಸಂಭ್ರಮ ಹೆಚ್ಚಿಸಿದ್ದವು. ಹಲವರು ಡೋಲು ಬಾರಿಸುತ್ತ ಹೆಜ್ಜೆಹಾಕಿದರೆ, ಮಹಿಳೆಯರು, ಯುವತಿಯರು ಭಜನೆ, ಭಕ್ತಿಗೀತೆ ಹಾಡುತ್ತ ಸಾಗಿದರು. ಗಣೇಶ ಮೂರ್ತಿಯ ಮೆರವಣಿಗೆ ಮನೆ ಎದುರಿಗೆ ಬರುತ್ತಿದ್ದಂತೆ ಜನರು ಪೂಜೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಈಡುಗಾಯಿ ಒಡೆದು ಭಕ್ತಿ ಅರ್ಪಿಸಿದರು.

ವಿಸರ್ಜನೆ ಅಂಗವಾಗಿ ಬೆಳಿಗ್ಗೆಯಿಂದಲೇ ಪೆಂಡಾಲ್‌ಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಕೆಲವೆಡೆ ಹೋಮಗಳನ್ನು ಮಾಡಲಾಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮವೂ ನಡೆಯಿತು. ಕೆಲವು ಸಮಿತಿಗಳು ಪೆಂಡಾಲ್‌ಗಳಲ್ಲಿ ಹಾಗೂ ಗಣೇಶಮೂರ್ತಿಗೆ ಅಲಂಕರಿಸಿದ್ದ ಆಭರಣ, ವಸ್ತುಗಳನ್ನು ಸವಾಲು ಕರೆದವು.

ದುರ್ಗದಬೈಲ್‌, ದಾಜಿಬಾನ್‌ಪೇಟೆ, ಮರಾಠಗಲ್ಲಿ, ಶೀಲವಂತರ ಓಣಿ, ಬಾನಿ ಓಣಿ, ಘಂಟಿಕೇರಿ, ಯಲ್ಲಾಪುರ ಓಣಿ, ವಿದ್ಯಾನಗರ, ಸಾಲ ಓಣಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಗಳ ಭವ್ಯ ಮೆರವಣಿಗೆ ನಡೆಯಿತು. ಅಂತಿಮ ಪೂಜೆ ಸಲ್ಲಿಸಿ ಇಂದಿರಾಗಾಜಿನ ಮನೆ ಹಿಂಭಾಗದ ಗಣೇಶಬಾವಿ ಹಾಗೂ ಹೊಸೂರು ಬಾವಿಯಲ್ಲಿ ಗಣೇಶಮೂರ್ತಿ ವಿಸರ್ಜಿಸಲಾಯಿತು. 

ಬಾವಿ ಸುತ್ತಮುತ್ತ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ, ಈಜು ಪರಿಣತರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT