ಹುಬ್ಬಳ್ಳಿ: ಗಣೇಶ ಪೆಂಡಾಲ್‌ಗಳಲ್ಲಿ ಅನಧಿಕೃತ ಜಾಹೀರಾತುಗಳಿಗೆ ನಿಷೇಧ, ಅನುಮತಿ ಪಡೆಯದೇ ನೃತ್ಯ ಮತ್ತು ಸ್ಪರ್ಧೆಗಳನ್ನು ಆಯೋಜಿಸುವಂತಿಲ್ಲ, ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ, ಪ್ರತಿ ಪೆಂಡಾಲ್‌ನಲ್ಲಿ ಡ್ರೋಣ್ ಕ್ಯಾಮೆರಾದಿಂದ ದೃಶ್ಯಾವಳಿ ಚಿತ್ರೀಕರಣ...
ಪ್ರಸ್ತುತ ವರ್ಷ ಮಹಾನಗರದಲ್ಲಿ ಶಾಂತಿಯುತ ಗಣೇಶೊತ್ಸವ ಆಚರಣೆಗೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಮುಂಜಾಗ್ರತಾ ಕ್ರಮವಾಗಿ ಕೈಗೊಂಡ ಪ್ರಮುಖ ಕ್ರಮಗಳಿವು.
ಇವುಗಳ ಜೊತೆಗೆ, ಪ್ಲಾಸ್ಟಿಕ್ ಮುಕ್ತ ಪೆಂಡಾಲ್ ಪ್ರದೇಶ, ಗಣೇಶ ದರ್ಶನಕ್ಕೆ ಸಾರ್ವಜನಿಕರಿಂದ ಶುಲ್ಕ ಪಡೆಯದೇ ಇರುವುದು, ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಮಾರ್ಗದ ಮಾಹಿತಿ ಸಂಗ್ರಹಿಸುವುದು, ಸಾರ್ವಜನಿಕ ಮೈದಾನಗಳಲ್ಲಿ ಪಟಾಕಿ ಮಾರಾಟಕ್ಕೆ ಷರತ್ತು ಬದ್ಧ ಅನುಮತಿ ನೀಡುವುದು, ವಾರ್ಡ್ ಮಟ್ಟದಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ ನಿಯೋಜಿಸುವ ಕುರಿತು ಯೋಜನೆ ರೂಪಿಸಲಾಗಿದೆ.
ಗಣೇಶೋತ್ಸವ ಸಮಿತಿಗಳಿಗೆ ನಿಯಮಾವಳಿಗಳ ಕುರಿತು ಮಾಹಿತಿ ನೀಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿವೆ. ವಲಯಾಧಿಕಾರಿಗಳ ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ, ಪರಿಶೀಲನೆಗೂ ಮುಂದಾಗಿವೆ.
ಕೆಲ ವರ್ಷಗಳಿಂದ ಕೆಲವು ಗಣೇಶ ಸಮಿತಿಗಳು ಪೆಂಡಾಲ್‌ಗಳಲ್ಲಿ ಅನಧಿಕೃತವಾಗಿ ಜಾಹೀರಾತುಗಳ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸುತ್ತಿದ್ದವು. ಅವು ಯುವ ಸಮುದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಹಾಗೂ ಪಾಲಿಕೆ ಆದಾಯಕ್ಕೂ ಕುತ್ತು ಬರುತ್ತವೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದವು. ಪ್ರಸ್ತುತ ವರ್ಷದಿಂದ ಪೆಂಡಾಲ್‌ಗಳಲ್ಲಿ ಅನಧಿಕೃತ ಜಾಹೀರಾತುಗಳಿಗೆ ನಿಷೇಧ ಹೇರಲಾಗಿದ್ದು, ಪಾಲಿಕೆಯಿಂದ ಪೂರ್ವಾನುಮತಿ ಪಡೆದ ಜಾಹೀರಾತುಗಳ ಬ್ಯಾನರ್, ಪ್ಲೆಕ್ಸ್ ಮಾತ್ರ ಅಳವಡಿಸಬೇಕೆಂದು ಸಮಿತಿಗಳಿಗೆ ಸೂಚಿಸಲಾಗಿದೆ.
ಆರೋಪಿಗಳ ಮಾಹಿತಿ ಸಂಗ್ರಹ: ಕಳೆದ ಮೂರು–ನಾಲ್ಕು ವರ್ಷಗಳಲ್ಲಿ ಉತ್ಸವದ ಸಂದರ್ಭ ನಡೆದಿರುವ ಅಪರಾಧ ಪ್ರಕರಣಗಳ ಮಾಹಿತಿ ಕಲೆಹಾಕಿರುವ ಪೊಲೀಸ್ ಕಮಿಷನರ್ ಶಶಿಕುಮಾರ್, ಅವುಗಳಲ್ಲಿ ಭಾಗಿಯಾದವರ ವಿವರ ಪಡೆದು ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ. ಗಲಾಟೆ, ಗದ್ದಲಗಳು ನಡೆಸುವ ವ್ಯಕ್ತಿಗಳ ಮೇಲೆ ನಿಗಾ ಇಡಲು ಸೂಚಿಸಿದ್ದಾರೆ. ಗಣೇಶಮೂರ್ತಿ ಪ್ರತಿಷ್ಠಾಪನೆಯಾಗುವ ಸೂಕ್ಷ್ಮ ಪ್ರದೇಶಗಳ ಮಾಹಿತಿ ಪಡೆದಿರುವ ಅವರು, ಆ ಭಾಗಗಳಲ್ಲಿ ಪ್ರತ್ಯೇಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದಾರೆ.
ಶಾಂತಿ ಕದಡುವ ಕಿಡಿಗೇಡಿಗಳ ಹಾಗೂ ರೌಡಿಗಳಿಗೆ ಪೊಲೀಸರು, ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಎರಡು ದಿನಗಳಲ್ಲಿ ರೌಡಿ ಪರೇಡ್ ನಡೆಸಲು ಸಹ ತೀರ್ಮಾನಿಸಿದ್ದಾರೆ. ಅಹಿತಕರ ಘಟನೆಗಳು ಸಂಭವಿಸಿದರೆ ಆಯಾ ಠಾಣೆಯ ಇನ್‌ಸ್ಪೆಕ್ಟರ್‌ಗಳನ್ನೇ ಹೊಣೆಗಾರರನ್ನಾಗಿ ಮಾಡುವ ಎಚ್ಚರಿಕೆಯನ್ನು ಕಮಿಷನರ್ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ಪಾಲಿಕೆಯಿಂದ ಅನುಮತಿ ಪಡೆಯದೇ ಪೆಂಡಾಲ್‌ಗಳಲ್ಲಿ ಜಾಹೀರಾತು ಬ್ಯಾನರ್ ಫ್ಲೆಕ್ಸ್ ಅಳವಡಿಸುವಂತಿಲ್ಲ. ಆ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದುಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ–ಧಾರವಾಡ ಮಹಾನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.