ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಗಣೇಶೋತ್ಸವ: 31 ರೌಡಿಗಳ ಗಡಿಪಾರು

Published 15 ಸೆಪ್ಟೆಂಬರ್ 2023, 4:54 IST
Last Updated 15 ಸೆಪ್ಟೆಂಬರ್ 2023, 4:54 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ಈ ಬಾರಿ ನಡೆಯಲಿರುವ 10 ದಿನದ ಗಣೇಶೋತ್ಸವ ಶಾಂತಿ ಸೌಹಾರ್ದತೆಯಿಂದ ನಡೆಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಈಗಾಗಲೇ 31 ರೌಡಿಗಳನ್ನು ಗಡಿಪಾರು ಮಾಡಿದ್ದಾರೆ.

ಡಿಸಿಪಿ, ಎಸಿಪಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳು 700ಕ್ಕೂ ಹೆಚ್ಚು ರೌಡಿಗಳನ್ನು ಠಾಣೆಗಳಿಗೆ ಕರೆಸಿ ಎಚ್ಚರಿಕೆ ನೀಡಿದ್ದು, 16 ರೌಡಿಗಳಿಂದ ಬಾಂಡ್‌ ಬರೆಸಿಕೊಂಡು ₹4.70ಲಕ್ಷ ದಂಡ ವಿಧಿಸಿದ್ದಾರೆ. ಇಬ್ಬರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ, ಪದೇ ಪದೇ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ 1,150 ಮಂದಿ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿವಿಧ ಠಾಣೆಯ 900ಕ್ಕೂ ಹೆಚ್ಚು ಬೀಟ್‌ಗಳಲ್ಲಿ ಎಲ್ಲ ಸಮುದಾದವರನ್ನು ಒಟ್ಟುಗೂಡಿಸಿ, ಸಭೆಯಲ್ಲಿ ಶಾಂತಿಮಂತ್ರ ಬೋಧಿಸಿದ್ದಾರೆ. ಪ್ರೀತಿ–ವಿಶ್ವಾಸದಿಂದ ಹಬ್ಬ ಆಚರಿಸಲು ಸೂಚಿಸಿದ್ದು, ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಸಂಭವನೀಯ ಕಿಡಿಗೇಡಿಗಳ, ಮಾಹಿತಿ ಸಂಗ್ರಹಿಸಿ ಅವರ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ. ಬೀಟ್‌ನಲ್ಲಿ ಪೊಲೀಸರಿಗೆ ಮಾಹಿತಿ ನೀಡುವ ಯುವಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಾತ್ಮಿದಾರರನ್ನಾಗಿ ಮಾಡಿಕೊಂಡಿದ್ದಾರೆ.

5 ಡಿಸಿಪಿ, 15 ಎಸಿಪಿ, 50 ಪಿಐ, 150 ಪಿಎಸ್‌ಐ, 250 ಎಎಸ್‌ಐ, 2,000 ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಕಾನ್‌ಸ್ಟೆಬಲ್‌ ಹಾಗೂ 1,000 ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಮುಂದಾಗಿದೆ. 20 ಕೆಎಸ್‌ಆರ್‌ಪಿ ಮತ್ತು 5 ಕೇಂದ್ರ ಮೀಸಲು ಪಡೆ ತುಕಡಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗಣೇಶಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆವರೆಗೂ 5ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಬಂದೋಬಸ್ತ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

‘ಡಿಸಿಪಿ, ಎಸಿಪಿಗಳು ಇನ್‌ಸ್ಪೆಕ್ಟರ್‌, ಎಸ್‌ಐ, ಎಎಸ್‌ಐ ಜೊತೆ ಸಭೆ ನಡೆಸಿ ಕೆಲವು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಸೂಕ್ಷ್ಮ ಪ್ರದೇಶ, ಅತಿಸೂಕ್ಷ್ಮ ಪ್ರದೇಶಗಳ ಮಾಹಿತಿ ಸಂಗ್ರಹಿಸಿ ಅಲ್ಲಿರುವ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿರುವಂತೆ ಸೂಚಿಲಾಗಿದೆ. ಪೆಂಡಾಲ್‌ ಹಾಗೂ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸೂಚಿಸಿದ್ದು, ಅಹಿತಕರ ಘಟನೆಗಳು ನಡೆದರೆ ಸಮಿತಿಯವರನ್ನೇ ಜವಾಬ್ದಾರರನ್ನಾಗಿ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ಕಮಿಷನರ್‌ ರೇಣುಕಾ ಸುಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಅವಳಿನಗರದಲ್ಲಿ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಈದ್ ಮೀಲಾದ್ ಆಚರಿಸಬೇಕು.‌ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು
– ರೇಣುಕಾ ಸುಕುಮಾರ, ಕಮಿಷನರ್ ಹು-ಧಾ ಮಹಾನಗರ
ಮೆರವಣಿಗೆ; ಬಿಗಿ ಬಂದೋಬಸ್ತ್‌
ಅವಳಿನಗರದ ಸುಮಾರು 900ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಬೃಹತ್‌ ಮೆರವಣಿಗೆ ಮೂಲಕ ಅದ್ಧೂರಿಯಾಗಿ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಾರೆ. ಪ್ರಸ್ತುತ ವರ್ಷ ಈದ್‌ ಮೀಲಾದ್‌ ಮತ್ತು ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಒಂದೇ ದಿನ(ಸೆ. 28) ನಡೆಯುವುದರಿಂದ ಪೊಲೀಸ್‌ ಇಲಾಖೆ ಮೆರವಣಿಗೆಗೆ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್‌ ಮಾಡಲು ನಿರ್ಧರಿಸಿದೆ. ಮೂರು ವರ್ಷಗಳ ಹಿಂದೆ ಗಣೇಶಮೂರ್ತಿ ವಿಸರ್ಜನೆ ವೇಳೆ 10ಕ್ಕೂ ಹೆಚ್ಚು ಚಾಕು ಇರಿತದ ಪ್ರಕರಣಗಳು ನಡೆದಿದ್ದು ಚರ್ಚೆಗೆ ಕಾರಣವಾಗಿತ್ತು.

ಮುಂಜಾಗ್ರತಾ ಕ್ರಮಗಳು

  • ಚನ್ನಮ್ಮ ವೃತ್ತ ಮತ್ತು ಈದ್ಗಾ ಮೈದಾನದ ಸುತ್ತ ಸಶಸ್ತ್ರ ಮೀಸಲು ಪಡೆ ಹಾಗೂ ಪೊಲೀಸ್‌ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್‌

  • ಗಣೇಶಮೂರ್ತಿ ವಿಸರ್ಜನಾ ಸ್ಥಳದಲ್ಲಿ ಬ್ಯಾರಿಕೇಡ್‌ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಅಗ್ನಿಶಾಮಕ ವಾಹನ ಆಂಬುಲೆನ್ಸ್‌ ಹಾಗೂ ಕ್ರೇನ್‌ ವ್ಯವಸ್ಥೆ

  • ಗಣೇಶಮೂರ್ತಿ ವಿಸರ್ಜನೆ ಸಂದರ್ಭ ಡ್ರೋನ್‌ ಕ್ಯಾಮೆರಾದಿಂದ ವಿಡಿಯೊ ಚಿತ್ರೀಕರಣ ಹಾಗೂ ಕಿಡಿಗೇಡಿಗಳ ಚಲನವಲನದ ಬಗ್ಗೆ ನಿಗಾ

  • ನಗರದ ಪ್ರಮುಖ ಬೀದಿ ಹಾಗೂ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ನಿಯಂತ್ರಣ ಕೊಠಡಿಯಿಂದ 24 ಗಂಟೆಯೂ ನಿಗಾ

  • ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ತಂಡ ರಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT