ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಜಾಗೃತಿ ಮೂಡಿಸುವ ಗಣೇಶಮೂರ್ತಿ

ಸಾಮಾಜಿಕ ಜಾಲತಾಣಗಳ ದುಷ್ಪರಿಣಾಮ, ಚಿಂತನ– ಪ್ರಚೋದಕ ಮಾದರಿ
Published : 13 ಸೆಪ್ಟೆಂಬರ್ 2024, 14:17 IST
Last Updated : 13 ಸೆಪ್ಟೆಂಬರ್ 2024, 14:17 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ನಗರದ ಬಹುತೇಕ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಪೆಂಡಾಲ್‌ಗಳಲ್ಲಿ ಗಣೇಶನನ್ನು ಪೌರಾಣಿಕ ರೂಪಕಗಳಲ್ಲಿ ನಿರ್ಮಿಸಿದ್ದರೆ, ವಿದ್ಯಾನಗರದ ಬಾಲಗಜಾನನ ಯುವಕ ಮಂಡಳಿ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ರೂಪಕದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದೆ. ಸಾರ್ವಜನಿಕರ ಗಮನ ಸೆಳೆದಿದೆ.

12 ಅಡಿ ಎತ್ತರದ ಗಣೇಶಮೂರ್ತಿ ಪ್ರತಿಷ್ಠಾಪಿಸಿ, ಅತಿಯಾದ ಮೊಬೈಲ್‌ ಬಳಕೆಯಿಂದಾಗುವ ಅನಾಹುತಗಳ ಕುರಿತು ಸಂದೇಶ ಸಾರಲಾಗಿದೆ. ಐದು ತಲೆಯ ಸರ್ಪ (ಒಂದೊಂದು ತಲೆಗೂ ಒಂದೊಂದು ಅಪ್ಲಿಕೇಷನ್‌) ಕುಟುಂಬವೊಂದನ್ನು ಸುತ್ತುಹಾಕಿದ್ದು, ಪುಸ್ತಕ ಓದುವ ಗಣಪತಿ ಕುಟುಂಬದ ರಕ್ಷಣೆಗೆ ಬರುವ ಚಿಂತನ ಪ್ರಚೋದಕ ಮೂರ್ತಿ ಅದಾಗಿದೆ. ಅಲ್ಲದೆ, ಮಂಟಪದ ಸುತ್ತೆಲ್ಲ ಪುಸ್ತಕ ಓದಲು ಪ್ರೇರೇಪಿಸುವ, ಜಾಲತಾಣಗಳನ್ನು ಮಿತವಾಗಿ ಬಳಸುವ ಕುರಿತು ಜಾಗೃತಿ ಬರಹದ ಫಲಕ ಅಳವಡಿಸಲಾಗಿದೆ.

ಸಾಮಾಜಿಕ ಜಾಲತಾಣ ಪರಿಚಯವಾಗುವ ಪೂರ್ವ ಬಾಲ್ಯದ ದಿನಗಳು ಹೇಗಿದ್ದವು, ಅದರ ನಂತರ ಬಾಲ್ಯದ ದಿನಗಳು ಹೇಗಾಗುತ್ತಿವೆ ಎನ್ನುವ ಕುರಿತ ಪೆಂಡಾಲ್‌ನ ಎರಡೂ ಗೋಡೆಗಳಿಗೆ ಬ್ಯಾನರ್‌ನಲ್ಲಿ ಚಿತ್ರ ಸಮೇತ ಮಾಹಿತಿ ನೀಡಲಾಗಿದೆ.

‘ಇತ್ತೀಚೆಗೆ ಮೊಬೈಲ್‌ ಬಳಕೆ ಹೆಚ್ಚಾಗುತ್ತಿದೆ. ಹಿಂದಿನ ಬಾಲ್ಯದ ಆಟಗಳೆಲ್ಲ ನಶಿಸುತ್ತಿವೆ. ಚಿನ್ನಿದಾಂಡು, ಮರಕೋತಿ, ಜೋಕಾಲಿ, ಗೋಲಿ, ಟೈರ್‌ ಓಡಿಸುವುದು ಅಪರೂಪವಾಗಿದೆ. ಊಟ ಮಾಡುವಾಗ ಮೊಬೈಲ್‌ ಬಳಸುವುದು, ಸ್ನೇಹಿತರು, ಸಂಬಂಧಿಗಳ ಜೊತೆ ಸಮಯ ಕಳೆಯದೆ ಮೊಬೈಲ್‌ನಲ್ಲಿಯೇ ಮುಳುಗುವುದು, ಪರಿಣಾಮ ಬಾಲ್ಯದಲ್ಲಿಯೇ ದೃಷ್ಟಿದೋಷ, ಬೆನ್ನುಹುರಿ ಬಾಗುವುದು ಹೀಗೆ ವಿವಿಧ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಂಡಳಿಯ ಅಧ್ಯಕ್ಷ ಅನೂಪ್‌ ನವಲೆ ಹೇಳಿದರು.

‘ಮೊಬೈಲ್‌ ಗೇಮ್‌ ಬಿಡಿ, ಮೈದಾನದಲ್ಲಿ ಆಟ ಆಡಿ’ ಫಲಕ ಅಳವಡಿಸಿ, ಅಲ್ಲಿ ಖೋಖೋ, ಕಬಡ್ಡಿ, ಬಾಸ್ಕೆಟ್‌ ಬಾಲ್‌, ಗೋಲಿ, ವಾಲಿಬಾಲ್‌ ಆಟಗಳನ್ನು ಆಡುತ್ತಿರುವ ಮಾದರಿ ಸಿದ್ಧಪಡಿಸಿ ಗಮನ ಸೆಳೆಯಾಗುತ್ತಿದೆ. 32 ಸದಸ್ಯರಿರುವ ಮಂಡಳಿ, 20 ನೇ ವರ್ಷದ ವಿಶೇಷವಾಗಿ ಸಾಮಾಜಿಕ ಜಾಲತಾಣದ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಮಾದರಿ ಸಿದ್ಧಪಡಿಸಿದೆ. ಇದಕ್ಕಾಗಿ ಎರಡು ತಿಂಗಳು ನಿರಂತರ ಕಾರ್ಯ ಮಾಡಿದ್ದೇವೆ. ಒಂಬತ್ತನೇ ದಿನಕ್ಕೆ ಸೆ. 15ರಂದು ವಿಸರ್ಜನಾ ಮೆರವಣಿಗೆ ನಡೆಯಲಿದೆ’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಸಮರ್ಥ ಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT